‘ಹೈಕೋರ್ಟ್ ಆದೇಶ’ ಎಂಬ ಸುಳ್ಳು ಕಾರಣ ಮುಂದಿಟ್ಟುಕೊಂಡು ಪ್ರಭುತ್ವದ ವಿರುದ್ಧ ನಡೆಸುವ ಪ್ರತಿರೋಧದ ಹೋರಾಟಗಳನ್ನು ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಮಾತ್ರ ಸೀಮಿತಗೊಳಿಸಿದ್ದು, ರಾಜ್ಯದ ಜನಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ‘ಹೋರಾಟದ ಹಕ್ಕಿಗಾಗಿ ಜನಾಂದೋಲನ’ ಶಾಸಕರ ಭವನದಲ್ಲಿ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಆದೇಶ ವಾಪಸ್ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
ಪ್ರಸ್ತಾವಿಕವಾಗಿ ಮಾತನಾಡಿದ ಕಾರ್ಮಿಕ ಹಕ್ಕುಗಳ ಹೋರಾಟಗಾರ್ತಿ ಮೈತ್ರೇಯಿ, “ಫ್ರೀಡಂ ಪಾರ್ಕಿನಲ್ಲಿ ಮಾತ್ರ ಹೋರಾಟ ಮಾಡಬೇಕು ಎಂದು ಕೋರ್ಟ್ ಹೇಳಿಲ್ಲ; ಬೆಂಗಳೂರು ಪೊಲೀಸ್ ಕಮೀಷನರ್ ಅವರಿಂದ ಆದೇಶ ಮಾಡಿಸಿದ್ದಾರೆ. ಈವರೆಗೆ ಪ್ರತಿಭಟನೆ ಮಾಡಬಾರದು ಎಂದು ಕೋರ್ಟಿನಿಂದ ಯಾವುದೇ ಆದೇಶ ಬಂದಿಲ್ಲ. ಈ ಆದೇಶವನ್ನು ವಾಪಸ್ ಪಡೆಯಬೇಕು, ಅದಕ್ಕಾಗಿ ನಾವು ಯಾವುದೇ ಕೋರ್ಟಿಗೆ ಹೋಗುವ ಅವಷ್ಯಕತೆ ಇಲ್ಲ” ಎಂದರು.
“ಪ್ರತಿಭಟನೆಯನ್ನು ಫ್ರೀಡಂ ಪಾರ್ಕಿಗೆ ಸೀಮಿತಗೊಳಿಸಿರುವುದು ಪ್ರಜಾಭುತ್ವದ ಮೇಲಿನ ದಾಳಿ, ಸರ್ಕಾರ ಈ ಆದೇಶವನ್ನು ವಾಪಸ್ ಪಡೆಯಬೇಕು. 250 ಕ್ಕಿಂತ ಹೆಚ್ಚಿನ ಜನರು ಪ್ರತಿಭಟನೆ ಮಾಡಿದರೆ ಮಾತ್ರ ಲೈಸೆನ್ಸ್ ತೆಗೆದುಕೊಳ್ಳಬೇಕು ಎಂದು ಹಿಂದೆ ಆದೇಶ ಇತ್ತು. ಆದರೆ, ಈಗ ಇಬ್ಬರು ಹೋರಾಟ ಮಾಡಿದರೂ ಲೈಸೆನ್ಸ್ ಪಡೆದುಕೊಳ್ಳಬೇಕು. ಪ್ರತಿಭಟನೆಗಳಿಗೆ ಅನುಮತಿ ನೀಡುವ ಅಥವಾ ನಿರಾಕರಿಸುವ ಹಕ್ಕನ್ನು ಸಂಪೂರ್ಣವಾಗಿ ಪೊಲೀಸರಿಗೆ ನೀಡಿದ್ದಾರೆ; ಇದು ಬದಲಾಗಬೇಕು. ಪ್ರತಿಭಟನಾ ಸ್ಥಳದಲ್ಲಿ ಪಾರ್ಕಿಂಗ್ ಇದೆಯಾ ಎಂದು ಪರಿಶೀಲಿಸಿ ಅನುಮತಿ ನೀಡುತ್ತಾರೆ. ಇದು ಪೊಲೀಸ್ ರಾಜ್ಯ ಆಗಿದೆ” ಎಂದು ಅಸಮಾಧಾನ ಹೊರಹಾಕಿದರು.
“ದೆಹಲಿಯ ಜಂತರ್ ಮಂತರ್‌ನಲ್ಲಿ ಹೋರಾಟಕ್ಕೆ ಹೋಗಬೇಕಾದರೆ ಮೆಟಲ್ ಡಿಟೆಕ್ಟರ್ ಪರಿಶೀಲನೆಗೆ ಒಳಗಾಗಬೇಕು. ಬೆಂಗಳೂರಿನಲ್ಲಿಯೂ ಹಾಗಾಗದಂತೆ ನಾವು ತಡೆಯಬೇಕು. ಬೇರೆಡೆ ಪ್ರತಿಭಟನೆ ಮಾಡದಂತೆ ಹೊರಡಿಸಿರುವ ಆದೇಶ ವಾಪಸ್ ಪಡೆಯಬೇಕು. ಈ ಆದೇಶದ ಆಧಾರದಲ್ಲಿ ಪ್ರತಿಭಟಿಸಿದ ಹಲವರ ಮೇಲೆ ಕೇಸ್ ದಾಖಲಾಗಿದೆ. ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ವಿರುದ್ದ ಪ್ರತಿಭಟಿಸಿದವರ ವಿರುದ್ಧವೂ ಕೇಸ್ ದಾಖಲಾಗಿದೆ. ಪ್ಯಾಲೆಸ್ತೀನ್ ಪರ ಹೋರಾಟ ಆಗಬಾರದು ಎಂದು ಆದೇಶ ನೀಡಿದ್ದಾರೆ. ಫ್ರೀಡಂ ಪಾರ್ಕಿನಲ್ಲೂ ಹೋರಾಟ ಮಾಡಲು ಬಿಡುತ್ತಿಲ್ಲ. ಈವರೆಗೆ ಹೋರಾಟಗಾರರ ಮೇಲೆ ದಾಖಲಾಗಿರುವ ಎಫ್ಐಆರ್ ವಾಪಸ್ ಪಡೆಯಬೇಕು. ಪೊಲೀಸ್ ದೌರ್ಜನ್ಯದ ಬಗ್ಗೆ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.
ಜೆಸಿಟಿಯು ಸಂಘಟನೆಯ ಕೆವಿ ಭಟ್ ಮಾತನಾಡಿ, “ಹಿಂದೆಲ್ಲಾ ನಾವು ವಿಧಾನಸೌಧದ ಮುಂದೆಯೇ ಸಾಕಷ್ಟು ಹೋರಾಟ ಮಾಡಿದ್ದೇವೆ. ಅಲ್ಲಿನ ಪಾರ್ಕ್, ಗಿಡ-ಮರಕ್ಕೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ನಮ್ಮನ್ನು ಕೆಆರ್ ಸರ್ಕಲ್‌ಗೆ ಸ್ಥಳಾಂತರಿಸಿದರು. ನಂತರ, ಮೈಸೂರ್ ಬ್ಯಾಂಕ್, ಟೌನ್ ಹಾಲ್ ಸೇರಿದಂತೆ ಹಲವೆಡೆ ಕಳಿಸಿದರು. ಈಗ ಎಷ್ಟೇ ಜನ ಇದ್ದರೂ ಅದನ್ನು ಫ್ರೀಡಂ ಪಾರ್ಕಿಗೆ ಸೀಮಿತಗೊಳಿಸಿದ್ದಾರೆ. ಹಿಂದಿನ ಸರ್ಕಾರದ ಈ ಆದೇಶವನ್ನು ಈಗಿನ ಸರ್ಕಾರ ವಾಪಸ್ ಪಡೆಯಬೇಕು. ಆದೇಶ ವಾಪಸ್ ಪಡೆಯುವಂತೆ ನಮ್ಮ ಸಂಘಟನೆಯಿಂದ ಪೊಲೀಸ್ ಆಯುಕ್ತರು ಸೇರಿದಂತೆ ಸಂಬಂಧಿಸಿದವರನ್ನು ಭೇಟಿ ಮಾಡಿ, ಸಭೆ ಕರೆಯುವಂತೆ ಮನವಿ ಮಾಡಿದ್ದೇವೆ. ಆದರೆ, ಅವರೆಲ್ಲರೂ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸುವ ನಿಟ್ಟಿನಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇಂದು ನಡೆಯುವ ದುಂಡು ಮೇಜಿನ ಸಭೆಯ ವಿಚಾರಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ” ಎಂದರು.
ಪೌರಕಾರ್ಮಿಕರ ಹಕ್ಕುಗಳ ಹೋರಾಟಗಾರ್ತಿ, ಹಿರಿಯ ಲೇಖಕಿ ದು. ಸರಸ್ವತಿ ಮಾತನಾಡಿ, “ದೇಹ ರಾಜಕಾರಣ, ಅತ್ಯಾಚಾರ, ಮಾರ್ಯಾದೆಗೇಡು ಹತ್ಯೆ ವಿರುದ್ಧ, ಪೌರ ಕಾರ್ಮಿಕರ ಪರ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ. ಇಂದು ಪ್ರಜಾಪ್ರಭುತ್ವ ಉಳಿದಿದ್ದರೆ ಅದು ಜನಪರ ಹೋರಾಟಗಳಿಂದ ಮಾತ್ರ ಎಂಬುದನ್ನು ಸರ್ಕಾರ ಮರೆಯಬಾರದು. ನಾವು ಮಾಡುತ್ತಿರುವ ಹೋರಾಟಗಳ ವಿಷಯ ನ್ಯಾಯೋಚಿತವಾಗಿತ್ತು. ಅದೇ ಕಾರಣಕ್ಕೆ ನಾವು ಧೈರ್ಯವಾಗಿ ಬೀದಿಗಿಳಿದು ಹೋರಾಟ ಮಾಡಿದ್ದೇವೆ” ಎಂದರು.

“ಯಾವುದು ಸರಿ ಇಲ್ಲವೋ ಅದನ್ನು ಪ್ರಶ್ನಿಸಲು, ನಮ್ಮ ಪ್ರತಿರೋಧ ದಾಖಲಿಸಿಲು ನಾವು ಪ್ರತಿಭಟನಾ ದಾರಿ ಬಳಸಿಕೊಂಡಿದ್ದೇವೆ. ನಮ್ಮ ಭಿನ್ನಮತ ದಾಖಲಿಸಲು ಪ್ರತಿಭಟನೆ ಮುಖ್ಯವಾಗುತ್ತದೆ, ಭಾರತೀಯತೆ ನಮ್ಮ ಧರ್ಮವಾದರೆ, ಸಂವಿಧಾನ ಧರ್ಮ ಗ್ರಂಥ. ‘ಸರ್ಕಾರ ನಮ್ಮ ಪ್ರತಿನಿಧಿಗಳು, ಅವರು ನಮ್ಮನ್ನು ಆಳುವವರು ಅಲ್ಲ’ ಎಂಬ ಗಾಂಧಿ ಹೇಳಿಕೆಯನ್ನು ಈಗಿನ ಕಾಂಗ್ರೆಸ್ ಸರ್ಕಾರ ನೆನೆಪಿಸಿಕೊಳ್ಳಬೇಕು” ಎಂದು ಹೇಳಿದರು.
“ಮರೆತು ಹೋಗಿರುವುದನ್ನು ನೆನಪಿಸುವುದು ಪ್ರಜಾಪ್ರಭುತ್ವದ ಕರ್ತವ್ಯ, ಅಧಿಕಾರಕ್ಕೆ ಏರಿದಾಗ ಮರೆಯುವ ಸಾಧ್ಯತೆ ಇರುವುದರಿಂದ, ಅದನ್ನು ನೆನೆಪಿಸಲು ಪ್ರತಿಭಟನೆ ಅನಿವಾರ್ಯ” ಎಂದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಮಾತನಾಡಿ, “ಇತ್ತೀಚಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಬೇಕು ಎಂಬ ಬಹು ದೊಡ್ಡ ಕೂಗು ಆರಂಭವಾಗಿದೆ. ಏಕೆಂದರೆ, ದೇಶದ ಕೇಂದ್ರ ಸರ್ಕಾರ ಹೇಗೆ ವರ್ತಿಸುತ್ತಿದೆ ಎಂಬುದನ್ನು ನೋಡಿದ್ದೇವೆ. ಕಾಂಗ್ರೆಸ್ ಪಕ್ಷ ತನ್ನ ನೀತಿಗಳಲ್ಲಿ ಎಷ್ಟೇ ಜನವಿರೋಧಿ ಆಗಿದ್ದರೂ, ಬಿಜೆಪಿ ಸೋಲಿಸಲು ಕಾಂಗ್ರೆಸ್ಸಿಗೆ ಅವಕಾಶ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರತದ ಜನ ಒಂದು ಮಹತ್ತರ ತೀರ್ಪು ನೀಡುವ ಮೂಲಕ ‘ಚಾರ್‌ಸೌ ಫಾರ್’ ಎಂದು ಅರಚುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ” ಎಂದು ಹೇಳಿದರು.
“ಆನೆಯನ್ನು ಕೆಡ್ಡದಲ್ಲಿ ಹಾಕಿ ಪಳಗಿಸಿದಂತೆ ಪ್ರಭುತ್ವ ಕೂಡ ಜನಸಾಮಾನ್ಯರು ಹಾಗೂ ಹೋರಾಟಗಳನ್ನು ಪಳಗಿಸುತ್ತಾರೆ. ಅದಕ್ಕೆ ಪೂರಕವಾಗಿ ಪೊಲೀಸ್ ಪವರ್ ಬಳಸುತ್ತೆ. ಅದಕ್ಕಾಗಿಯೇ ನಾವು ಅವರು ಹೇಳಿದ ಕಡೆ ಹೋಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಮಾನಸಿಕವಾಗಿ ನಾವು ಅದಕ್ಕೆ ಹೋಗ್ಗಿಕೊಂಡಿದ್ದೇವೆ” ಎಂದರು.
“ಕಳೆದ ನಾಲ್ಕು ದಶಕದಲ್ಲಿ ನಾವು ಹಲವಾರು ಹೋರಾಟಗಳನ್ನು ನೋಡಿದ್ದೇವೆ, ವಿಧಾನ ಸೌಧದ ಮೆಟ್ಟಿಲ ಮೇಲೆ ಪ್ರೊ. ನಂಜುಂಡಸ್ವಾಮಿ ಕ್ಯಾಕರಿಸಿ ಉಗಿಯುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸರ್ಕಾರವನ್ನು ನೋಡಿ ನಗುವ ಕಾರ್ಯಕ್ರಮವನ್ನೂ ಆಯೋಜಿಸಿದ್ದಾರೆ. ಹೈಕೋರ್ಟ್ ಜಡ್ಜ್ ಆದೇಶ ವಿರೋಧಿಸಿ ಕೋರ್ಟ್ ಆವರಣದಲ್ಲಿ ಪ್ರತಿಭಟನೆ ಮಾಡಿದ್ದೇವೆ. ನಂತರ ನಮ್ಮನ್ನು ಕೆ ಆರ್ ಸರ್ಕಲ್, ಬನ್ನಪ್ಪ ಪಾರ್ಕ್‌ಗೆ ಸ್ಥಾಳಾಂತರಿಸಿದರು. ಈಗ ಫ್ರೀಡಂ ಪಾರ್ಕಿಗೆ ಹಾಕಿದ್ದಾರೆ. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕು” ಎಂದು ಸಭೆಯ ಗಮನಕ್ಕೆ ತಂದರು.
“ಈ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದೆ. ಆದರೆ, ಅವರು ಕಡೆಗಣಿಸುತ್ತಿರುವುದು ಯಾಕೆ ಗೊತ್ತಿಲ್ಲ. ಪ್ರತಿರೋಧ ಮನುಷ್ಯರಿಗಷ್ಟೇ ಸಂಬಂಧಿಸಿದ್ದಲ್ಲ, ಬೀಜ ಕೂಡ ಭೂತಾಯಿಯ ಹೊಟ್ಟೆ ಸೀಳಿ ಬರುತ್ತೆ. ಹೋರಾಟ ಕೂಡ ಹೊಸತನ್ನು ಬಯಸುತ್ತೆ; ಪ್ರಭುತ್ವದ ಕಿವಿ ಯಾವಾಗ ಮಂದವಾಗುತ್ತದೆಯೋ, ಆಗ ನಾವು ಅವರನ್ನು ಎಚ್ಚರಿಸುತ್ತಾ ಇರಬೇಕು. ಫ್ರೀಡಂ ಪಾರ್ಕ್ ಈಗ ಯಾತನಾ ಶಿಬಿರ ಆಗಿದೆ.. ಅಲ್ಲಿ ಎಲ್ಲೆಡೆ ಬರೀ ಧಿಕ್ಕಾರ ಮಾತ್ರ ಕೇಳಿಸುತ್ತೆ. ಪ್ರಭುತ್ವ ನಮ್ಮನ್ನು ನಿರ್ವೀರ್ಯರನ್ನಾಗಿ ಮಾಡುತ್ತೆ.. ನಾವು ಎಚ್ಚರದಿಂದ ನಮ್ಮ ಹೋರಾಟಗಳನ್ನು ಮಾಡಿಕೊಂಡು ಹೋಗಬೇಕು” ಎಂದು ಹೇಳಿದರು.
ದುಂಡು ಮೇಜಿನ ಸಭೆಯಲ್ಲಿ ಖ್ಯಾತ ಅಂಕಣಕಾರ ಆಕಾರ್ ಪಟೇಲ್, ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ, ದಲಿತ ಮುಖಂಡ ಕಾರಳ್ಳಿ ಶ್ರೀನಿವಾಸ್, ಎಎಲ್‌ಎಫ್ ಸಂಸ್ಥೆಯ ವಿನಯ್ ಶ್ರೀನಿವಾಸ್ ಹಾಗೂ ಕಾರ್ಮಿಕ, ದಲಿತ, ಮಹಿಳಾ ಮತ್ತು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಇದ್ದರು.
ಇದನ್ನೂ ಓದಿ; ಬೇರೆ ಮಾಧ್ಯಮಗಳಿಗೆ ಹೋಲಿಸಿದರೆ ಡಿಜಿಟಲ್ ಮಾಧ್ಯಮ ಸತ್ಯ ತಿಳಿಸುತ್ತದೆ – ಸಿಎಂ ಸಿದ್ದರಾಮಯ್ಯ


