ಹನೋಯಿ: 12 ಬಿಲಿಯನ್ ಡಾಲರ್ ವಂಚನೆ ಪ್ರಕರಣದಲ್ಲಿ ದುರುಪಯೋಗ ಮತ್ತು ಲಂಚದ ಅಪರಾಧದಲ್ಲಿ ಸಿಲುಕಿರುವ ರಿಯಲ್ ಎಸ್ಟೇಟ್ ಉದ್ಯಮಿ ಟ್ರೂಂಗ್ ಮೈ ಲ್ಯಾನ್ ವಿರುದ್ಧದ ಮೇಲ್ಮನವಿಯನ್ನು ತಿರಸ್ಕರಿಸಿದ ನಂತರ ವಿಯೆಟ್ನಾಂನ ನ್ಯಾಯಾಲಯವು ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ಮಂಗಳವಾರದಂದು ಮತ್ತೆ ಎತ್ತಿಹಿಡಿದಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.
ವಿಯೆಟ್ನಾಂನಲ್ಲಿ ದಾಖಲೆಯ ಅತಿದೊಡ್ಡ ಹಣಕಾಸು ವಂಚನೆ ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ವ್ಯಾನ್ ಥಿನ್ ಫಾಟ್ ಹೋಲ್ಡಿಂಗ್ಸ್ ಗ್ರೂಪ್‌ನ ಅಧ್ಯಕ್ಷೆಯಾಗಿರುವ ಲ್ಯಾನ್ ಅವರ ಪಾತ್ರಕ್ಕಾಗಿ ನ್ಯಾಯಾಲಯವು ಇದೇ ಏಪ್ರಿಲ್‌ನಲ್ಲಿ ಅವರಿಗೆ ಮರಣದಂಡನೆ ವಿಧಿಸಿತ್ತು.
ದಕ್ಷಿಣ ಹೋ ಚಿ ಮಿನ್ಹ್ ನಗರದ ಹೈ ಪೀಪಲ್ಸ್ ಕೋರ್ಟ್ ಲ್ಯಾನ್ ಮರಣದಂಡನೆಯನ್ನುಕಡಿತಗೊಳಿಸಲು ಯಾವುದೇ ಆಧಾರಗಳಿಲ್ಲದ ಕಾರಣ ಈ ನಿರ್ಧಾರಕ್ಕೆ ಬಂದಿದೆ ಎಂದು ಆನ್‌ಲೈನ್ ಪತ್ರಿಕೆ VnExpress ವರದಿ ಮಾಡಿದೆ.
ಲ್ಯಾನ್ ಅವರು ವಂಚಿಸಿದ ಹಣದ ಮುಕ್ಕಾಲು ಭಾಗವನ್ನು ಹಿಂದಿರುಗಿಸಲು ಸಾಧ್ಯವಾದರೆ, ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
“ಲ್ಯಾನ್ ಪ್ರಕರಣ ದೇಶದ ಇತಿಹಾಸದಲ್ಲಿ ಅಭೂತಪೂರ್ವವಾಗಿದೆ ಹಾಗೆಯೇ ದುರುಪಯೋಗಪಡಿಸಿಕೊಂಡ ಹಣದ ಮೊತ್ತವು ಅಭೂತಪೂರ್ವವಾಗಿ ದೊಡ್ಡದಾಗಿದೆ. ಅದು ಎಷ್ಟೆಂದರೆ ಮರುಪಡೆಯಲಾಗದಷ್ಟು” ಎಂದು ಸರ್ಕಾರಿ ಆನ್‌ಲೈನ್ ಪತ್ರಿಕೆ ಹೇಳಿದೆ.
ಈ ಪ್ರಕರಣವು ಸಮಾಜ, ದೇಶದ ಹಣಕಾಸು ಮಾರುಕಟ್ಟೆ, ಆರ್ಥಿಕತೆಯ ಹಲವು ಅಂಶಗಳ ಮೇಲೆ ಪರಿಣಾಮ ಬೀರಿದೆ ಎಂದು ಅದು ತಿಳಿಸಿದೆ.
ಲ್ಯಾನ್ ತನ್ನ ತಪ್ಪನ್ನು ಒಪ್ಪಿಕೊಂಡಿರುವುದು, ಪಶ್ಚಾತ್ತಾಪ ಪಡುವುದು ಮತ್ತು ದುರುಪಯೋಗಪಡಿಸಿಕೊಂಡ ಹಣದ ಒಂದು ಭಾಗವನ್ನು ಮರುಪಾವತಿ ಮಾಡುವುದರಿಂದ ಶಿಕ್ಷೆಯಿಂದ ಕೆಲ ರಿಯಾಯತಿ ಪಡೆಯಬಹುದಾಗಿದೆ ಎಂದು ಅವರ ವಕೀಲರ ಹೇಳಿಕೆಯನ್ನು ರಾಜ್ಯ ಮಾಧ್ಯಮವು ಉಲ್ಲೇಖಿಸಿದೆ, ಆದರೆ ಪ್ರಾಸಿಕ್ಯೂಟರ್‌ಗಳು ಇದಕ್ಕೆ ಸಾಕಾಗುವುದಿಲ್ಲ ಎಂದು ಅದು ಹೇಳಿದೆ.
ಲ್ಯಾನ್‌ನ ವಕೀಲರಿಂದ ಹೆಚ್ಚಿನ ಹೇಳಿಕೆಗಳನ್ನು ಪಡೆಯಲು ಮಾಧ್ಯಮಗಳಿಗೆ ಇಲ್ಲಿಯವರೆಗೂ ಸಾಧ್ಯವಾಗುತ್ತಿಲ್ಲ.
ವಿಯೆಟ್ನಾಂನ ನ್ಯಾಯಾಲಯದಲ್ಲಿ ಮರುವಿಚಾರಣೆಯ ಕಾರ್ಯವಿಧಾನಗಳ ಅಡಿಯಲ್ಲಿ ಇದನ್ನು ಇನ್ನಷ್ಟು ಪರಿಶೀಲಿಸುವ ಹಕ್ಕನ್ನು ಲ್ಯಾನ್ ಹೊಂದಿದ್ದಾರೆ.
ಠೇವಣಿ ಇರಿಸುವ ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಸೈಗಾನ್ ಜಾಯಿಂಟ್ ಸ್ಟಾಕ್ ಕಮರ್ಷಿಯಲ್ ಬ್ಯಾಂಕ್ (SCB) ನಲ್ಲಿ ವಂಚನೆಯ ಕಾರಣಕ್ಕಾಗಿ 2022ರಲ್ಲಿ ಲ್ಯಾನ್ ಅವರ ಬಂಧನ ದೇಶದಲ್ಲಿ ಭಾರೀ ಸಂಚಲನೆಯನ್ನುಂಟು ಮಾಡಿತ್ತು.
ಮರಣದಂಡನೆಯ ಹೊರತಾಗಿಯೂ, ವಂಚನೆ, ಮನಿ ಲಾಂಡರಿಂಗ್ ಮತ್ತು ಅಕ್ರಮ ಗಡಿಯಾಚೆಗಿನ ಹಣ ವರ್ಗಾವಣೆಯ ಮೂಲಕ ಅಪಾರ ಆಸ್ತಿ ಗಳಿಕೆ ಆರೋಪದ ಮೇಲೆ ಅಕ್ಟೋಬರ್‌ನಲ್ಲಿ ನಡೆದ ಪ್ರತ್ಯೇಕ ವಿಚಾರಣೆಯಲ್ಲಿ ಲ್ಯಾನ್‌ಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಇದನ್ನೂ ಓದಿ…ಮಹಾರಾಷ್ಟ್ರ | ಚುನಾವಣಾ ಆಯೋಗಕ್ಕೆ ಸವಾಲು : ಗ್ರಾಮಸ್ಥರಿಂದ ಮರು ಮತದಾನ


