ಡೆಹ್ರಾಡೂನ್: ಹೆಚ್ಚುತ್ತಿರುವ ಕೋಮು ಉದ್ವಿಗ್ನತೆ ಮತ್ತು ಅಲ್ಪಸಂಖ್ಯಾತ ವಿರೋಧಿ ಘಟನೆಗಳ ನಡುವೆ 50 ವರ್ಷ ಹಳೆಯ ಮಸೀದಿ ತೆರವುಗೊಳಿಸಲು ಉತ್ತರಾಖಂಡದ ಮಹಾಪಂಚಾಯತ್ ಭಾನುವಾರದಂದು ತೀರ್ಮಾನಿಸಿದೆ.
ಸುಮಾರು ಅರ್ಧ ಶತಮಾನದಷ್ಟು ಹಳೆಯದಾದ ಮಸೀದಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ವಿವಿಧ ಹಿಂದೂ ಬಲಪಂಥೀಯ ಸಂಘಟನೆಗಳು ‘ಮಹಾಪಂಚಾಯತ್’ ಆಯೋಜಿಸಿದ ನಂತರ ಉತ್ತರಕಾಶಿಯು ಉದ್ವಿಗ್ನಗೊಂಡಿದೆ. ಈ ಮಸೀದಿ ನಿರ್ಮಾಣವು ಅಕ್ರಮವೆಂದು ಪಂಚಾಯತ್ ಹೇಳಿದೆ.
ಉತ್ತರಕಾಶಿಯ ರಾಮಲೀಲಾ ಮೈದಾನದಲ್ಲಿ ಬಿಗಿ ಭದ್ರತೆಯ ನಡುವೆ “ದೇವಭೂಮಿ ವಿಚಾರ ಮಂಚ್” ಬ್ಯಾನರ್ ಅಡಿಯಲ್ಲಿ ನಡೆದ ಮಹಾಪಂಚಾಯತ್ ಅನ್ನು ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೆಲವು ಶಾಸಕರು ಉದ್ದೇಶಿಸಿ ಮಾತನಾಡಿದರು. ಆದಾಗ್ಯೂ, ಈ ಪಂಚಾಯತ್ ನಲ್ಲಿ ಸುಮಾರು 500 ಜನರು ಮಾತ್ರ ಭಾಗವಹಿಸಿದ್ದರು. ಒಂದು ತಿಂಗಳ ಅವಧಿಯಲ್ಲಿ ಮತ್ತೊಂದು ಮಹಾಪಂಚಾಯತ್ ಅನ್ನು ನಡೆಸಲು ತೀರ್ಮಾನಿಸಲಾಗಿದೆ.
ಜನಸಮೂಹವನ್ನುದ್ದೇಶಿಸಿ ಮಾತನಾಡಿದ ವಿವಾದಿತ ಬಿಜೆಪಿ ನಾಯಕ ಮತ್ತು ತೆಲಂಗಾಣ ಶಾಸಕ ಟಿ ರಾಜಾ ಸಿಂಗ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ “ಭೂ ಜಿಹಾದಿಗಳ” ವಿರುದ್ಧ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಕಲಿಯಬೇಕಿದೆ ಹಾಗೆಯೇ ಅವರ “ ಬುಲ್ಡೋಜರ್ ಸಂಸ್ಕೃತಿ’ಯಿಂದ ಸ್ಫೂರ್ತಿ ಪಡೆಯಬೇಕಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ‘ಚಾಯ್ ಪೇ ಚರ್ಚಾ’ ಮಾಡಬೇಕು. ಯುಪಿಯಲ್ಲಿ ಜಿಹಾದಿಗಳಿಗೆ ಅವರು ಪಾಠ ಕಲಿಸುವ ರೀತಿಯಲ್ಲಿ ತಾವು ಮುಂದುವರಿಯಬೇಕು ಎಂದು ಸಿಂಗ್ ಅವರಿಗೆ ಪ್ರಚೋದಿಸಿದರು.
ಉತ್ತರಾಖಂಡದಲ್ಲಿ ‘ಭೂಮಿ ಜಿಹಾದ್’ ಮಾಡಲು ನಾವು ಜಿಹಾದಿಗಳಿಗೆ ಅವಕಾಶ ನೀಡುವುದಿಲ್ಲ. ಭೂಮಿ ಜಿಹಾದ್’ ಗಳಿಗೆ ಹೇಗೆ ಪಾಠ ಕಲಿಸಬೇಕೆಂದು ಉತ್ತರಾಖಂಡದ ಜನರಿಂದ ದೇಶದ ಹಿಂದೂಗಳು ಸ್ಫೂರ್ತಿ ಪಡೆಯುತ್ತಿದ್ದಾರೆ. ಇದು ಕೇವಲ ಉತ್ತರಕಾಶಿಯ ಸಮಸ್ಯೆಯಲ್ಲ. ದೇಶಾದ್ಯಂತ ಭೂ ಜಿಹಾದ್ ಮತ್ತು ಲವ್ ಜಿಹಾದ್ ನಿರ್ಮೂಲನೆಗೆ ನಾವು ಒಗ್ಗೂಡಬೇಕಾಗಿದೆ ಎಂದು ಶಾಸಕ ಸಿಂಗ್ ಪ್ರತಿಪಾದಿಸಿದರು.
“ಲವ್ ಜಿಹಾದ್” ಮತ್ತು “ಲ್ಯಾಂಡ್ ಜಿಹಾದ್” ಅನ್ನು ಹಿಂದೂ ಬಲಪಂಥೀಯ ಸಂಘಟನೆಗಳು ಬಳಸುವ ಪದಗಳಾಗಿವೆ ಮತ್ತು ಇದನ್ನು ಸಾಮಾನ್ಯವಾಗಿ “ಮುಸ್ಲಿಂ-ವಿರೋಧಿ” ವಾಕ್ಚಾತುರ್ಯವಾಗಿ ನೋಡಲಾಗುತ್ತದೆ.
ಉತ್ತರಾಖಂಡದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆ ಮತ್ತು ಅಲ್ಪಸಂಖ್ಯಾತ ವಿರೋಧಿ ಘಟನೆಗಳ ಮಧ್ಯೆ ಮಹಾಪಂಚಾಯತ್ ನಡೆಸಿದೆ. ಇದು ಮುಸ್ಲಿಮರ ವಿರುದ್ಧ ಸಾಮಾಜಿಕ ಬಹಿಷ್ಕಾರದ ಕರೆಗಳಿಗೆ ಹೆಚ್ಚಿನ ನಿದರ್ಶನಗಳಿಗೆ ಒಂದು ಉದಾಹರಣೆಯಾಗಿದೆ.
ಮತ್ತೊಬ್ಬ ಬಿಜೆಪಿ ನಾಯಕ ಮತ್ತು ಗಂಗೋತ್ರಿ ಶಾಸಕ ಸುರೇಶ್ ಸಿಂಗ್ ಚೌಹಾಣ್ ಅವರು, ಉತ್ತರಕಾಶಿಯ ಧಾರ್ಮಿಕ ಪಟ್ಟಣದ ಚಿತ್ರಣವನ್ನು ಕಳೆದುಕೊಳ್ಳಲು ನಾವು ಬಿಡುವುದಿಲ್ಲ ಮತ್ತು ಮಾಂಸ ಮತ್ತು ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ನಿಷೇಧಿಸಬೇಕು ಎಂದರು.
ನಾವು ಭಯದ ವಾತಾವರಣವನ್ನು ಸೃಷ್ಟಿಸುತ್ತಿಲ್ಲ, ಆದರೆ ಇದು ಧಾರ್ಮಿಕ ಕ್ಷೇತ್ರದ ಪಟ್ಟಣವಾಗಿದೆ. ಆದಾಗ್ಯೂ, ರೋಹಿಂಗ್ಯಾ ಮುಸ್ಲಿಮರು ಮಾರಾಟಗಾರರಂತೆ ನಟಿಸುತ್ತಿದ್ದಾರೆ, ಉತ್ತರಕಾಶಿಯನ್ನು ಕಲುಷಿತಗೊಳಿಸುತ್ತಿದ್ದಾರೆ. ಇದನ್ನು ಸ್ಥಳೀಯರು ಸಹಿಸುವುದಿಲ್ಲ. ಕೆಲವರು ಇಲ್ಲಿಯ ವಾತಾವರಣವನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ಅವರನ್ನು ಯಶಸ್ವಿಯಾಗಲು ಬಿಡುವುದಿಲ್ಲ. ಹಾಗಾಗಿ ಹಿಂದೂ ಸಮುದಾಯ ಒಗ್ಗೂಡಬೇಕು ಎಂದು ಅವರು ಕರೆ ನೀಡಿದರು.
ಪಟ್ಟಣದಲ್ಲಿ ದೀರ್ಘಕಾಲ ವಾಸಿಸುವವರೊಂದಿಗೆ ನಮಗೆ ಯಾವುದೇ ಸಮಸ್ಯೆ ಇಲ್ಲ. ನಮ್ಮ ಮುಖ್ಯಮಂತ್ರಿಯವರು ಮಸೀದಿಯ ವಿಷಯದ ಬಗ್ಗೆ ಗಮನಹರಿಸಿದ್ದಾರೆ. ಇದು ತನಿಖೆಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಒಂದು ತಿಂಗಳ ನಂತರ ರಾಮಲೀಲಾ ಮೈದಾನದಲ್ಲಿ ಮತ್ತೊಂದು ಮಹಾಪಂಚಾಯತ್ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ರಾಜ್ಯಾಧ್ಯಕ್ಷ ಅನುಜ್ ವಾಲಿಯಾ ಘೋಷಿಸಿದರು.
ನಾವು ಮಸೀದಿಯ ವಿರುದ್ಧ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸುತ್ತೇವೆ. ಇದು ನಮ್ಮ ಹೋರಾಟದ ಆರಂಭವಾಗಿದೆ ಎಂದು ಅವರು ಹೇಳಿದರು.
ಮಹಾಪಂಚಾಯತ್‌ಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದ ಕೆಲವೇ ದಿನಗಳಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಅನುಮತಿ ನೀಡಲಾಗಿದೆ. ಸ್ಥಳೀಯ ಆಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿತು.
ಇದನ್ನೂ ಓದಿ…‘ದೆಹಲಿ ಚಲೋ’ ರೈತರ ಮೆರವಣಿಗೆ: ರಾಜಧಾನಿ-ನೋಯ್ಡಾ ಗಡಿಯಲ್ಲಿ ಬೃಹತ್ ಟ್ರಾಫಿಕ್ ಜಾಮ್


