ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಚಿತ್ರರಂಗದ ಸದಸ್ಯರು ಹಾಗೂ ಮಹಿಳಾ ಸಂಘಟನೆಗಳ ಹಲವು ತಿಂಗಳುಗಳ ಒತ್ತಡಕ್ಕೆ ಮಣಿದಿರುವ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’, ಕೊನೆಗೂ “ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ” (posh act) ಸಮಿತಿ ರಚಿಸಿ ಆದೇಶ ಹೊರಡಿಸಿದೆ.
ಕೇರಳ ಚಿತ್ರರಂಗದ ಲೈಂಗಿಕ ದೌರ್ಜನ್ಯದ ಕುರಿತು ಜಸ್ಟೀಸ್ ಹೇಮಾ ಸಮಿತಿ ವರದಿ ನೀಡಿದ ಬಳಿಕ, ಕರ್ನಾಟಕದಲ್ಲಿ ಸಹ ಸಮಿತಿ ರಚಿಸಬೇಕು ಎಂಬ ಕೂಗು ಎದ್ದಿತ್ತು. ಆದರೆ, ಇದಕ್ಕೆ ಚಿತ್ರರಂಗದ ಪ್ರಮುಖರು ಆಸಕ್ತಿ ತೋರಿರಲಿಲ್ಲ. ಇದೀಗ, ಹಿರಿಯ ನಿರ್ದೇಶಕಿ ಕವಿತಾ ಲಂಕೇಶ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ.
ಖಾಯಂ ಸದಸ್ಯರಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು, ಸದಸ್ಯರಾಗಿ ಹಿರಿಯ ನಟಿ ಪ್ರಮೀಳಾ ಜೋಶಾಯ್, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ವಿಮಲಾ ಕೆ.ಎಸ್, ಹಿರಿಯ ವಕೀಲೆ ರಾಜಲಕ್ಷ್ಮಿ ಅಂಕಲಗಿ, ಟ್ರಾನ್ಸ್ ಜೆಂಡರ್ ಹೋರಾಟಗಾರರಾದ ಮಲ್ಲು ಕುಂಬಾರ್, ನಟಿ ಶೃತಿ ಹರಿಹರನ್, ಹಿರಿಯ ಪತ್ರಕರ್ತ ಮುರುಳೀಧರ್ ಖಜಾನೆ, ರಂಗಕರ್ಮಿ ಶಶಿಕಾಂತ್ ಯಡಹಳ್ಳಿ, ನಿರ್ಮಾಕಪಕರಾದ ಸಾರಾ ಗೋವಿಂದ್ ಸಮಿತಿಯಲ್ಲಿ ಇದ್ದಾರೆ.

ಈ ಬಗ್ಗೆ ‘ನಾನುಗೌರಿ.ಕಾಮ್’ ಜೊತೆಗೆ ಮಾತನಾಡಿದ ಕವಿತಾ ಲಂಕೇಶ್, “ಪಾಶ್ ಕಮಿಟಿ ರಚಿಸಬೇಕು ಎಂದು ಮಹಿಳಾ ಆಯೋಗದ ನಾಗಲಕ್ಷ್ಮಿ ಅವರೊಟ್ಟಿಗೆ ನಾವು ಹೋಗಿ ಒತ್ತಡ ಹಾಕಿದ್ದೆವು. ಇದಕ್ಕಾಗಿ ನಾವು ಕಳೆದ ಐದು ವರ್ಷಗಳಿಂದ ಎಷ್ಟೇ ಪ್ರಯತ್ನ ಮಾಡಿದರೂ ಆಗಿರಲಿಲ್ಲ; ಈಗ ಸಮಿತಿ ರಚಿಸಿರುವುದು ಸಂತಸ ತಂದಿದೆ” ಎಂದರು.
“ಈಗಷ್ಟೇ ಸಮಿತಿ ರಚನೆ ಆಗಿದೆ, ಇನ್ನಷ್ಟು ಕೆಲಸಗಳು ಬಾಕಿ ಇವೆ. ವಿಭಿನ್ನ ಕ್ಷೇತ್ರಗಳಿಂದ ಸದಸ್ಯರನ್ನು ನೇಮಕ ಮಾಡಿರುವುದು ನನಗೆ ಸಂತಸವಾಗಿದೆ. ದೌರ್ಜನ್ಯವಾದರೆ ನಾವು ಏನು ಮಾಡಬೇಕು ಎಂಬ ಬಗ್ಗೆ ಕೆಲಸ ಆರಂಭಿಸಬೇಕು. ಮೊದಲು ಅದಕ್ಕೊಂದು ಹೆಲ್ಪ್‌ಲೈನ್ ಆಗಬೇಕು. ಏಕೆಂದರೆ, ಯಾರೋ ದೂರು ಕೊಡಬೇಕು ಎಂದರೆ ಸಾಕಷ್ಟು ಗೊಂದಲದಲ್ಲಿ ಇರುತ್ತಾರೆ; ಮೊದಲಿನಿಂದಲೂ ಈ ಸಮಸ್ಯೆ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋದರೆ ಸಾಕಷ್ಟು ನಿರ್ಲಕ್ಷ್ಯ ಮಾಡುತ್ತಿದ್ದರು. ದೂರು ಬಂದರೆ ಏನು ಮಾಡಬಹುದು ಎಂದು ನಾವು ನೋಡಬೇಕು” ಎಂದು ಹೇಳಿದರು.

“ಸಮಿತಿಯಲ್ಲಿ ಟ್ರಾನ್ಸ್ ಜೆಂಡರ್ ಸಮುದಾಯದ ಮಲ್ಲು ಕುಂಬಾರ್ ಸೇರಿದಂತೆ ಬೇರೆಬೇರೆ ಕ್ಷೇತ್ರದ ಜನರಿದ್ದಾರೆ. ಕೆ.ಎಸ್. ವಿಮಲಾ ಮತ್ತು ರಾಜಲಕ್ಷ್ಮಿ ಅಂಕಲಗಿ ಮಹಿಳೆಯರ ಪರವಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ನಾವು ಸೂಚಿಸಿದ ಹೆಸರುಗಳನ್ನು ಒಪ್ಪಿಕೊಂಡು ಸಮಿತಿ ರಚಿಸಿದ್ದಾರೆ. ಸದ್ಯಕ್ಕಂತೂ ಕಮಿಟಿ ಚೆನ್ನಾಗಿದೆ ಎಂದು ನನಗೆ ಅನಿಸುತ್ತಿದೆ. ಕೆಲಸ ಚೆನ್ನಾಗಿ ಆಗುತ್ತದೆ ಎನ್ನುವ ವಿಶ್ವಾಸ ನನಗಿದೆ. ಇಷ್ಟು ದಿನ ಸಮಸ್ಯೆಗಳಾದರೆ ಅದನ್ನು ಕೇಳುವುದಕ್ಕೇ ಯಾರೂ ಇರಲಿಲ್ಲ” ಎಂದರು.
ಸಮಿತಿ ಸದಸ್ಯರಾದ ರಾಜಲಕ್ಷ್ಮಿ ಅಂಕಲಗಿ ಮಾತನಾಡಿ, “ಎಲ್ಲ ಅಸಂಘಟಿತ ವಲಯಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚಿಸಬೇಕು ಎಂಬ ಕಾನೂನಿದೆ. ಆದರೆ, ಚಲನಚಿತ್ರ ವಾಣಿಜ್ಯ ಮಂಡಳಿ ಸಮಿತಿ ರಚಿಸಿಲ್ಲ ಎಂಬ ದೂರು ಹಲವು ದಿನಗಳಿಂದ ಕೇಳಿಬರುತ್ತಿತ್ತು. ಕೇರಳದಲ್ಲಿ ಹೇಮಾ ಸಮಿತಿ ವರದಿ ಹೊರಗೆ ಬಂದ ಬಳಿಕ, ಇಲ್ಲಿಯೂ ಸಮಿತಿ ಆಗಲೇಬೇಕು ಎಂಬ ಒತ್ತಾಯ ಕೇಳಿಬಂದಿದ್ದವು. ಈಗ ವಾಣಿಜ್ಯ ಮಂಡಳಿ ಸಮಿತಿ ರಚಿಸಿ, ಹಲವು ಕ್ಷೇತ್ರಗಳ ಪ್ರಮುಖರನ್ನು ಸದಸ್ಯರನ್ನಾಗಿ ನೇಮಿಸಿದ್ದಾರೆ. ಇಂಥ ಸಮಿತಿ ರಚಿಸುವುದು ಅಗತ್ಯ” ಎಂದರು.
“ಮುಖ್ಯವಾಗಿ, ಇತ್ತೀಚಿನ ದಿನಗಳಲ್ಲಿ ಮೊದಲಿಗಿಂತಲೂ ಹೆಚ್ಚಾಗಿ ಕಲಾವಿದರು, ತಂತ್ರಜ್ಞರು ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಲು ಅನ್ಯ ರಾಜ್ಯಗಳಿಂದ ಇಲ್ಲಿಗೆ ಬರುತ್ತಿದ್ದಾರೆ. ಇತ್ತೀಚೆಗೆ ಫ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗಿದ್ದು, ಇಲ್ಲಿಗೆ ಕೆಲಸ ಮಾಡಲು ಬಂದವರ ರಕ್ಷಣೆ ಮಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ. ಈ ಎಲ್ಲವೂ ಗಮನದಲ್ಲಿಟ್ಟುಕೊಂಡು ಈಗ ಸಮಿತಿ ರಚನೆ ಆಗಿದೆ. ಪಾಶ್ ಕಮಿಟಿ ನಿಯಮಗಳ ಪ್ರಕಾರ, ಸಮಿತಿಯಲ್ಲಿ ಯಾರ್ಯಾರು ಇರಬೇಕು ಎಂದು ಗಮನದಲ್ಲಿ ಇಟ್ಟುಕೊಂಡು ಮಾಡಿದ್ದಾರೆ, ಇದು ಸ್ವಾಗತಾರ್ಹ” ಎಂದು ಹೇಳಿದರು.
ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ‘ಕರ್ನಾಟಕ ರಾಜ್ಯ ಮಹಿಳಾ ಆಯೋಗ’ದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ, “ಚಲನಚಿತ್ರ ವಾಣಿಜ್ಯ ಮಂಡಳಿ ಅಂತಿಮವಾಗಿ ಪಾಶ್ ಸಮಿತಿ ರಚಿಸಿರುವುದು ನನಗೆ ಸಂತಸ ತಂದಿದೆ. ನಿಯಮಗಳನ್ನು ಪಾಲನೆ ಮಾಡಿ ಸಮಿತಿ ರಚಿಸಿರುವುದಾಗಿ ನನಗೆ ಮೊದಲೇ ತಿಳಿಸಿದ್ದರು. ಈ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿಗೆ ಬರುವಂತೆ ನನ್ನನ್ನೂ ಕರೆದಿದ್ದರು. ಹೆಣ್ಣು ಮಕ್ಕಳ ರಕ್ಷಣೆ ಪ್ರಮುಖ ಆದ್ಯತೆಯಾಗಿರುವದರಿಂದ ನೀವು ಕಾಲ ದೂಡುವಂತೆ ಇಲ್ಲ ಎಂದು ನಾನು ಅವರಿಗೆ ಮೊದಲೇ ತಿಳಿಸಿದ್ದೆ; ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಹ ನಾನು ಪತ್ರ ಬರೆದಿದ್ದೆ” ಎಂದರು.
“ನಾನು ಪತ್ರಿಕಾಗೋಷ್ಠಿ ನಡೆಸಿದ ನಂತರ, ಅದನ್ನು ಗಂಭೀರವಾಗಿ ಪರಿಗಣಿಸಿ ಸಮಿತಿ ರಚಿಸಿದ್ದಾರೆ. ಇದು ಸ್ವಾಗತಾರ್ಹ, ಮೊದಲ ಬಾರಿಗೆ ಚಲನಚಿತ್ರೋದ್ಯಮದಲ್ಲಿ ಸಮಿತಿ ರಚನೆಯಾಗಿದೆ. ಚಿತ್ರರಂಗದಲ್ಲಿ ಕೆಲಸ ಮಾಡುವ ಯಾವುದೇ ಹೆಣ್ಣು ಮಗಳಿಗೆ ಲೈಂಗಿಕ ದೌರ್ಜನ್ಯ ನಡೆದರೆ, ಅಲ್ಲಿಯೇ ದೂರು ನೀಡಿ, ನ್ಯಾಯ ಪಡೆಯುವ ಪಾಶ್ ಕಮಿಟಿ ರಚನೆಯಾಗಿದೆ. ಹಣ್ಣು ಮಕ್ಕಳಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿರುವ ವಾಣಿಜ್ಯ ಮಂಡಳಿಗೆ ಅಭಿನಂಧಿಸುತ್ತೇನೆ” ಎಂದು ಹೇಳಿದರು.
“ಆರಂಭದಲ್ಲಿ ವಾಣಿಜ್ಯ ಮಂಡಳಿಯಲ್ಲಿ ಇದಕ್ಕೆ ಭಾರೀ ವಿರೋಧವಿತ್ತು. ನಾನು ಅಲ್ಲಿ ಪತ್ರಿಕಾಗೋಷ್ಠಿ ನಡೆಸಲು ಹೋದಾಗಲೂ ಸಹ ಅಪಸ್ವರವಿತ್ತು. ಜೋರಾಗಿ ಚೀರಾಡಿ, ಜಗಳ ಮಾಡಿ ಪಾಶ್ ಸಮಿತಿ ರಚನೆಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಏನೋ ಆಗುತ್ತದೆ ಎಂಬ ಕಾರಣಕ್ಕೆ ಅವರು ಸಮಿತಿ ರಚನೆಗೆ ಒಪ್ಪಿಕೊಂಡಿರಲಿಲ್ಲ. ಅವರು ಅರ್ಥ ಮಾಡಿಕೊಳ್ಳುವುದಕ್ಕೆ ಇಷ್ಟು ಕಾಲ ಬೇಕಾಯಿತು. ನಮ್ಮ ಕನ್ನಡದ ನಟಿಯರು ಹಾಗೂ ಉಳಿದವರಿಗೆ ದೌರ್ಜನ್ಯವಾದಾಗ ನ್ಯಾಯ ಪಡೆಯಲು ಅವರದ್ದೇ ತಾಯಿ ಸಂಸ್ಥೆಯಲ್ಲಿ ಕಮಿಟಿ ಇರಬೇಕು. ಅವರ ನಿರ್ಧಾರವನ್ನು ನಾನು ಸ್ವಾಗತ ಕೋರುತ್ತೇನೆ. ಚಲನಚಿತ್ರರಂಗದಲ್ಲಿ ಇದೊಂದು ಮೈಲಿಗಲ್ಲು” ಎಂದು ವಿವರಿಸಿದರು.
ಇದನ್ನೂ ಓದಿ; ತಾರಕಕ್ಕೇರಿದ ಯತ್ನಾಳ್-ವಿಜಯೇಂದ್ರ ವಾಗ್ಯುದ್ಧ : ದೆಹಲಿ ತಲುಪಿದ ಬಿಜೆಪಿ ಬಣ ಕದನ



Good decision.. true report will become from Mrs. Kavita Lankesh