ದೆಹಲಿಯ ಟಿಸ್ ಹಜಾರಿ ನ್ಯಾಯಾಲಯದಲ್ಲಿ ಶನಿವಾರ ನಡೆದ ಪೊಲೀಸರು ಮತ್ತು ವಕೀಲರ ನಡುವಿನ ಘರ್ಷಣೆಯ ಸಮಯದಲ್ಲಿ ಸಮವಸ್ತ್ರದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆಯಾಗಿದ್ದು ಆಕೆಯ ಲೋಡೆಡ್ ಗನ್ ಕಾಣೆಯಾಗಿದೆ ಎಂದು ತಿಳಿದುಬಂದಿದೆ.
ಇನ್ನು ವಕೀಲರು ಪೊಲೀಸರ ಮೇಲೆ ಮನಬಂದಂತೆ ದಾಳಿ ಮಾಡುತ್ತಿದ್ದಾಗ ರಕ್ಷಣೆಗಾಗಿ ಕೋಣೆಯಲ್ಲಿ ಪೊಲೀಸರು ಬಚ್ಚಿಟ್ಟುಕೊಂಡ ಸಂದರ್ಭದಲ್ಲಿ, ವಕೀಲರು ಪೊಲೀಸರ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವ ವಿಡಿಯೋವೊಂದು ಎಲ್ಲಾ ಕಡೆ ವೈರಲ್ ಆಗಿದ್ದು ಪೊಲೀಸರ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ.
ಆದರೆ ಆಶ್ಚರ್‍ಯಕರ ರೀತಿಯಲ್ಲಿ ಘಟನೆ ನಡೆದು ನಾಲ್ಕೈದು ದಿನಗಳಾದರೂ ಪೊಲೀಸರು ಇದುವರೆಗೂ ಯಾವುದೇ ದೂರನ್ನು ದಾಖಲಿಸಿಲ್ಲ. ಹಲ್ಲೆಗೊಳಗಾದ ಮಹಿಳಾ ಪೊಲೀಸ್ ಅಧಿಕಾರಿಯು ಸಹ.
ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಿರುವ (ಐಪಿಎಸ್) ಮಹಿಳೆ ಶನಿವಾರದಿಂದ ತನ್ನ 9 ಎಂಎಂ ಸರ್ವಿಸ್ ಪಿಸ್ತೂಲ್ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಆದರೆ ಇದರ ಕುರಿತು ಪ್ರಥಮ ಮಾಹಿತಿ ವರದಿಯನ್ನು ನೋಂದಾಯಿಸಲು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.
ಶನಿವಾರ ಹಜಾರಿ ಕೋರ್ಟ್ ಆವರಣದಲ್ಲಿ ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರನ್ನು ತೆಗೆಯುವಂತೆ ಪೊಲೀಸರ್ ವಕೀಲರಿಗೆ ತಾಕೀತು ಮಾಡಿದ ನಂತರ ಘರ್ಷಣೆ ಉಲ್ಬಣಗೊಂಡಿತ್ತು. ಸುಮಾರು 30 ಜನರು ಗಾಯಗೊಂಡರು. ವಕೀಲರು ತಮ್ಮ ಕಾರನ್ನು ನಿಲ್ಲಿಸದಂತೆ ತಡೆದ ಕಾನ್‌ಸ್ಟೆಬಲ್‌ನನ್ನು ಪೊಲೀಸರು ಹಸ್ತಾಂತರಿಸಬೇಕೆಂದು ವಕೀಲರು ಪಟ್ಟುಹಿಡಿದಿದ್ದರು. ವಕೀಲರ ದೂರುಗಳ ಆಧಾರದ ಮೇಲೆ ಪೊಲೀಸರು ಐದು ಪ್ರಕರಣಗಳನ್ನು ದಾಖಲಿಸಿದ್ದಾರೆ.


