ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ‘ಇಂಡಿಯಾ ಮೈತ್ರಿಕೂಟ’ ನಿರ್ಧರಿಸಿದೆ ಎಂದು ಎನ್‌ಸಿಪಿ (ಎಸ್‌ಪಿ- ಶರದ್ ಪವಾರ್ ಬಣ) ನಾಯಕ ಪ್ರಶಾಂತ್ ಸುದಮ್ರಾವ್ ಜಗತಾಪ್ ಹೇಳಿದ್ದಾರೆ.
ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಸುಪ್ರಿಯಾ ಸುಳೆ, ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್, ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರೊಂದಿಗೆ ಮಂಗಳವಾರ (ಡಿ.10) ರಾತ್ರಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಜಗತಾಪ್ ಅವರು ಈ ವಿಷಯ ತಿಳಿಸಿದ್ದಾರೆ.
“ನಮಗೆ ಸುಪ್ರೀಂ ಕೋರ್ಟ್ ಮೇಲೆ ಭರವಸೆ ಇದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯ ನಮ್ಮ ಪರ ಆದೇಶ ನೀಡಲಿದೆ” ಎಂದು ಜಗತಾಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಜಯಗಳಿಸಲು ನಡೆಸಿದ ಹಗರಣ ಸಂಬಂಧ ‘ಇಂಡಿಯಾ ಮೈತ್ರಿಕೂಟ’ದ ಪರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಇಂದು ಶರದ್ ಪವಾರ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ನಾವು ನಿರ್ಧರಿಸಿದ್ದೇವೆ. ಇಂಡಿಯಾ ಮೈತ್ರಿಕೂಟದ ಎಲ್ಲಾ ಪಕ್ಷಗಳು ಒಂದಾಗಿ ನ್ಯಾಯಾಲಯದ ಮೊರೆ ಹೋಗಲಿವೆ. ಮತಗಳ ಸಂಖ್ಯೆಯಲ್ಲಿ ಏರಿಕೆ, ಇವಿಎಂ-ವಿವಿಪ್ಯಾಟ್ ದುರ್ಬಳಕೆ ಕುರಿತು ನಾವು ದೂರು ನೀಡಲಿದ್ದೇವೆ. ಸುಪ್ರೀಂ ಕೋರ್ಟ್ ಮೇಲೆ ನಮಗೆ ಭರವಸೆ ಇದೆ. ಅದು ನಮ್ಮ ಪರವಾಗಿ ಮತ್ತು ಹಗರಣದ ವಿರುದ್ದ ಆದೇಶ ನೀಡಲಿದೆ” ಎಂದು ಪುಣೆ ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷರೂ ಆಗಿರುವ ಪ್ರಶಾಂತ್ ಸುದಮ್ರಾವ್ ಜಗತಾಪ್ ತಿಳಿಸಿದ್ದಾರೆ.
ಈ ನಡುವೆ ಮಹಾರಾಷ್ಟ್ರದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕಿರಣ್ ಕುಲಕರ್ಣಿ ಮತಯಂತ್ರಗಳ ದುರ್ಬಳಕೆ ಆರೋಪವನ್ನು ತಳ್ಳಿ ಹಾಕಿದ್ದು, “ಇವಿಎಂಗಳಲ್ಲಿ ಬಳಸುವ ಚಿಪ್‌ಗಳು ‘ಒನ್ ಟೈಂ ಪ್ರೊಗ್ರಾಮೇಬಲ್’ ಆಗಿದ್ದು, ಟ್ಯಾಂಪರಿಂಗ್ ಅಸಾಧ್ಯ” ಎಂದಿದ್ದಾರೆ.
“ಕೇಂದ್ರ ಚುನಾವಣಾ ಆಯೋಗ ಇವಿಎಂ ಮತ್ತು ವಿವಿಪ್ಯಾಟ್ ಮತಯಂತ್ರಗಳಲ್ಲಿ ಅಭ್ಯರ್ಥಿ ಪಡೆದ ಮತಗಳನ್ನು ಹೊಂದಾಣಿಕೆ (ಟ್ಯಾಲಿ) ಮಾಡಿ ನೋಡಲು ನಿರ್ದೇಶಿಸಿರುವುದರಿಂದ ಇವಿಎಂ ಕುರಿತು ತಪ್ಪು ತಿಳುವಳಿಕೆ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರ | VVPAT ಸ್ಲಿಪ್‌ಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ – ಚುನಾವಣಾ ಆಯೋಗ ಸ್ಪಷ್ಟನೆ


