ರಾಜ್ಯಸಭೆ ಭಾಷಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನಿಸಿದ ಮನುವಾದಿ ಅಮಿತ್ ಶಾ ರಾಜೀನಾಮೆ ಕೊಡೋವರೆಗೂ ಹೋರಾಟ ನಿಲ್ಲಿಸಲ್ಲ ಎಂದು ಕಲಬುರಗಿ ದಲಿತ ಸಂಘರ್ಷ ಸಮಿತಿ ಹಿರಿಯ ನಾಯಕ ಡಾ. ಡಿ.ಜಿ.ಸಾಗರ್ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಸಚಿವ, ಮನುವಾದಿ ಅಮಿತ್ ಶಾ ಅವರ ಹೀನ ಮನಸ್ಥಿತಿ ಬಯಲಾಗಿದೆ. ಆತನಿಂದ ಕೂಡಲೇ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ, ರಾಜೀನಾಮೆ ಕೊಡೋವರೆಗೂ ಹೋರಾಟ ನಿಲ್ಲಿಸಲ್ಲ” ಎಂದು ಎಚ್ಚರಿಕೆ ನೀಡಿದರು.
ಡಿ.24ರಂದು ಕಲಬುರಗಿ ಬಂದ್
ಅಂಬೇಡ್ಕರ್‌ಗೆ ಅವಮಾನ ಖಂಡಿಸಿ, ಡಿ.24ರಂದು ದಲಿತ ಪರ ಸಮಘಟನೆಗಳು ಹಾಗೂ ಮತ್ತಿತರ ಸಂಘಟನೆಗಳು ಕಲಬುರಗಿ ಬಂದ್ ಗಾಗಿ ಕರೆ ನೀಡಿವೆ. ಈ ಕರೆಗೆ ನಮ್ಮ ಸಂಘಟನೆಯು ಸಂಪೂರ್ಣ ಬೆಂಬಲಿಸಲಿದೆ. 2025ರ ಜ.6ರಂದು ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ, ಆಯಾ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
“ಸಂವಿಧಾನಕ್ಕೆ 75 ವರ್ಷಗಳು ತುಂಬಿದ ಈ ಹೊತ್ತಲ್ಲಿ, ಅಮಿತ್ ಶಾ ಅಂಬೇಡ್ಕರ್‌ಗೆ ಅವಮಾನ ಮಾಡಿರುವುದು ಕೋಟ್ಯಂತರ ಜನರಿಗೆ ಅವಮಾನ ಮಾಡಿದಂತಾಗಿದೆ. ಆತ ಕೂಡಲೇ ರಾಜೀನಾಮೆ ನೀಡಬೇಕು; ಇಲ್ಲದಿದ್ದರೆ ಪ್ರಧಾನಿಗಳು ಆತನನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.
“ಡಾ.ಅಂಬೇಡ್ಕರ್ ಅವರು ಸಂವಿಧಾನದ ಅಡಿಯಲ್ಲಿ ದೇಶದ ದಮನಿತರಿಗೆ ಸಾಮಾಜಿಕ ನ್ಯಾಯ, ಮೀಸಲಾತಿ ಸೇರಿದಂತೆ ಸ್ವಾಭಿಮಾನಿಯಾಗಿ ಬದುಕಲು ಹಕ್ಕುಗಳು ಒದಗಿಸಿದ್ದಾರೆ. ಅಂತಹ ಅಂಶಗಳನ್ನು ವಿರೋಧಿಸುವ ಬಿಜೆಪಿ, ನೇರವಾಗಿ ಅಂಬೇಡ್ಕರ್ ಅವರನ್ನೇ ಗುರಿಯಾಗಿಟ್ಟುಕೊಂಡಿವೆ. ಬಿಜೆಪಿ ಆಗಿನಿಂದಲೂ ಬಾಬಾ ಸಾಹೇಬರನ್ನು ಅಪಮಾನಿಸುತ್ತಲೇ ಬಂದಿದೆ. ಬಿಜೆಪಿ ಸರ್ಕಾರದ ಜಾತಿವಾದಿ ಧೋರಣೆ, ದಲಿತ ವಿರೋಧಿ ನಿಲುವು ಅಮಿತ್ ಶಾ ಮೂಲಕ ಬಯಲಾಗಿದೆ” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಒದಿ; ಅಮಿತ್ ಶಾಗೆ ಹುಚ್ಚು ನಾಯಿ ಕಚ್ಚಿದೆ – ಪ್ರಿಯಾಂಕ್ ಖರ್ಗೆ ವಾಗ್ದಾಳಿ


