ಸೂಫಿ ಸಂತ ಖ್ವಾಜಾ ಮುಈನುದ್ದೀನ್ ಚಿಸ್ತಿ ಅವರ ಅಜ್ಮೀರ್ ದರ್ಗಾವನ್ನು ದೇವಸ್ಥಾನ ಎಂದು ಪ್ರತಿಪಾದಿಸಿ ಸಲ್ಲಿಸಿರುವ ಅರ್ಜಿಯನ್ನು ನ.27ರಂದು ನ್ಯಾಯಾಲಯ ವಿಚಾರಣೆಗೆ ಪರಿಗಣಿಸಿದೆ.
ಆ ಬಳಿಕ ಸಾಮಾಜಿಕ ಜಾಲತಾಣಗಳಾದ ಎಕ್ಸ್, ಫೇಸ್‌ಬುಕ್ ಮತ್ತು ವಾಟ್ಸಾಪ್ ಮೆಸೆಂಜರ್‌ನಲ್ಲಿ ವಿಡಿಯೋವೊಂದು ವ್ಯಾಪಕವಾಗಿ ಹರಿದಾಡುತ್ತಿದೆ. ಪಂಜಿನ ಮೆರವಣಿಗೆಯೊಂದರ ವೇಳೆ ಬೆಂಕಿ ಅವಘಡ ಸಂಭವಿಸಿದ ದೃಶ್ಯ ಆ ವಿಡಿಯೋದಲ್ಲಿದೆ.

ವಿಡಿಯೋ ಹಂಚಿಕೊಳ್ಳುತ್ತಿರುವವರು “ಅಜ್ಮೀರ್ ಶರೀಫ್ ದರ್ಗಾದ ವಿರುದ್ದ ಕೋಮುವಾದಿ ಸಂಘಿಗಳು ನಡೆಸಿದ ಪಂಜಿನ ಮೆರವಣಿಗೆಯಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿಯ ಅವಘಡ ಸಂಭವಿಸಿದೆ” ಎಂದು ಪ್ರತಿಪಾದಿಸಿದ್ದಾರೆ.

ಹಾಗಾದರೆ, ಈ ವಿಷಯ ನಿಜಾನಾ? ಅಜ್ಮೀರ್ ದರ್ಗಾ ವಿರುದ್ದ ಪ್ರತಿಭಟನೆ ವೇಳೆ ಬೆಂಕಿ ಅವಘಡ ಸಂಭವಿಸಿದೆಯಾ? ಎಂಬುವುದರ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ.
ಫ್ಯಾಕ್ಟ್‌ಚೆಕ್ : ಅಜ್ಮೀರ್ ದರ್ಗಾ ವಿರುದ್ದ ಪ್ರತಿಭಟಿಸುವಾಗ ಬೆಂಕಿ ಅವಘಡ ಸಂಭವಿಸಿದೆ ಎಂಬುವುದು ಶುದ್ದ ಸುಳ್ಳು. ಅಂತಹ ಯಾವುದೇ ಘಟನೆ ಇತ್ತೀಚೆಗೆ ನಡೆದಿರುವ ಬಗ್ಗೆ ವರದಿಯಾಗಿಲ್ಲ. ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಮಧ್ಯಪ್ರದೇಶದಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದ್ದಾಗಿದೆ.
2024ರ ನವೆಂಬರ್ 29ರಂದು ‘ರಾಷ್ಟ್ರ ಭಕ್ತ್ ವೀರ್ ಯುವ ಮಂಚ್’ ಎಂಬ ಸಂಘಟನೆ ಪಂಚಿನ ಮೆರವಣಿಗೆ ಆಯೋಜಿಸಿತ್ತು. ಮೆರವಣಿಗೆ ಮಧ್ಯ ಪ್ರದೇಶದ ಖಾಂದ್ವಾದ ಘಂಟಾಘರ್‌ನ ಬಾಂಬೆ ಬಝಾರ್‌ಗೆ ತಲುಪಿದಾಗ ಬೆಂಕಿ ಅವಘಡ ಸಂಭವಿಸಿದೆ.
ಬಾಂಬೆ ಬಝಾರ್‌ನ ಕ್ಲೋ ಟವರ್ ಪ್ರದೇಶದಲ್ಲಿ ಪಂಜಿನ ಮೆರವಣಿಗೆ ಕೊನೆಗೊಂಡಾಗ, ಜನರು ತಮ್ಮ ಕೈಯಲ್ಲಿದ್ದ ಪಂಜನ್ನು ನೀರು ತುಂಬಿದ್ದ ಕಂಟೈನರ್‌ಗೆ ಮುಳುಗಿಸಿ ನಂದಿಸುತ್ತಿದ್ದರು. ಈ ವೇಳೆ ಪಂಜಿನಿಂದ ನೆಲಕ್ಕೆ ಬಿದ್ದಿದ್ದ ಎಣ್ಣೆಗೆ ಬೆಂಕಿ ತಗುಲಿ ಒಮ್ಮೆಲೆ ಆವರಿಸಿಕೊಂಡಿದೆ.

ಈ ಘಟನೆಯಲ್ಲಿ ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ. ಇನ್ನೂ ಕೆಲ ವರದಿಗಳು ಸುಮಾರು 30 ಮಂದಿ ಗಾಯಗೊಂಡಿದ್ದಾರೆ ಎಂದಿವೆ.
ನವೆಂಬರ್ 28, 2009 ರಂದು ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI) ಸದಸ್ಯರಿಂದ ಹತ್ಯೆಯಾದ ಪೊಲೀಸ್ ಅಧಿಕಾರಿ ಸೀತಾರಾಮ್ ಬಾಥಮ್ ಸೇರಿದಂತೆ ಮೂವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಪಂಜಿನ ಮೆರವಣಿಗೆಯನ್ನು ನಡೆಸಲಾಗುತ್ತದೆ. ಈ ವರ್ಷದ ಮೆರವಣಿಗೆ ನವೆಂಬರ್ 29 2024ರಂದು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಹೈದರಾಬಾದ್‌ನ ಹಿಂದುತ್ವವಾದಿ ಶಾಸಕ ಟಿ. ರಾಜಾಸಿಂಗ್ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 26/11ರ ಭಯೋತ್ಪಾದಕ ದಾಳಿಯಲ್ಲಿ ಮೃತರಾದವರಿಗೂ ಗೌರವಾರ್ಪಣೆ ಮಾಡಲಾಗಿದೆ.
ಒಟ್ಟಿನಲ್ಲಿ, ಬೆಂಕಿ ಅವಘಡ ಸಂಭವಿಸಿದ ವೈರಲ್ ವಿಡಿಯೋ ಅಜ್ಮೀರ್ ದರ್ಗಾದ ವಿರುದ್ದ ಪ್ರತಿಭಟಿಸುವಾಗ ನಡೆದ ಘಟನೆಯದ್ದಲ್ಲ. ಅದು ಮಧ್ಯಪ್ರದೇಶದ ಪಂಜಿನ ಮೆರವಣಿಗೆ ವೇಳೆ ನಡೆದ ಅವಘಡದ್ದಾಗಿದೆ.
ಗಮನಾರ್ಹ ವಿಷಯವೆಂದರೆ, ವಾಟ್ಸಾಪ್‌ನಲ್ಲಿ ಹಂಚಿಕೊಳ್ಳುತ್ತಿರುವ ವಿಡಿಯೋ ‘ಪೈಗಾಮ್ ಟಿವಿ’ ಎಂಬ ಹೆಸರಿನಲ್ಲಿದೆ. ಆ ವಿಡಿಯೋಗೆ ಹಿಂದಿ ಭಾಷೆಯಲ್ಲಿ ಕೊಟ್ಟ ಹಿನ್ನೆಲೆ ಧ್ವನಿಯಲ್ಲಿ ಮಧ್ಯ ಪ್ರದೇಶದ ಖಾಂದ್ವಾದಲ್ಲಿ ಹಿಂದುತ್ವ ಸಂಘಟನೆ ಮುಸ್ಲಿಮರಲ್ಲಿ ಭಯ ಹುಟ್ಟಿಸಲು ಪಂಜಿನ ಮೆರವಣಿಗೆ ಹಮ್ಮಿಕೊಂಡಿತ್ತು. ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಆ ವಿಡಿಯೋದಲ್ಲಿ ಎಲ್ಲೂ ಅಜ್ಮೀರ್ ದರ್ಗಾ ವಿಷಯ ಉಲ್ಲೇಖಿಸಿಲ್ಲ.
ಘಟನೆಯ ಕುರಿತು ರಾಷ್ಟ್ರೀಯ ಮಾಧ್ಯಮಗಳು ಮಾಡಿರುವ ವರದಿಯ ಲಿಂಕ್ ಇಲ್ಲಿದೆ..ಟೈಮ್ಸ್ ನೌ, ಲೋಕಮತ್, ನ್ಯೂಸ್ 18 ಹಿಂದಿ, ಮನಿ ಕಂಟ್ರೋಲ್
ಏನಿದು ಅಜ್ಮೀರ್ ದರ್ಗಾ ವಿವಾದ?
ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಸಮಾಧಿ ಅಥವಾ ಅಜ್ಮೀರ್ ದರ್ಗಾವನ್ನು ಶಿವ ದೇವಾಲಯ ಎಂದು ಪ್ರತಿಪಾದಿಸಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ನ.27 ರಂದು ವಿಚಾರಣೆಗೆ ಸ್ವೀಕರಿಸಿದೆ.
ಹಿಂದೂ ಸೇನೆ ಸಲ್ಲಿಸಿರುವ ಅರ್ಜಿಯನ್ನು ಅಜ್ಮೀರ್‌ನ ಸ್ಥಳೀಯ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ನಿಗದಿಪಡಿಸಿದೆ.
ಅಜ್ಮೀರ್ ಪಶ್ಚಿಮ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಮನಮೋಹನ್ ಚಂದೇಲ್ ಅವರು ವಿಷ್ಣು ಗುಪ್ತಾ ಎಂಬವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದು, ಅಜ್ಮೀರ್ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಗೆ ನೋಟಿಸ್ ಜಾರಿ ಮಾಡಿದೆ.
ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅರ್ಜಿದಾರ ವಿಷ್ಣು ಗುಪ್ತಾ, ಅಜ್ಮೀರ್ ದರ್ಗಾವು ಮಹಾದೇವನಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಅಜ್ಮೀರ್ ದರ್ಗಾವನ್ನು ಶಿವ ದೇವಾಲಯವೆಂದು ಘೋಷಿಸಲು ಕೋರಿ ವಿಷ್ಣು ಗುಪ್ತಾ ಅವರು ಸಲ್ಲಿಸಿದ್ದ ಸಿವಿಲ್ ದಾವೆಯನ್ನು ಸ್ವೀಕರಿಸಲು ಅಜ್ಮೀರ್ ನ್ಯಾಯಾಲಯ ನಿರಾಕರಿಸಿತ್ತು.
ಇದನ್ನೂ ಓದಿ : FACT CHECK | ವಕ್ಫ್ ಬೋರ್ಡ್ ಅನ್ನು ರದ್ದು ಮಾಡ್ತಾ ಆಂಧ್ರ ಪ್ರದೇಶದ ಸರ್ಕಾರ?


