ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ಸರ್ವಾಧಿಕಾರಿ ಆಡಳಿತ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾರಣ ಡಾ.ಎಪಿಜೆ ಅಬ್ದುಲ್ ಕಲಾಂ ಹೆಸರಲ್ಲಿ ನೀಡುತ್ತಿರುವ ಪ್ರತಿಭಾ ಪುರಸ್ಕಾರದ ಹೆಸರನ್ನೇ ಬದಲಾಯಿಸಲು ಹೊರಟಿದ್ದಾರೆ. ಜಗನ್ ಪ್ರತಿವರ್ಷ ಮಕ್ಕಳಿಗೆ ನೀಡಲಾಗುವ ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರವನ್ನು ವೈಎಸ್‌ಆರ್ ವಿದ್ಯಾ ಪುರಸ್ಕಾರ ಎಂದು ಬದಲಾಯಿಸಲು ಸೂಚಿಸಿದ್ದರು. ಆದರೆ ಸಾಕಷ್ಟು ವಾದ-ವಿವಾದದ ನಂತರ ಈ ಪ್ರಯತ್ನವನ್ನು ಕೈ ಬಿಟ್ಟಿದ್ದಾರೆ.
ಪ್ರಶಸ್ತಿಯ ಹೆಸರು ಬದಲಿಸಿ, ಮರುನಾಮಕರಣ ಮಾಡುವುದಾಗಿ ಆಂಧ್ರಪ್ರದೇಶ ಸರ್ಕಾರ ಘೋಷಿಸಿತ್ತು. ಸಿಎಂ ಜಗನ್ ಮೋಹನ್ ಅವರು ತಮ್ಮ ತಂದೆ ರಾಜಶೇಖರ್ ರೆಡ್ಡಿ ಅವರ ಹೆಸರನ್ನು ಪ್ರಶಸ್ತಿಗೆ ಮರುನಾಮಕರಣ ಮಾಡುವುದಾಗಿ ಹೇಳಿದ್ದರು. ಜಗನ್ ತಂದೆ ವೈಎಸ್ಆರ್ 2009ರಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.
ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಸ್ಮರಣಾರ್ಥ ರಾಷ್ಟ್ರೀಯ ಶೈಕ್ಷಣಿಕ ದಿನ ನವೆಂಬರ್ 11ರಂದು ನೀಡಲಾಗುವ ಡಾ. ಎಪಿಜೆ ಅಬ್ದುಲ್ ಕಲಾಂ ಹೆಸರಿನ ಪ್ರಶಸ್ತಿಗೆ ವೈಎಸ್ ಆರ್ ವಿದ್ಯಾ ಪುರಸ್ಕಾರವೆಂದು ಹೆಸರು ಬದಲಾಯಿಸಿ, 2019ರ ಶೈಕ್ಷಣಿಕ ಸಾಲಿನಲ್ಲಿ ಪ್ರಶಸ್ತಿ ನೀಡುವುದಾಗಿ ತಿಳಿಸಿತ್ತು. ಆದರೆ ಜಗನ್ ಅವರ ಈ ಇಚ್ಛೆ ಈಡೇರಿಲ್ಲ.
ಪ್ರಶಸ್ತಿ ಹೆಸರನ್ನು ಬದಲಾಯಿಸುತ್ತಿರುವ ಬಗ್ಗೆ ಟಿಡಿಪಿ ಕಿಡಿಕಾರಿದೆ. ಸಿಎಂ ಜಗನ್ ಅವರು ವಂಶಾವಳಿ ಆಡಳಿತ ನಡೆಸುತ್ತಿದ್ದಾರೆ. ಜಗತ್ತೇ ಮೆಚ್ಚಿಕೊಂಡ ಕಲಾಂ ಅವರ ಹೆಸರನ್ನು ಬದಲಾಯಿಸಲು ಹುನ್ನಾರ ನಡೆಸಿದೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಶಸ್ತಿಗೆ ಮರುನಾಮಕರಣ ಮಾಡುತ್ತಿರುವ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆ ಎಚ್ಚೆತ್ತ ಜಗನ್ ಹೆಜ್ಜೆ ಹಿಂದಿಟ್ಟಿದ್ದು, ಸೂಚನೆ ಹಿಂಪಡೆದಿದ್ದಾರೆ.
ప్రతిభా పురస్కారాలకు కూడా కోతలే
కేవలం ప్రభుత్వ పాఠశాల విద్యార్థులే అర్హులు pic.twitter.com/N4Y7SBZxNT— Telugu Desam Party (@JaiTDP) November 5, 2019
ಬಿಜೆಪಿ ನಾಯಕ ಲಂಕಾ ದಿನಕರ್, ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ನಿಜವಾದ ರಾಷ್ಟ್ರೀಯ ನಾಯಕರ ಹೆಸರನ್ನು ವಂಶಾವಳಿ ರಾಜಕೀಯಕ್ಕೆ ತಳುಕು ಹಾಕುತ್ತಿರುವ ಕ್ರಮ ಖಂಡನೀಯ ಎಂದರು.
ಇನ್ನು ಡಾ.ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿಯನ್ನು 10 ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ತರಗತಿಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಿಗೆ, ಕಲಾಂ ಅವರ ಜನ್ಮದಿನಾಚರಣೆಯಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಅದಾಗ್ಯೂ ಜಗನ್ ಮೋಹನ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಸರ್ಕಾರಿ ಮಟ್ಟದ ಹಲವು ಯೋಜನೆಗಳ ಹೆಸರನ್ನು ಬದಲಾಯಿಸಲಾಗಿದೆ. ಎನ್.ಟಿ.ಆರ್ ಭರೋಸಾ ಯೋಜನೆಗೆ ವೈಎಸ್ಆರ್ ಪೆನ್ಶನ್ ಕನುಕಾ ಎಂದು, ಅಣ್ಣಾ ಕ್ಯಾಂಟೀನ್ಸ್ ಯೋಜನೆ ಹೆಸರನ್ನು ರಾಜಣ್ಣ ಕ್ಯಾಂಟೀನ್ಸ್ ಎಂದು, ಮಧ್ಯಾಹ್ನ ಊಟದ ಯೋಜನೆಯನ್ನು ವೈಎಸ್ಆರ್ ಅಕ್ಷಯ ಪಾತ್ರಾ ಎಂದು ಮರುನಾಮಕರಣ ಮಾಡಿದ್ದಾರೆ..


