ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಮುನ್ನಡೆಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರಿಗೆ ಅವಕಾಶ ನೀಡಬೇಕು ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮಂಗಳವಾರ (ಡಿ.10) ಹೇಳಿದ್ದಾರೆ.
ಬಿಜೆಪಿ-ವಿರೋಧಿ ಒಕ್ಕೂಟದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಇಂಗಿತವನ್ನು ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ ಬೆನ್ನಲ್ಲೇ ಲಾಲು ಪ್ರಸಾದ್ ಯಾದವ್ ಅವರ ಪರ ಬ್ಯಾಟ್ ಬೀಸಿದ್ದಾರೆ.
ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್ ಮಮತಾ ಬ್ಯಾರ್ಜಿಯವರನ್ನು ಒಕ್ಕೂಟದ ನಾಯಕಿ ಎಂದು ಒಪ್ಪಿಕೊಂಡರೆ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಲಾಲು ಪ್ರಸಾದ್ ಹೇಳಿದ್ದಾರೆ.
“ಮಮತಾ ಬ್ಯಾನರ್ಜಿ ಸೇರಿದಂತೆ ಯಾವುದೇ ಹಿರಿಯ ನಾಯಕರು ಇಂಡಿಯಾ ಒಕ್ಕೂಟದ ನಾಯಕತ್ವ ವಹಿಸುವುದಾದರೆ ನಮ್ಮದೇನು ಅಭ್ಯಂತರ ಇಲ್ಲ. ಆದರೆ, ಒಮ್ಮತದ ಮೂಲಕ ನಿರ್ಧಾರಕ್ಕೆ ಬರಬೇಕು ಎಂದು ಈ ಹಿಂದೆ ಲಾಲು ಪ್ರಸಾದ್ ಯಾದವ್ ಅವರ ಮಗ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದರು.
ಡಿಸೆಂಬರ್ 6ರಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ ಇಂಡಿಯಾ ಒಕ್ಕೂಟದ ಕಾರ್ಯಾಚರಣೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ಅವಕಾಶ ನೀಡಿದರೆ ಒಕ್ಕೂಟದ ಜವಾಬ್ದಾರಿ ವಹಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಹುದ್ದೆಯ ಜೊತೆಗೆ ಪ್ರತಿಪಕ್ಷಗಳ ಒಕ್ಕೂಟವನ್ನು ಮುನ್ನಡೆಸುವ ಜವಬ್ದಾರಿಯನ್ನು ನಾನು ನಿಭಾಯಿಸಬಲ್ಲೆ ಎಂದಿದ್ದರು.
“ನಾನು ಇಂಡಿಯಾ ಒಕ್ಕೂಟ ರಚಿಸಿದ್ದೆ. ಅದನ್ನು ಮುನ್ನಡೆಸುವ ಜವಾಬ್ದಾರಿ ಈಗ ನಾಯಕತ್ವ ವಹಿಸಿರುವವರ ಮೇಲಿದೆ. ಅವರು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಅಂದರೆ ಏನು ಮಾಡುವುದು? ನಾನು ಒಂದನ್ನು ಹೇಳಲು ಇಚ್ಚಿಸುತ್ತೇನೆ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕಿದೆ” ಎಂದು ಬೆಂಗಾಲಿ ಸುದ್ದಿವಾಹಿನಿ ನ್ಯೂಸ್ 18 ಬಾಂಗ್ಲಾ ಜೊತೆಗಿನ ಸಂದರ್ಶನದಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದರು.
ಡಿಸೆಂಬರ್ 15 ರಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಡೆಸಲು ಉದ್ದೇಶಿರುವ ರಾಜ್ಯವ್ಯಾಪಿ ಯಾತ್ರೆಯ ಕುರಿತು ಮಾತನಾಡಿರುವ ಲಾಲು ಪ್ರಸಾದ್ ಯಾದವ್ “ಅವರು ತಮ್ಮ ಕಣ್ಣುಗಳನ್ನು ರಿಫ್ರೆಶ್ ಮಾಡಲು ರಾಜ್ಯಾದ್ಯಂತ ಯಾತ್ರೆ ನಡೆಸುತ್ತಿದ್ದಾರೆ. ಆರ್‌ಜೆಡಿ ನೇತೃತ್ವದ ಸಮ್ಮಿಶ್ರ ಸರ್ಕಾರ 2025ರಲ್ಲಿ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ” ಎಂದಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಡಿಸೆಂಬರ್ 15 ರಿಂದ ರಾಜ್ಯಾದ್ಯಂತ ‘ಮಹಿಳಾ ಸಂವಾದ ಯಾತ್ರೆ’ ಎಂಬ ಹೆಸರಿನಲ್ಲಿ ಯಾತ್ರೆ ನಡೆಸಲಿದ್ದಾರೆ. ಈ ವೇಳೆ ಅವರು ರಾಜ್ಯ ಸರ್ಕಾರದ ಏಳು-ಪರಿಹಾರ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಮತ್ತು ಮಹಿಳೆಯರೊಂದಿಗೆ ಸಂವಾದದ ಮೂಲಕ ಜನರ ನಾಡಿಮಿಡಿತ ಅರಿಯಲಿದ್ದಾರೆ.
ಇದನ್ನೂ ಓದಿ : ಅದಾನಿ ಭ್ರಷ್ಟಾಚಾರ | ಕಪ್ಪು ಬ್ಯಾಗ್ ಹಿಡಿದು ಪ್ರತಿಭಟನೆ ನಡೆಸಿದ ವಿಪಕ್ಷಗಳು


