ದೇಶದ ಖ್ಯಾತ ಸಂಗೀತ ಸಂಯೋಜಕ, ರಾಜ್ಯಸಭಾ ಸಂಸದ ಇಳಯರಾಜ ಅವರು ತಮಿಳುನಾಡಿನ ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸಿದಂತೆ ಅವರನ್ನು ಜೀಯರು ಹೊರಗೆ ಕಳುಹಿಸಿದ ಘಟನೆಯ ವಿಡಿಯೊಗಳು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.
ಶ್ರೀವಿಲ್ಲಿಪುತ್ತೂರಿನ ಪ್ರಸಿದ್ಧ ಆಂಡಾಳ್ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಇಳಯರಾಜ ದೇವರ ದರ್ಶನ ಪಡೆದಿದ್ದರು. ಇಳಯರಾಜ ಅವರನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಪರವಾಗಿ ಸ್ವಾಗತಿಸಲಾಯಿತು. ಇಳಯರಾಜ ಪೆರಿಯ ಪೆರುಮಾಳ್ ದೇಗುಲ, ನಂದವನಂ ಮತ್ತು ಆಂಡಾಳ್ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದರು.
ಆ ವೇಳೆ ಆಂಡಾಳ್ ದೇವಸ್ಥಾನದ ಗರ್ಭಗುಡಿಯ ಮುಂಭಾಗದ ಅರ್ಧ ಮಂಟಪಕ್ಕೆ ಪ್ರವೇಶಿಸಲು ಯತ್ನಿಸಿದಾಗ, ಅಲ್ಲಿದ್ದ ಜೀಯರು ಮತ್ತು ಭಕ್ತರು ಇಳಯರಾಜರನ್ನು ಅಲ್ಲಿ ತಡೆದಿದ್ದಾರೆ. ಈ ಘಟನೆ ಕೋಲಾಹಲಕ್ಕೆ ಕಾರಣವಾಗಿದೆ. ಸ್ವಾಗತ ಸಮಾರಂಭದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಿ ಇಳಯರಾಜ ಅವರನ್ನು ಅಲ್ಲಿಂದ ಹೊರಗೆ ಕಳುಹಿಸಿದರು. ನಂತರ ಇಳಯರಾಜ ದೇವಸ್ಥಾನದ ಅರ್ಧ ಮಂಟಪದಿಂದ ಹೊರಬಂದು ದೇವರ ದರ್ಶನ ಪಡೆದರು. ಬಳಿಕ ಅಲ್ಲಿನ ಅರ್ಚಕರು ಹೂಮಾಲೆ ಹಾಕಿ ನಮನ ಸಲ್ಲಿಸಿದರು. ಇಳಯರಾಜ ಅವರನ್ನು ಅರ್ಧ ಮಂಟಪದಿಂದ ಹೊರಹಾಕಿದ ಘಟನೆ ಸಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
“ಇಂತಹ ಆಚರಣೆಗಳು ಮೇಲು-ಕೀಳು ಎನ್ನುವುದನ್ನು ಮತ್ತೆ ಜೀವಂತವಾಗಿಡಲು ಕಾರಣವಾಗುತ್ತವೆ, ಜಾತಿ ಪದ್ಧತಿಯನ್ನು ಜೀವಂತವಾಗಿರಿಸುತ್ತವೆ” ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
“ಅಲ್ಲಿನ ಸಂಪ್ರದಾಯ ಇರುವುದೇ ಹಾಗೆ, ಅದನ್ನು ಅಲ್ಲಿನ ಪುರೋಹಿತರು ಪಾಲಿಸುತ್ತಿದ್ದಾರೆ. ತಿಳಿಯದೆ ಇಳಯರಾಜ ಒಳಗೆ ಪ್ರವೇಶ ಮಾಡಿದ್ದಾರೆ, ಅವರಿಗೆ ಅದನ್ನು ತಿಳಿಸಿದ ತಕ್ಷಣ ಹೊರಗೆ ಬಂದಿದ್ದಾರೆ. ವಿಡಿಯೋದಲ್ಲಿ ಯಾರೂ ಯಾರನ್ನೂ ಬಲವಂತಾಗಿ ಆಚೆ ಕಳಿಸಿಲ್ಲ ಅಥವಾ ನಿಂದಿಸಿಲ್ಲ. ಅಲ್ಲಿನ ಸಂಪ್ರದಾಯವನ್ನು ಪಾಲಿಸಲಾಗಿದೆ ಇದನ್ನು ವಿವಾದ ಮಾಡುವ ಅಗತ್ಯವಿಲ್ಲ” ಎಂದು ಕೆಲವರು ಸಮರ್ಥನೆ ಘಟಯನ್ನು ಸಮರ್ಥಿಸಿಕೊಂಡಿದ್ದಾರೆ.
ಭಾನುವಾರ ತಿರುವಣ್ಣಾಮಲೈ ಜಿಲ್ಲಾಧಿಕಾರಿಗೆ ಕೂಡ ದೇವಸ್ಥಾನದೊಳಗೆ ಪ್ರವೇಶಿಸಲು ಬಿಟ್ಟಿರಲಿಲ್ಲ. ಈಗ ಇಳಯರಾಜ ಅವರಿಗೂ ಅರ್ಧಮಂಟಪ ಪ್ರವೇಶಿಸಲು ಬಿಡದೇ ಇರುವುದು ವಿವಾದಕ್ಕೆ ಕಾರಣವಾಗಿದೆ.
ಇಳಯರಾಜ ಅನ್ನಕ್ಕಿಲಿ ಚಿತ್ರದ ಮೂಲಕ ಸಂಗೀತ ಸಂಯೋಜಕರಾಗಿ ಪಾದಾರ್ಪಣೆ ಮಾಡಿದರು. ಅವರು 45 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಸಂಗೀತದಿಂದ ತಮಿಳು ಚಿತ್ರರಂಗದ ಅಭಿಮಾನಿಗಳನ್ನು ಸೆಳೆದಿದ್ದಾರೆ. ಇಳಯರಾಜರ ವಯಸ್ಸು 80 ದಾಟಿದ್ದರೂ ಸಂಗೀತ ಸಂಯೋಜಕರಾಗಿಯೇ ಉಳಿದಿದ್ದಾರೆ.
ಇದನ್ನೂ ಓದಿ; ಬಿಜೆಪಿಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಎಂಕೆ ಸ್ಟಾಲಿನ್


