ಶಿವಸೇನೆ (ಯುಬಿಟಿ) ಪಕ್ಷದ ನಾಯಕ ಬಾಬರಿ ಮಸೀದಿ ಧ್ವಂಸವನ್ನು ಸಮರ್ಥಿಸಿರುವ ಹಿನ್ನೆಲೆ, ಸಮಾಜವಾದಿ ಪಕ್ಷದ (ಎಸ್‌ಪಿ) ಮಹಾರಾಷ್ಟ್ರ ಘಟಕ ಪ್ರತಿಪಕ್ಷಗಳ ಒಕ್ಕೂಟ ಮಹಾ ವಿಕಾಸ ಅಘಾಡಿ (ಎಂವಿಎ) ಯನ್ನು ತೊರೆದಿದೆ.
ಈ ಕುರಿತು ಸಮಾಜವಾದಿ ಎಸ್‌ಪಿ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಅಬು ಅಸಿಮ್ ಅಝ್ಮಿ ಅಧಿಕೃತ ಘೋಷಣೆ ಮಾಡಿದ್ದಾರೆ.
समाजवादी पार्टी को महाराष्ट्र में अकेले चलना गवारा है लेकिन माविकास अघाड़ी में रहते हुए शिवसेना UBT की सांप्रदायिक विचारधारा का हिस्सा बनना हरगिज़ गवारा नहीं!#SamajwadiParty #MahaVikasAghadi #Maharashtra pic.twitter.com/dblr3fIynB
— Abu Asim Azmi (@abuasimazmi) December 7, 2024
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎಸ್‌ಪಿ ಇಬ್ಬರು ಶಾಸಕರನ್ನು ಹೊಂದಿದೆ. ಈ ಪೈಕಿ ರಾಜ್ಯಾಧ್ಯಕ್ಷ ಅಬು ಅಸಿಮ್ ಅಝ್ಮಿ ಅವರು ಒಬ್ಬರು. ಅಝ್ಮಿ ಮುಂಬೈನ ಮನ್ಖುರ್ದ್-ಶಿವಾಜಿನಗರದ ಶಾಸಕರಾದರೆ, ಇನ್ನೊಬ್ಬರು ರೈಸ್ ಶೇಖ್ ಥಾಣೆ ಜಿಲ್ಲೆಯ ಭಿವಂಡಿ ಪೂರ್ವ ಕ್ಷೇತ್ರದ ಶಾಸಕರಾಗಿದ್ದಾರೆ.
“ನಾವು ಆಡಳಿತಾರೂಢ ಮಹಾಯುತಿ ಅಥವಾ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿಯ ಭಾಗವಲ್ಲ. ನಮ್ಮಿಬ್ಬರಿಗಾಗಿ ಪ್ರತ್ಯೇಕ ಜಾಗವನ್ನು ಮೀಸಲಿಡುವಂತೆ ಸ್ಪೀಕರ್ ಮತ್ತು ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿಯನ್ನು ಕೋರುತ್ತೇವೆ” ಎಂದು ಅಝ್ಮಿ ಹೇಳಿದ್ದಾರೆ.
“ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಸಮಯದಲ್ಲಾಗಲಿ, ಪ್ರಚಾರದ ಸಮಯದಲ್ಲಾಗಲಿ ಎಂವಿಎ ನಮ್ಮೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ. ನಮ್ಮನ್ನು ಯಾವುದೇ ಸಭೆ, ರ್ಯಾಲಿಗಳಿಗೆ ಕರೆಯುತ್ತಿರಲಿಲ್ಲ” ಎಂದು ಅಝ್ಮಿ ತಿಳಿಸಿದ್ದಾರೆ.
“ಉದ್ದವ್ ಠಾಕ್ರೆಯವರು ಅವರ ಪಕ್ಷದ ಆಂತರಿಕ ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಬಲ ಹಿಂದುತ್ವ ಪ್ರತಿಪಾದಿಸುವಂತೆ ಹೇಳಿದ್ದಾರಂತೆ. ಶಿವಸೇನೆಯವರು ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸವನ್ನು ಸಮರ್ಥಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಇದನ್ನು ನಾವು ಹೇಗೆ ಸಹಿಸಿಕೊಳ್ಳುವುದು?” ಎಂದು ಅಝ್ಮಿ ಪ್ರಶ್ನಿಸಿದ್ದಾರೆ.
ವರದಿಗಳ ಪ್ರಕಾರ, ಬಾಬರಿ ಮಸೀದಿ ಧ್ವಂಸವನ್ನು ಸಮರ್ಥಿಸಿ, ಸಂಭ್ರಮಿಸಿ ಶಿವಸೇನೆ (ಯುಬಿಟಿ) ಎಂಎಲ್‌ಸಿ ಹಾಗೂ ಉದ್ದವ್ ಠಾಕ್ರೆ ಅವರ ಆಪ್ತ ಸಹಾಯಕ ಮಿಲಿಂದ್ ನಾರ್ವೇಕರ್ ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್ ಎಸ್‌ಪಿ ನಾಯಕರನ್ನು ಕೆರಳಿಸಿದೆ. ಮಿಲಿಂದ್ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ, ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಫೋಟೋಗಳಿವೆ.
— Milind Narvekar (@NarvekarMilind_) December 5, 2024
“ಮಿಲಿಂದ್ ನಾರ್ವೇಕರ್ ಪೋಸ್ಟ್‌ನಿಂದ ನಮ್ಮ ಮನಸ್ಸಿಗೆ ನೋವಾಗಿದ್ದು, ಎಲ್ಲಾ ಸಮುದಾಯಗಳ ಏಕತೆ ಮತ್ತು ಗೌರವದ ಮೌಲ್ಯಗಳಿಗೆ ವಿರುದ್ಧವಾಗಿವೆ. ನಾವು ಸೌಹಾರ್ದತೆಯನ್ನು ಉತ್ತೇಜಿಸಲು ಇಲ್ಲಿದ್ದೇವೆ, ಜನರನ್ನು ವಿಭಜಿಸಲು ಅಲ್ಲ” ಎಂದು ಅಝ್ಮಿ ಹೇಳಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರ | ಇವಿಎಂ ತಿರುಚಿದ ಆರೋಪ : ಪ್ರಮಾಣವಚನ ಸಮಾರಂಭ ಬಹಿಷ್ಕರಿಸಿದ ವಿಪಕ್ಷ ಶಾಸಕರು


