ಹೈದರಾಬಾದ್ ಬಳಿಯ ಇಬ್ರಾಹಿಂಪಟ್ಟಣಂನಲ್ಲಿ ಸೋಮವಾರ ನಡೆದ ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣದಲ್ಲಿ, ಅಂತರ್ಜಾತಿ ವಿವಾಹವಾಗಿದ್ದ ಮಹಿಳಾ ಪೊಲೀಸ್ ಪೇದೆಯನ್ನು ಆಕೆಯ ಸಹೋದರನೆ ಕೊಲೆ ಮಾಡಿದ್ದಾನೆ.
ನಾಗಮಣಿ ಸೋಮವಾರ ಬೆಳಗ್ಗೆ ಹಯತ್‌ನಗರ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ, ಆಕೆಯ ಸಹೋದರ ಪ್ರಮೇಶ್ ಬೈಕ್‌ಗೆ ಕಾರಿನಿಂದ ಡಿಕ್ಕಿ ಹೊಡೆದು, ನಂತರ ಅವರು ಕೆಳಗೆ ಬಿದ್ದ ಬಳಿಕ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ.
ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣ ಮಂಡಲದ ರಾಯಪೋಲ್-ಮನ್ಯಗುಡ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ನೋಡಿದಾಗ ಮಹಿಳಾ ಪೇದೆ ಶವವಾಗಿ ಬಿದ್ದಿರುವುದು ಕಂಡು ಬಂದಿದೆ. ದುಷ್ಕರ್ಮಿ ಆಕೆಯ ಮುಖ ಮತ್ತು ಕತ್ತಿನ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ.
ಇಬ್ರಾಹಿಂಪಟ್ಟಣ ಮಂಡಲದ ರಾಯಪೋಲ್ ಗ್ರಾಮದವರಾದ ನಾಗಮಣಿ ಅವರು 2020ನೇ ಬ್ಯಾಚ್‌ನ ಪೊಲೀಸ್ ಪೇದೆಯಾಗಿದ್ದರು. ಭಾನುವಾರ ಗ್ರಾಮಕ್ಕೆ ಬಂದಿದ್ದ ಆಕೆ ಸೋಮವಾರ ಕರ್ತವ್ಯಕ್ಕೆ ಮರಳುತ್ತಿದ್ದಳು.
ಅಪರಾಧ ನಡೆದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಪೊಲೀಸರು ಶವವನ್ನು ಹೈದರಾಬಾದ್‌ನ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಆರೋಪಿ ಪತ್ತೆಗೆ ಸುಳಿವು ಸಂಗ್ರಹಿಸುತ್ತಿದ್ದಾರೆ.
ನಾಗಮಣಿಯನ್ನು ಅನ್ಯಜಾತಿಯ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದ ಆಕೆಯ ಸಹೋದರನೇ ಅವರನ್ನು ಹತ್ಯೆ ಮಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ನಾಗಮಣಿಗೆ ಈ ಹಿಂದೆಯೇ ಮದುವೆಯಾಗಿದ್ದರೂ 10 ತಿಂಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದರು. ಕಳೆದ ಒಂದು ತಿಂಗಳ ಹಿಂದೆ ಬೇರೊಬ್ಬ ವ್ಯಕ್ತಿಯೊಂದಿಗೆ ಅಂತರ್ಜಾತಿ ವಿವಾಹವಾಗಿತ್ತು. ಅದೊಂದು ಪ್ರೇಮ ವಿವಾಹ ಎಂದು ಹೇಳಲಾಗಿತ್ತು.
ಇಬ್ರಾಹಿಂಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಸತ್ಯನಾರಾಯಣ ಅವರ ಪ್ರಕಾರ, ಪೊಲೀಸ್ ಪೇದೆಯು ಶ್ರೀಕಾಂತ್ ಎಂಬಾತನನ್ನು ನವೆಂಬರ್ 1 ರಂದು ಯಾದಗಿರಿಗುಟ್ಟ ದೇವಸ್ಥಾನದಲ್ಲಿ ವಿವಾಹವಾಗಿದ್ದರು.
ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಒಡಹುಟ್ಟಿದವರ ನಡುವಿನ ಆಸ್ತಿ ವಿವಾದ ಸೇರಿದಂತೆ ಎಲ್ಲ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಸಿಐ ತಿಳಿಸಿದರು.
ನಾಗಮಣಿ ಅವರ ಪತಿ ಶ್ರೀಕಾಂತ್ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳಲಿದ್ದು, ಪ್ರಕರಣ ಭೇದಿಸುವ ಸಾಧ್ಯತೆ ಇದೆ.
ಇದನ್ನೂ ಓದಿ; ಸಂಸತ್ ಚಳಿಗಾಲದ ಅಧಿವೇಶನ: ಲೋಕಸಭೆ, ರಾಜ್ಯಸಭೆಯಲ್ಲಿ ಸಂವಿಧಾನ ಕುರಿತು ಚರ್ಚೆ


