ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಮತ್ತು ಏಕನಾಥ್ ಶಿಂದೆ ವಿಧಾನಸಭೆಯ ಸದಸ್ಯರಾಗಿ ಇಂದು (ಡಿ.7) ಪ್ರಮಾಣವಚನ ಸ್ವೀಕರಿಸಿದರು. ಇವಿಎಂ ತಿರುಚಿದ ಆರೋಪ ಮಾಡಿರುವ ಪ್ರತಿಪಕ್ಷ ನಾಯಕರು ಈ ಕಾರ್ಯಕ್ರಮ (ಕಲಾಪ) ಬಹಿಷ್ಕರಿಸಿದರು.
ಮೂರು ದಿನಗಳ ವಿಶೇಷ ಕಲಾಪದ ಮೊದಲ ದಿನವಾದ ಇಂದು, ಮಹಾರಾಷ್ಟ್ರ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ಕಾಳಿದಾಸ್ ಕೊಳಂಬಕರ್, ಆರಂಭದಲ್ಲಿ ಮೂವರು ನಾಯಕರಿಗೆ ಪ್ರಮಾಣವಚನ ಬೋಧಿಸಿದರು. ನಂತರ ಉಳಿದವರು ಪ್ರಮಾಣವಚನ ಸ್ವೀಕರಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ತಿರುಚಲಾಗಿದೆ. ಈ ಮೂಲಕ ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಆರೋಪಿಸಿರುವ ಪ್ರತಿಪಕ್ಷಗಳ ಎಂವಿಎ ನಾಯಕರು ಕಲಾಪ ಬಹಿಷ್ಕರಿಸಿದರು.
ಈ ಕುರಿತು ಮಾತನಾಡಿರುವ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, “ವಿಶೇಷ ಕಲಾಪದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಎಂವಿಎ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಯಾರೂ ಭಾಗವಹಿಸುವುದಿಲ್ಲ ಎಂದಿದ್ದಾರೆ.
ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಜನಾದೇಶವಾಗಿದ್ದರೆ ಜನರು ಸಂಭ್ರಮಿಸುತ್ತಿದ್ದರು. ಆದರೆ, ಜನರು ಸಂಭ್ರಮಿಸುವುದು ಎಲ್ಲೂ ಕಾಣುತ್ತಿಲ್ಲ. ನಮಗೆ ಇವಿಎಂ ಮೇಲೆ ಅನುಮಾನವಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ನಾನಾ ಪಟೋಲೆ ಕೂಡ “ನಮ್ಮ ಚುನಾಯಿತು ಪ್ರತಿನಿಧಿಗಳು ಕಲಾಪ ಬಹಿಷ್ಕರಿಸಿದ್ದಾರೆ” ಎಂದು ಹೇಳಿದ್ದು, ಸರ್ಕಾರ ಅನ್ಯಾಯ ಎಸಗುವ ಮೂಲಕ ಎನ್‌ಡಿಎ ಚುನಾವಣೆ ಗೆದ್ದಿದೆ ಎಂದು ಆರೋಪಿಸಿದ್ದಾರೆ.
“ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆ ಜನರಿಗೆ ಅರ್ಥವೇ ಅಗಿಲ್ಲ. ಮರ್ಕಡವಾಡಿಯಲ್ಲಿ ಗ್ರಾಮಸ್ಥರು ಚುನಾವಣಾ ಆಯೋಗದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಖಾಸಗಿ ಚುನಾವಣೆ ನಡೆಸಲು ಮುಂದಾಗಿರುವುದು ಇಡೀ ಮಹಾರಾಷ್ಟ್ರದ ಭಾವನೆಯಾಗಿದೆ. ಚುನಾವಣಾ ಆಯೋಗ ಖಾಸಗಿ ಮತದಾನಕ್ಕೆ ವಿರೋಧ ವ್ಯಕ್ತಪಡಿಸಿರುವುದು ಸರ್ಕಾರ ಅನ್ಯಾಯ ಮಾಡಿದೆ ಎಂದರ್ಥ. ಆದ್ದರಿಂದ ನಮ್ಮ ಪ್ರತಿಭಟನೆ ವ್ಯಕ್ತಪಡಿಸಲು ನಾವು ಕಲಾಪ ಬಹಿಷ್ಕರಿಸಿದ್ದೇವೆ” ಎಂದು ನಾನಾ ಪಟೋಲೆ ಹೇಳಿದ್ದಾರೆ.
ನವೆಂಬರ್ 20ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನದ ಫಲಿತಾಂಶ ನ.20ರಂದು ಪ್ರಕಟಗೊಂಡಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ 288 ಸ್ಥಾನಗಳ ಪೈಕಿ 230 ಸ್ಥಾನಗಳನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ : ಉಪ ಮುಖ್ಯಮಂತ್ರಿಯಾದ ಮರುದಿನ ಅಜಿತ್ ಪವಾರ್ ಮೇಲಿನ 1000 ಕೋಟಿ ರೂ. ಬೇನಾಮಿ ಆರೋಪ ತೆರವು!


