ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇಂದು (ಡಿ.17) ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಅನುವಾಗುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಗೆ ತರಲು ಸಾಂವಿಧಾನಿಕ ತಿದ್ದುಪಡಿ ಸೇರಿದಂತೆ ಎರಡು ಮಸೂದೆಗಳನ್ನು ಮಂಡಿಸಿದರು.
ಬಿಜೆಪಿಯ ಪ್ರಮುಖ ಪ್ರತಿಜ್ಞೆಗಳಲ್ಲಿ ಒಂದಾದ ಈ ಮಸೂದೆಗಳನ್ನು ಅದರ ಮಿತ್ರ ಪಕ್ಷಗಳಾದ ಟಿಡಿಪಿ, ಜನಸೇನಾ ಪಕ್ಷ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬೆಂಬಲಿಸಿದರೆ, ನಿರೀಕ್ಷೆಯಂತೆ ಪ್ರತಿಪಕ್ಷಗಳು ವಿರೋಧಿಸಿದವು.
VIDEO | Union Law Minister Arjun Ram Meghwal (@arjunrammeghwal) moves 'one nation, one election' bills for introduction in Lok Sabha.#OneNationOneElectionBill
(Source: Third Party)
(Full video available on PTI Videos – https://t.co/n147TvrpG7) pic.twitter.com/vgPvelEwLu
— Press Trust of India (@PTI_News) December 17, 2024
ಪ್ರತಿಪಕ್ಷಗಳು ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದವು “ಮಸೂದೆಯು ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನದ ಮೂಲ ರಚನೆಯ ಉಲ್ಲಂಘನೆಯಾಗಿದೆ” ಎಂದು ಆರೋಪಿಸಿದವು.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯು ಸಂವಿಧಾನದ ಮೂಲ ರಚನೆಯ ಸಿದ್ಧಾಂತದ ಮೇಲಿನ ಆಕ್ರಮಣ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಆಕ್ಷೇಪ ವ್ಯಕ್ತಡಿಸಿದರು. ಮಸೂದೆಯ ಮಂಡನೆ ಮತ್ತು ಪರಿಗಣನೆಯು ಸದನದ ಶಾಸಕಾಂಗದ ಸಾಮರ್ಥ್ಯವನ್ನು ಮೀರಿದೆ ಎಂದು ಪ್ರತಿಪಾದಿಸಿದರು. ಮಸೂದೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಕೂಡ ಮಸೂದೆಗಳನ್ನು ವಿರೋಧಿಸಿದರು. ಇದು ದೇಶದಲ್ಲಿ ‘ಸರ್ವಾಧಿಕಾರವನ್ನು ಜಾರಿಗೆ ತರುವ’ ಬಿಜೆಪಿಯ ಪ್ರಯತ್ನ ಎಂದು ಬಣ್ಣಿಸಿದರು.
ತಮ್ಮ ಪಕ್ಷದ ಆಕ್ಷೇಪವನ್ನು ವ್ಯಕ್ತಪಡಿಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಟುವಾದ ವಾಗ್ದಾಳಿ ನಡೆಸಿದರು. ಈ ಮಸೂದೆಗಳು ಚುನಾವಣಾ ಸುಧಾರಣೆಯಲ್ಲ. ಇದು ಒಬ್ಬ ವ್ಯಕ್ತಿಯ ಆಸೆ ಮತ್ತು ಕನಸಿನ ಈಡೇರಿಕೆ’ ಎಂದು ಹೇಳಿದರು.
ಶಿವಸೇನಾ (ಯುಬಿಟಿ) ನಾಯಕ ಅನಿಲ್ ದೇಸಾಯಿ ಮತ್ತು ಮುಸ್ಲಿಂ ಲೀಗ್‌ನ ಇ.ಟಿ ಮೊಹಮ್ಮದ್ ಬಶೀರ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳ ನಾಯಕರು ಕೂಡ ಮಸೂದೆಗಳ ಮಂಡನೆಯನ್ನು ವಿರೋಧಿಸಿದರು. ಡಿಎಂಕೆ ಸಂಸದ ಟಿಆರ್ ಬಾಲು ಮಸೂದೆಗೆ ವಿರೋಧ ವ್ಯಕ್ತಪಡಿಸಿ, ಅದನ್ನು ಜಂಟಿ ಸಂಸದೀಯ ಸಮಿತಿಗೆ ವರ್ಗಾಯಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಗಮನಾರ್ಹ ಸಂಗತಿಯೆಂದರೆ, ಕೇಂದ್ರ ಸರ್ಕಾರ ಮಂಡಿಸಿರುವ ಎರಡು ಮಸೂದೆಗಳಿಗೆ ಅನುಮೋದನೆ ಪಡೆಯುವುದು ಕೊಂಚ ಸವಾಲಾಗಿದೆ.
ಕೇಂದ್ರಾಡಳಿತ ಪ್ರದೇಶಗಳ ಮಸೂದೆಗೆ ಉಭಯ ಸದನಗಳಲ್ಲಿ ಸರಳ ಬಹುಮತದ ಅಗತ್ಯವಿದ್ದರೂ, ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಸದಸ್ಯರ ಬೆಂಬಲದ ಅಗತ್ಯವಿದೆ.
ಬಿಜೆಪಿಯ ಮಿತ್ರಪಕ್ಷಗಳಾದ ಟಿಡಿಪಿ, ಜನತಾದಳ (ಯುನೈಟೆಡ್), ಮತ್ತು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಸೇರಿದಂತೆ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿರುವ ಎಲ್ಲರೂ ಮಸೂದೆಯನ್ನು ಬೆಂಬಲಿಸಿದರೂ, ಎನ್‌ಡಿಎ ಸರ್ಕಾರಕ್ಕೆ ವಿರೋಧ ಪಕ್ಷಗಳ ಸದಸ್ಯರ ಬೆಂಬಲವೂ ಅಗತ್ಯವಿದೆ. ಇದರ ಜೊತೆಗೆ ಬಿಆರ್‌ಎಸ್, ಬಿಜೆಡಿ, ವೈಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಇತರ ತಟಸ್ಥ ಪಕ್ಷಗಳ ಬೆಂಬಲ ಬೇಕಾಗಿದೆ.
ಇದನ್ನೂ ಓದಿ : ಮಾ. 2026ರೊಳಗೆ ನಕ್ಸಲೀಯರ ಸಂಪೂರ್ಣ ತೊಡೆದು ಹಾಕಲು ಜಂಟಿ ಸಿದ್ಧತೆ: ಅಮಿತ್ ಶಾ


