ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮದ್ಯ ಮತ್ತು ತಂಬಾಕಿನ ಜೊತೆಗೆ ಮಾಂಸಹಾರವನ್ನು ಕೂಡಾ ಹೋಲಿಕೆ ಮಾಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಂಡ್ಯದಲ್ಲಿ ಡಿಸೆಂಬರ್ 20ರಿಂದ 22ರವರೆಗೆ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಕ್ಕೆ ಆಗಮಿಸುವವರಿಗೆ ಮಂಡ್ಯದ ಮುದ್ದೆ– ಸೊಪ್ಪಿನ ಸಾಂಬಾರ್ ಹಾಗೂ ಉತ್ತರ ಕರ್ನಾಟಕದ ಜೋಳದ ರೊಟ್ಟಿ– ಎಣ್ಣೆಗಾಯಿ ಪಲ್ಯದ ಊಟ ಉಣಬಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ವರದಿಯಾಗಿದೆ. ಮದ್ಯ & ತಂಬಾಕಿನೊಂದಿಗೆ
ಸಾಹಿತ್ಯ ಸಮ್ಮೇಳನದಲ್ಲಿ ಮಳಿಗೆ ಹಾಕುವ ವ್ಯಾಪಾರಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ ಕೆಲವು ಸೂಚನೆ ನೀಡಿದೆ. ಇದರಲ್ಲಿ ಸೂಚನೆಗಳ ಪಟ್ಟಿಯಲ್ಲಿ 4 ನೆ ಸೂಚನೆ ಮಾಂಸಹಾರವನ್ನು ಸಾಹಿತ್ಯ ಪರಿಷತ್ ನಿಷೇಧಿಸಿದ್ದಲ್ಲದೆ, ಮಾಂಸಹಾರವನ್ನು ಕೆಟ್ಟ ಚಟಗಳಾದ ‘ಕುಡಿತ – ತಂಬಾಕು’ ಜೊತೆ ಸಮೀಕರಿಸಿದೆ. ಇದು ಕನ್ನಡನಾಡಿನ 80% ಮಾಂಸಾಹಾರಿಗಳ ನಿಷೇಧ ಮತ್ತು ಅವರನ್ನು ಕೆಟ್ಟದಾಗಿ ನೋಡುವ ಮನುವಾದಿ ರಾಜಕೀಯವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯ & ತಂಬಾಕಿನೊಂದಿಗೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ನಡುವೆ ಮಾಂಸಾಹಾರಕ್ಕೆ ಹೆಸರುವಾಸಿಯಾದ ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಮಾಂಸಾಹಾರವನ್ನು ಕೂಡಾ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಸಚಿವ ಚಲುವರಾಯ ಸ್ವಾಮಿ ಅವರಿಗೆ ಸಂಘಟನೆಗಳು ಆಗ್ರಹ ವ್ಯಕ್ತಪಡಿಸಿದೆ.
ಮಂಡ್ಯದವರೇ ಆಗಿರುವ ಪ್ರಾಧ್ಯಾಪಕ ನಾಗೇಗೌಡ ಕೀಲಾರ ಅವರು, “ಎನ್ ಚಲುವರಾಯಸ್ವಾಮಿ ಅವರೇ, ನಿಮ್ಮ ಮನೆಗೆ ನೆಂಟರು ಬಂದರೆ ಬಾಡೂಟ ಹಾಕದೇ ಕಳಿಸಲ್ಲ ತಾನೇ. ನೀವು ಚುನಾವಣೆಯಲ್ಲಿ ಗೆದ್ದಗಾಲೆಲ್ಲ ನಿಮ್ಮ ಬೆಂಬಲಿಗರಿಗೆ ಬಾಡೂಟ ಹಾಕಿಸುತ್ತಿರಿ ತಾನೇ. ಹಂಗೇ ಸಾಹಿತ್ಯ ಸಮ್ಮೇಳನದಲ್ಲೂ ಬಾಡೂಟ ಹಾಕಿಸಬೇಕು. ಮಂಡ್ಯ ಅಂದರೆ ಬಾಡು” ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ನಜ್ಮಾ ನಜೀರ್ ಅವರು, “ಮಂಡ್ಯ ಅಂದ್ರೇನೆ ಮಾಂಸ ಕಲಾ. ನಾವ್ ಮಂಡ್ಯ ಮೈಸೂರೋರು ದೇವ್ರುಗು ಕುರಿ ಹೊಡಿಯೋರು” ಎಂದು ಹೇಳಿದ್ದಾರೆ.
ಸಂತೋಷ್ ಎಚ್.ಎಮ್. ಅವರು, ನಾವು ಮಂಡ್ಯದ ಜನ ಬಾಡೂಟಕ್ಕೆ ಹೆಚ್ಚು ಪ್ರಸಿದ್ಧ. ಅದು ಬೇಡ, ಇದು ಬೇಡ ಎಲ್ಲಾ ಯಾಕೆ…? ಎಲ್ಲವೂ ಇರಲಿ.. ತಿನ್ನೊದು ಅವರ್ ಅವರ್ ಇಷ್ಟಕ್ಕೆ ಬಿಟ್ಟದ್ದು” ಎಂದು ಹೇಳಿದ್ದಾರೆ.
ಪತ್ರಕರ್ತ ಸಂತೋಷ್ ಜಿ ಅವರು, “ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ – ಸಸ್ಯಾಹಾರ ಎರಡೂ ಇರಲಿ ಎಂಬುವುದು ಸಚಿವರಿಗೆ ಮನವಿ. 86 ವರ್ಷದಿಂದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರಿಗಳಿಗೆ ವಂಚಿಸಿಕೊಂಡೆ ಬರುತ್ತಿದೆ. ಈ ಬಾರಿ ಮಾಂಸಹಾರ ಜಾರಿ ಆಗಲಿ. ಮಾಂಸಹಾರಿಗಳ ಆಹಾರದ ಹಕ್ಕಿನ ಘನತೆಯನ್ನು ಎತ್ತಿಹಿಡಿಯಲಿ” ಎಂದು ಹೇಳಿದ್ದಾರೆ.


