ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ವಿವಾದಿತ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಗೆ ಅನುವು ಮಾಡಿಕೊಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಇಂದು (ಡಿ.17) ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತು.
ಬಳಿಕ ಮಸೂದೆಯ ಒಪ್ಪಿಗೆ ಪಡೆಯಲು ಮತಯಂತ್ರದ ಮೂಲಕ ನಡೆದ ಮತ ಚಲಾವಣೆ ಪ್ರಕ್ರಿಯೆಯಲ್ಲಿ 269 ಸದಸ್ಯರು ಮಸೂದೆಯ ಪರವಾಗಿ ಹಾಗೂ 198 ಸದಸ್ಯರು ವಿರೋಧವಾಗಿ ಮತ ಹಾಕಿದ್ದಾರೆ.
ಹೊಸ ಸಂಸತ್ ಭವನದಲ್ಲಿ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರವನ್ನು ಬಳಸಲಾಯಿತು.
ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಮಸೂದೆಯನ್ನು ತೀವ್ರವಾಗಿ ವಿರೋಧಿಸಿವೆ. ಇದು ಸಂವಿಧಾನವನ್ನು ಬುಡಮೇಲು ಮಾಡುವ ಮಸೂದೆ ಎಂದಿವೆ.
ಮಸೂದೆ ಮಂಡನೆ ಬಳಿಕ, ಅದನ್ನು ವಿಸ್ಕೃತ ಚರ್ಚೆಗೆ ಜಂಟಿ ಸಂಸದೀಯ ಸಮಿತಿಗೆ ಕಳುಹಿಸುವುದಾಗಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಗೃಹ ಸಚಿವ ಅಮಿತ್ ಶಾ ಹೇಳಿದರು.
ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಸದಸ್ಯರ ಬೆಂಬಲದ ಅಗತ್ಯವಿದೆ. ಆ ಬೆಂಬಲವನ್ನು ಪಡೆದುಕೊಂಡು ಬಿಜೆಪಿ ಮಸೂದೆಗೆ ಅಂಗೀಕಾರ ಪಡೆಯಲಿದೆಯಾ? ಎಂದು ಕಾದು ನೋಡಬೇಕಿದೆ. ಅದಕ್ಕೂ ಮುನ್ನ ಮಸೂದೆ ಜಂಟಿ ಸಂಸದೀಯ ಸಮಿತಿಗೆ ಹೋಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಲೋಕಸಭೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡನೆ : ಪ್ರತಿಪಕ್ಷಗಳಿಂದ ತೀವ್ರ ವಿರೋಧ


