ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಈ ಬಗ್ಗೆ ಆಂತರಿಕ ಸಂಸದೀಯ ಒಕ್ಕೂಟಕ್ಕೆ ಪತ್ರ ಬರೆದಿದ್ದಾಗಿ ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಮಹುವಾ ಅವರು “ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಇದು ಸಂಸದೀಯ ನಿಯಮ ಹಾಗೂ ನಡವಳಿಯ ಸಂಪೂರ್ಣ ಉಲ್ಲಂಘನೆಯಾಗಿದೆ. ರಿಜಿಜು ಅವರ ಮಾತನ್ನು ಕಡತದಿಂದ ತೆಗೆದು ಹಾಕುವುದಾಗಿ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಲಿಂಗ ತಾರತಮ್ಯ ಮತ್ತು ಬೆದರಿಕೆಯ ವಿರುದ್ದ ಆಂತರಿಕ ಸಂಸದೀಯ ಒಕ್ಕೂಟಕ್ಕೆ ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.
So @KirenRijiju openly threatens me in Lok Sabha today in complete violation of parliamentary rules & procedure. @ombirlakota says he will get Rijiju’s words deleted but no action yet. Written to @IPUparliament against this continued gender harassment & intimidation yet again.
— Mahua Moitra (@MahuaMoitra) December 13, 2024
ಶುಕ್ರವಾರ (ಡಿ.13) ಲೋಕಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆಯ ವೇಳೆ ನ್ಯಾಯಮೂರ್ತಿ ಲೋಯಾ ಪ್ರಕರಣವನ್ನು ಮಹುವಾ ಉಲ್ಲೇಖಿಸಿದ್ದರು. ಇದು ಲೋಕಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿತ್ತು. ಈ ವೇಳೆ ಪ್ರತಿಕ್ರಿಯಿಸಿದ್ದ ಸಚಿವ ಕಿರಣ್ ರಿಜಿಜು, ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವಾಗಿದ್ದು, ನಿಮ್ಮ ವಿರುದ್ದ ಸಂಸದೀಯ ಕ್ರಮಗಳನ್ನು ತೆಗೆದುಕೊಳ್ಳಬೇಕಾದಿತು ಎಂದು ಎಚ್ಚರಿಕೆ ನೀಡಿದ್ದರು.
ತಮ್ಮ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದ ಸಂಸದೆ ಮಹುವಾ ಅವರು, ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿರೋಧ ಪಕ್ಷಗಳನ್ನು ಹಣಿಯಲು ಅವುಗಳನ್ನು ಬಳಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ದೇಶದ ಸಂವಿಧಾನ ಸಂಘದ ನಿಯಮ ಪುಸ್ತಕವಲ್ಲ : ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ


