ಉತ್ತರ ಕೇರಳದಲ್ಲಿ ಹಲವು ಶಾಖೆಗಳನ್ನು ಹೊಂದಿರುವ ದೈಹಿಕ ವ್ಯಾಯಾಮ ಕ್ಲಬ್ ‘MEC-7’ ಪ್ರಸ್ತುತ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.
ಕೇರಳದ ಆಡಳಿತಾರೂಢ ಸಿಪಿಐ(ಎಂ)ನ ತಳಿಪರಂಬ ಪ್ರದೇಶ ಸಮಿತಿ ಸಮ್ಮೇಳನದಲ್ಲಿ ಪಕ್ಷದ ಕೋಝಿಕೋಡ್ ಜಿಲ್ಲಾ ಕಾರ್ಯದರ್ಶಿ ಪಿ.ಮೋಹನನ್ ಅವರು MEC-7 ಜಮಾತ್-ಎ-ಇಸ್ಲಾಮಿ ಮತ್ತು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆ ಸಂಪರ್ಕ ಹೊಂದಿದೆ ಎಂದು ಇತ್ತೀಚೆಗೆ ಆರೋಪಿಸಿದ್ದರು. ಆ ಬಳಿಕ MEC-7 ಸುತ್ತ ಚರ್ಚೆ ಹೆಚ್ಚಾಗಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ (ಎಪಿ ವಿಭಾಗ) ಕೂಡ MEC-7 ವಿರುದ್ದ ಹೇಳಿಕೆ ನೀಡಿದೆ.
“MEC-7 ಹಿಂದೆ ದೇಶ ವಿರೋಧಿ ಶಕ್ತಿಗಳಿವೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಆರೋಪಿಸಿದ್ದು, ರಾಜ್ಯ ಸರ್ಕಾರ ಈ ಗುಂಪಿನ ಕುರಿತು ಕೇಂದ್ರ ಸರ್ಕಾರಕ್ಕೆ ಏಕೆ ವರದಿ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ. MEC-7 ಜಮಾತೆ ಇಸ್ಲಾಮಿಯೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಿರುವ ಸಮಸ್ತ (ಎಪಿ ವಿಭಾಗ) ಸುನ್ನಿಗಳು ಅದರಿಂದ ದೂರ ಇರುವಂತೆ ಎಚ್ಚರಿಕೆ ನೀಡಿದೆ. ಇತರ ಗುಂಪುಗಳು ಕೂಡ ಇದೇ ರೀತಿಯ ಆರೋಪಗಳನ್ನು ಮಾಡಿವೆ. ಈ ಬೆನ್ನಲ್ಲೇ ಕೇರಳ ಪೊಲೀಸ್ ಇಲಾಖೆಯ ವಿಶೇಷ ವಿಭಾಗ ಈ ಕ್ಲಬ್ ಬಗ್ಗೆ ತನಿಖೆ ಪ್ರಾರಂಭಿಸಿದೆ ಎಂದು ಕೆಲ ವರದಿಗಳು ಹೇಳಿವೆ.
ತಮ್ಮ ವಿರುದ್ದದ ಎಲ್ಲಾ ಆರೋಪಗಳನ್ನು MEC-7 ತಂಡ ಅಲ್ಲಗಳೆದಿದ್ದು, “ದೈಹಿಕ ವ್ಯಾಯಾಮಗಳನ್ನು ಮಾಡಿಸುವ ಮೂಲಕ ಆರೋಗ್ಯ ವೃದ್ದಿಯ ಕೆಲಸ ಮಾಡಿಸುವುದು ಮಾತ್ರ ನಮ್ಮ ಗುರಿ” ಎಂದಿದೆ.

“MEC-7 ಎಲ್ಲರಿಗೂ ಮುಕ್ತ”
MEC-7 ಎಂದು ಕರೆಯಲ್ಪಡುವ ‘ಮಲ್ಟಿ-ಎಕ್ಸರ್ಸೈಸ್ ಕಾಂಬಿನೇಶನ್’ (Multi-Exercise Combination) ಎಂಬ ತಂಡವನ್ನು ಮಾಜಿ ಮಿಲಿಟರಿ ಅಧಿಕಾರಿ ಸಲಾಹುದ್ದೀನ್. ಪಿ 2012ರಲ್ಲಿ ಸ್ಥಾಪಿಸಿದರು. ಇದು ಯೋಗ, ಧ್ಯಾನ ಸೇರಿದಂತೆ ಏಳು ಪ್ರಕಾರದ ವ್ಯಾಯಾಮಗಳನ್ನು ಸುಮಾರು 21-25 ನಿಮಿಷಗಳ ಕಾಲ ಮಾಡುವ ಗುಂಪಾಗಿದೆ. ಆರಂಭದ ಹತ್ತು ವರ್ಷಗಳ ಕಾಲ ಕೊಂಡೊಟ್ಟಿಯಲ್ಲಿ ಒಂದು ಗುಂಪಿಗೆ ಮಾತ್ರ MEC-7 ಸೀಮಿತವಾಗಿತ್ತು. ನಂತರ, ಇದು ಕೇರಳದ ವಿವಿಧ ಭಾಗಗಳಿಗೆ ವಿಸ್ತರಿಸಿತು.
“MEC-7 ಮುಸ್ಲಿಮರಿಗೆ ಮಾತ್ರ ಸೀಮಿತವಾಗಿದೆ ಎನ್ನುವುದು ಅದರ ವಿರುದ್ದ ಆರೋಪಗಳು ಕೇಳಿ ಬರಲು ಕಾರಣ. ಆದರೆ, ನಮ್ಮ ತಂಡ ಧರ್ಮ, ಜಾತಿ, ಲಿಂಗ ರಹಿತವಾಗಿ ಆಸಕ್ತಯುಳ್ಳ ಎಲ್ಲರಿಗೂ ಮುಕ್ತವಾಗಿದೆ” ಎಂದು MEC-7 ಕ್ಲಬ್ ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
“ಸಿಪಿಐ(ಎಂ), ಆರ್‌ಎಸ್‌ಎಸ್ ಸೇರಿದಂತೆ ಎಲ್ಲಾ ಹಿನ್ನೆಲೆಯ ಜನರು ನಮ್ಮ ವ್ಯಾಯಾಮ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ನಾವು ಯಾವುದೇ ರಾಜಕೀಯ ಚರ್ಚೆ ನಡೆಸುವುದಿಲ್ಲ. ನಮ್ಮ ಗುರಿ ಕೇವಲ ಆರೋಗ್ಯದ ವಿಚಾರ ಮಾತ್ರ” ಎಂದು ಕೋಝಿಕ್ಕೋಡ್‌ನ ಸ್ಥಳೀಯ ನಿವಾಸಿ ಎಸ್.ಪಿ ರಶೀದ್ ಹೇಳಿರುವುದಾಗಿ ನ್ಯೂಸ್ ಮಿನಿಟ್ ತಿಳಿಸಿದೆ.
ರಶೀದ್ ಒಂಬತ್ತು ತಿಂಗಳ ಹಿಂದೆ MEC-7ಗೆ ಸೇರಿಕೊಂಡಿದ್ದು, ಪ್ರಸ್ತುತ ಅವರು ವಾಸಿಸುತ್ತಿರುವ ಚೆರುವನ್ನೂರಿನಲ್ಲಿ ಇತರರಿಗೆ ತರಬೇತಿ ನೀಡುತ್ತಿದ್ದಾರೆ.
“ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನೀವು MEC-7ಗೆ ಸೇರಬಹುದು. ಯಾರೂ ಬರುವಂತೆ ಒತ್ತಡ ಹೇರುವುದಿಲ್ಲ. ನಿಮಗೆ ಕಷ್ಟವಾದರೆ ಬರುವುದನ್ನು ನಿಲ್ಲಿಸಬಹುದು. ಅಂತಿಮವಾಗಿ, ನೀವು ಆರೋಗ್ಯಕರ ಜೀವನವನ್ನು ಬಯಸುತ್ತೀರೋ ಇಲ್ಲವೋ ಎಂಬುವುದು ನಿಮ್ಮ ಆಯ್ಕೆಯಾಗಿದೆ. ನಮ್ಮ ತಂಡ ಸೇರಲು ಯಾವುದೇ ಪ್ರವೇಶ ಶುಲ್ಕ ಮತ್ತು ಪ್ರಕ್ರಿಯೆ ಇಲ್ಲ” ಎಂದು ರಶೀದ್ ಹೇಳಿದ್ದಾರೆ.
“ಕೆಲವು ತಿಂಗಳ ತರಬೇತಿಯ ನಂತರ, MEC-7 ತುಂಬಾ ಪ್ರಯೋಜನಕಾರಿ ಎಂದು ನಾನು ಕಂಡುಕೊಂಡೆ. ಹಾಗಾಗಿ, ನಾನು ಕೋಝಿಕ್ಕೋಡ್‌ನಲ್ಲಿರುವ ನನ್ನ ಪ್ರದೇಶದ ಬಳಿ ಒಂದು ಗುಂಪನ್ನು ಪ್ರಾರಂಭಿಸಿದೆ. ಈಗ ನನ್ನೊಂದಿಗೆ ಸುಮಾರು 100 ಮಂದಿ ವ್ಯಾಯಾಮದಲ್ಲಿ ಭಾಗವಹಿಸುತ್ತಿದ್ದಾರೆ” ಎಂದು ರಶೀದ್ ತಿಳಿಸಿದ್ದಾರೆ.
“ಸಿಪಿಐ(ಎಂ) ಮುಸ್ಲಿಮರ ವಿರುದ್ಧ ಪೂರ್ವಗ್ರಹ ಪೀಡಿತವಾಗಿದೆ”
ಸಿಪಿಐ(ಎಂ) ನಾಯಕ ಮೋಹನನ್ ಅವರ MEC-7 ಕುರಿತ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಮುಸ್ಲಿಂ ಕೂಟಗಳ ಬಗ್ಗೆ ಸಿಪಿಐ(ಎಂ) ಪೂರ್ವಾಗ್ರಹ ಪೀಡಿತ ದೃಷ್ಟಿಕೋನವನ್ನು ಪ್ರಸಾರ ಮಾಡುವ ಮೂಲಕ ಸಂಘ ಪರಿವಾರದ ಸಂಘಟನೆಗಳ ಕಾರ್ಯಸೂಚಿಗೆ ನೆರವು ನೀಡುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.
“ರಾಜ್ಯದಲ್ಲಿ ಆರ್‌ಎಸ್‌ಎಸ್‌ನ ಶಾಖೆಗಳು ನಿರಾತಂಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಅದರ ಬಗ್ಗೆ ಯಾವುದೇ ತಕರಾರು ಇಲ್ಲದಿರುವಾಗ ವ್ಯಾಯಾಮದ ಗುಂಪೊಂದು ಕೆಂಗಣ್ಣಿಗೆ ಗುರಿಯಾಗಿರುವುದು ಏಕೆ? ಎಂದು ರಾಜ್ಯ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ಅಭಿನ್ ವರ್ಕಿ ಪ್ರಶ್ನಿಸಿದ್ದಾರೆ. ಡಿಸೆಂಬರ್ 17 ರಂದು ಮಲಪ್ಪುರಂನಲ್ಲಿ MEC-7 ಗುಂಪಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿನ್ ವರ್ಕಿ, “MEC-7 ವಿರುದ್ದ ವಿವಾದ ಅನಗತ್ಯ” ಎಂದಿದ್ದಾರೆ.
ಇದಕ್ಕೂ ಎರಡು ದಿನಗಳ ಮೊದಲು, ಡಿಸೆಂಬರ್ 15 ರಂದು, ಕಾಂಗ್ರೆಸ್‌ನ ಪಾಲಕ್ಕಾಡ್ ಸಂಸದ ವಿಕೆ ಶ್ರೀಕಂದನ್ MEC-7 ಪಟ್ಟಾಂಬಿ ಗುಂಪನ್ನು ಉದ್ಘಾಟಿಸಿ ಬೆಂಬಲ ವ್ಯಕ್ತಪಡಿಸಿದ್ದರು.
ಸಿಪಿಐ(ಎಂ)ನ ಮೋಹನನ್ ಅವರ ಹೇಳಿಕೆಯನ್ನು ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್‌ಕೆಎಸ್‌ಎಸ್‌ಎಫ್) ರಾಜ್ಯ ಉಪಾಧ್ಯಕ್ಷ ಸತ್ತಾರ್ ಪಂದಲ್ಲೂರ್ ವಿರೋಧಿಸಿದ್ದು, “ಮುಸ್ಲಿಮರು ಅಥವಾ ಮುಸ್ಲಿಮರ ಗುಂಪುಗಳನ್ನು ಅನುಮಾನದ ಕಣ್ಣಿನಿಂದ ನೋಡುವುದು ಸ್ವೀಕಾರ್ಹವಲ್ಲ” ಎಂದಿದ್ದಾರೆ.
ಸಿಪಿಐ(ಎಂ) ತೊರೆದು ಕಾಂಗ್ರೆಸ್ ಸೇರಿದ ಮುಸ್ಲಿಂ ಮುಖಂಡ
ಅಲ್ಪಸಂಖ್ಯಾತರ ಮೇಲೆ ಅನುಮಾನ ವ್ಯಕ್ತಪಡಿಸಿ ಮೋಹನನ್ ಹೇಳಿಕೆ ನೀಡಿದ್ದಾರೆ ಎಂದಿರುವ ಸಿಪಿಐ(ಎಂ) ನಡುವನ್ನೂರು ಶಾಖೆಯ ಕಾರ್ಯದರ್ಶಿ ಅಕ್ಬರ್ ಅಲಿ ಅವರು ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಕ್ಬರ್ ಅವರು ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ನ ಮಾಜಿ ನಾಯಕರೂ ಆಗಿದ್ದರು.
ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮೋಹನನ್ ಅವರು ತನ್ನ ಹೇಳಿಕೆಯನ್ನು ಹಿಂಪಡೆದಿದ್ದು, “ಸಿಪಿಐ(ಎಂ) MEC-7 ಅನ್ನು ವಿರೋಧಿಸುವುದಿಲ್ಲ” ಎಂದು ಹೇಳಿದ್ದಾರೆ.
“ಜಮಾತ್-ಎ-ಇಸ್ಲಾಮಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ), ಮತ್ತು ಸಂಘ ಪರಿವಾರ ಸೇರಿದಂತೆ ಧಾರ್ಮಿಕ ದ್ವೇಷವನ್ನು ಹರಡುವ ಗುಂಪುಗಳಿವೆ. ಈ ಸಂಸ್ಥೆಗಳು ತಮ್ಮ ಕೋಮುವಾದಿ ಕಾರ್ಯಸೂಚಿಯನ್ನು ಉತ್ತೇಜಿಸಲು MEC-7ನಂತಹ ಗುಂಪುಗಳಿಗೆ ನುಸುಳುತ್ತವೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು. ನನ್ನ ಹೇಳಿಕೆಯ ಉದ್ದೇಶವೂ ಇದೇ ಆಗಿತ್ತು” ಎಂದು ಮೋಹನನ್ ಅವರು ಡಿಸೆಂಬರ್ 15ರಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಮಸ್ತ (ಎಪಿ ವಿಭಾಗ) ಕೂಡ ತನ್ನ ಹೇಳಿಕೆಯನ್ನು ಬದಲಿಸಿದ್ದು, ಯಾವುದೇ ನಿರ್ದಿಷ್ಟ ಧಾರ್ಮಿಕ ಗುಂಪನ್ನು ಗುರಿಯಾಗಿಸುವ ಉದ್ದೇಶವಿಲ್ಲ ಎಂದು ಸಮರ್ಥಿಸಿಕೊಂಡಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಮಸ್ತ (ಎಪಿ ವಿಭಾಗ) ನಾಯಕ ಅಬ್ದುಲ್ ಹಕ್ಕಿಂ ಅಝ್ಹರಿ, “ನಮ್ಮ ಸಂಘಟನೆ ಮಹಿಳೆಯರ ದೇಹದ ಅಸಭ್ಯ ಪ್ರದರ್ಶನವನ್ನು ಮಾತ್ರ ವಿರೋಧಿಸಿದೆ” ಎಂದು ಹೇಳಿದ್ದಾರೆ.
ಮೋಹನನ್ ಅವರು ತನ್ನ ಹೇಳಿಕೆಯನ್ನು ಹಿಂಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಸುರೇಂದ್ರನ್, “ಸಿಪಿಐ(ಎಂ) ಧಾರ್ಮಿಕ ಉಗ್ರಗಾಮಿಗಳಿಗೆ ಹೆದರಿ ತನ್ನ ನಿಲುವು ಬದಲಿಸಿದೆ” ಎಂದು ಹೇಳಿದ್ದಾರೆ. ಮೋಹನನ್ ಎತ್ತಿರುವ ವಿಚಾರ ಗಂಭೀರವಾಗಿದ್ದು, ತನಿಖೆ ನಡೆಸಬೇಕು ಎಂದು ಅವರು ತಮ್ಮ ಆಗ್ರವನ್ನು ಪುನರುಚ್ಚರಿಸಿದ್ದಾರೆ.
ಕೃಪೆ : ದಿ ನ್ಯೂಸ್ ಮಿನಿಟ್
ಇದನ್ನೂ ಓದಿ : ಬೆಂಗಳೂರು ಐಐಎಂನಲ್ಲಿ ಜಾತಿ ದೌರ್ಜನ್ಯ : ನಿರ್ದೇಶಕ, 7 ಪ್ರಾಧ್ಯಾಪಕರ ವಿರುದ್ಧ ಎಫ್‌ಐಆರ್ ದಾಖಲು


