ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮದ್ಯ ಮತ್ತು ತಂಬಾಕಿನ ಜೊತೆಗೆ ಮಾಂಸಹಾರವನ್ನೂ ನಿಷೇಧ ಮಾಡಲಾಗಿದೆ ಎಂಬ ಕರ್ನಾಟಕ ಸಾಹಿತ್ಯ ಪರಿಷತ್ತಿನ ಆದೇಶದ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. 86 ವರ್ಷಗಳಿಂದ ಸಮ್ಮೇಳನಗಳಲ್ಲಿ ಬಹುಜನರ ಮಾಂಸಾಹಾರವನ್ನು ಅಘೋಷಿತವಾಗಿ ನಿಷೇಧ ಮಾಡಿರುವುದರ ವಿರುದ್ಧ ಮಂಡ್ಯದ ಜನತೆ ‘ಆಹಾರ ಕ್ರಾಂತಿಗೆ ಆಹ್ವಾನ’ ಎಂಬ ಅಭಿಯಾನ ಆರಂಭಿಸಿದ್ದಾರೆ.
ಮಾಂಸಹಾರ ನಿಷೇಧದ ವಿರುದ್ಧ ಆರಂಭಗೊಂಡಿರುವ ಅಭಿಯಾನಕ್ಕೆ ನಾಡಿನ ಪ್ರಗತಿಪರರು, ಬುದ್ಧಿಜೀವಿಗಳು ಮತ್ತು ಸಾಹಿತಿಗಳು ಬೆಂಬಲ ಸೂಚಿದ್ದಾರೆ. ಸಮ್ಮೇಳನದಲ್ಲಿ ಮಾಂಸಾಹಾರವೂ ಇರಬೇಕು ಎಂದು ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಸಮ್ಮೇಳನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಮಾಂಸಾಹಾರ ನಿಷೇಧದ ವಿಚಾರ ಇನ್ನಷ್ಡು ಗಂಭೀರ ಸ್ವರೂಪ ಪಡೆದುಕೊಂಡಿದೆ.

ರಕ್ಷಣಾ ವೇದಿಕೆಯಿಂದ ಬೈಕ್ ರ್‍ಯಾಲಿ
“ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬೈಕ್ ರ್‍ಯಾಲಿ ಮಾಡಿದ್ದೇವೆ. 86 ವರ್ಷಗಳಿಂದ ಇದುವರೆಗೂ ನಡೆದಿರುವ ಸಮ್ಮೇಳನಗಳಲ್ಲಿ ಸಸ್ಯಾಹಾರವನ್ನು ಮಾತ್ರ ಕೊಟ್ಟು ನಾಡಿನ ಬಹುಸಂಖ್ಯಾತರ ಮಾಂಸಾಹಾರಕ್ಕೆ ಅಘೋಷಿತ ನಿಷೇಧ ಹೇರಲಾಗಿದೆ” ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮಂಡ್ಯ ಜಿಲ್ಲಾಧ್ಯಕ್ಷರಾದ ಎಚ್.ಡಿ. ಜಯರಾಮು ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ (ಡಿ.24) ಅವರು ಮಂಡ್ಯ ನಗರದ ವಿ.ವಿ.ರಸ್ತೆಯಿಂದ ಜಿಲ್ಲಾಧಿಕಾರಗಳ ಕಚೇರಿವರೆಗೆ ಆಯೋಜಿಸಲಾಗಿದ್ದ ಬೈಕ್ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಬಾರಿ ನಮ್ಮ ಮಂಡ್ಯದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ಕೊಡಲೇಬೇಕು. ಇಲ್ಲವಾದರೆ ನಮ್ಮ ಸಂಘಟನೆ ಸಮ್ಮೇಳನ ನಡೆಯುವ ಜಾಗದಲ್ಲಿ ಉಗ್ರ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿದರು.
ಸಂವಿಧಾನದ ಆರ್ಟಿಕಲ್ 51A(ಎಚ್) ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ಅಸಮಾನತೆಯ ಸುಧಾರಣೆಗಾಗಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡು ಬಗೆಯ ಆಹಾರವನ್ನು ಸೇವಿಸಲು ಅವಕಾಶ ನೀಡಬೇಕು ಎಂದು ಹೇಳಲಾಗಿದೆ. ಜನರ ತೆರಿಗೆ ಹಣದಲ್ಲಿ ನಡೆಯುವ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧಿಸಿರುವುದು ಸಂವಿಧಾನ ವಿರೋಧಿ ನಡೆಯಾಗುತ್ತದೆ. ಶುದ್ಧ ಸಸ್ಯಾಹಾರಿ ಸಮ್ಮೇಳನ ನಡೆಸುವುದು ಬಹು ಸಂಖ್ಯಾತರಿಗೆ ಮಾಡುವ ಅಪಮಾನ ಆಗಿದೆ ಎಂದರು.
ಪ್ರಗತಿಪರ ಸಂಘಟನೆಗಳ ಜತೆ ಮಾತುಕತೆ: ಸಚಿವ ಚಲುವರಾಯಸ್ವಾಮಿ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರವೂ ಇರಬೇಕೆಂದು ಬೇಡಿಕೆ ಇಟ್ಟಿರುವ ಪ್ರಗತಿಪರ ಸಂಘಟನೆಗಳ ಜತೆ ಸೋಮವಾರ(ಡಿ.16) ಮಾತುಕತೆ ನಡೆಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಸಮ್ಮೇಳನದ ವೇದಿಕೆ ಸಿದ್ದತೆ ಪರಿಶೀಲನೆ ನಂತರ ಶನಿವಾರ ಮಾತನಾಡಿದ ಅವರು, ಮಾಂಸಾಹಾರ ಬೇಡಿಕೆ ಇಟ್ಟಿರುವ ಸಂಘಟನೆಗಳ ಮುಖಂಡರು ಭೇಟಿಗೆ ಮನವಿ ಮಾಡಿದ್ದು, ಸೋಮವಾರ ಅವರ ಜತೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ಸಮ್ಮೇಳನದಲ್ಲಿ ಸುಮಾರು ಒಂದರಿಂದ ಒಂದೂವರೆ ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಭಾಗವಹಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ; ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರ: ಮಂಡ್ಯ ಡಿಸಿ ಕಚೇರಿ ಎದುರು ಬಾಡೂಟ ಸೇವಿಸಿ ಪ್ರತಿಭಟನೆ


