ಮಾಜಿ ಸೊಸೆ ನಿಕಿತಾ ಸಿಂಘಾನಿಯಾ ಜೊತೆಯಲ್ಲಿರುವ ಮೊಮ್ಮಗನನ್ನು ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಕೋರಿ ಡಿಸೆಂಬರ್ 9ರಂದು ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ ತಾಯಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಡಿಸೆಂಬರ್ 20ರಂದು ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಕರ್ನಾಟಕ, ಉತ್ತರ ಪ್ರದೇಶ ಹಾಗೂ ಹರಿಯಾಣ ಸರ್ಕಾರಗಳ ಪ್ರತಿಕ್ರಿಯೆ ಕೇಳಿದ್ದು, ಅಪ್ರಾಪ್ತ ಮಗುವಿನ ಸ್ಥಳ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸುಭಾಷ್ ಅವರಿಂದ ದೂರವಾಗಿದ್ದ ನಿಕಿತಾ ಹರಿಯಾಣದ ಗುರುಗ್ರಾಮದಲ್ಲಿ ನೆಲೆಸಿದ್ದರು. ಆಕೆಯ ತಾಯಿ ಮತ್ತು ಸಹೋದರ ಉತ್ತರ ಪ್ರದೇಶದ ನಿವಾಸಿಗಳು. ಹೀಗಾಗಿ, ಮೂರು ರಾಜ್ಯ ಸರ್ಕಾರಗಳನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಲಾಗಿದೆ.
ಮಗು ಇರುವ ಸ್ಥಳವನ್ನು ಮಾಜಿ ಸೊಸೆ ಬಹಿರಂಗಪಡಿಸುತ್ತಿಲ್ಲ ಎಂದು ಆರೋಪಿಸಿ ಅತುಲ್ ಅವರ ತಾಯಿ ನ್ಯಾಯಾಲಯದ ಮೊರೆ ಹೋಗಿದ್ದರು. ಹಿರಿಯ ವಕೀಲ ಗೌರವ್ ಅಗರವಾಲ್ ಹಾಗೂ ವಕೀಲ ಕುಮಾರ್ ದುಶ್ಯಂತ್ ಸಿಂಗ್ ತಾಯಿ ಪರ ವಾದ ಮಂಡಿಸಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ 34 ವರ್ಷದ ಅತುಲ್ ಸುಭಾಷ್ ಡಿ.9ರಂದು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ವಿಚ್ಚೇದಿತ ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ಅವರ ಕುಟುಂಬ ತನಗೆ ಕಿರುಕುಳ ನೀಡಿದೆ ಎಂದು ಸಾಯುವ ಮುನ್ನ ಅತುಲ್ ಡೆತ್ ನೋಟ್ ಬರೆದಿಟ್ಟಿದ್ದರು. ಅಲ್ಲದೆ, 90 ನಿಮಿಷಗಳ ವಿಡಿಯೋ ಕೂಡ ರೆಕಾರ್ಡ್ ಮಾಡಿದ್ದರು.
ಉತ್ತರ ಪ್ರದೇಶದ ಜೌನ್‌ಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ, ಜೀವನಾಂಶ ಮತ್ತು ಮಕ್ಕಳ ಪಾಲನೆಗೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಯುತ್ತಿರುವಾಗಲೇ, ವಿಚ್ಚೇದಿತ ಪತ್ನಿ ನಿಕಿತಾ ಸಿಂಘಾನಿಯಾ ಮತ್ತವರ ಕುಟುಂಬ ತನ್ನ ವಿರುದ್ಧ ಅನೇಕ ವೈವಾಹಿಕ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದೆ ಎಂದು ಅತುಲ್ ಅವರು ಸಾಯುವ ಮುನ್ನ ಮಾಡಿದ ವಿಡಿಯೋದಲ್ಲಿ ಆರೋಪಿಸಿದ್ದರು.
ವಿಡಿಯೋ ವೈರಲ್ ಆದ ಬಳಿಕ ಅತುಲ್ ಅವರ ವಿಚ್ಚೇದಿತ ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ಆಕೆಯ ಕುಟುಂಬಸ್ಥರನ್ನು ಬಂಧಿಸುವಂತೆ ಜನರು ಒತ್ತಾಯಿಸಿದ್ದರು. ನಂತರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಅತುಲ್ ಸುಭಾಷ್ ಅವರ ವಿಚ್ಛೇದಿತ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಮತ್ತು ಸಹೋದರ ಅನುರಾಗ್ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ‘ಪುಷ್ಪ-2’ ಕಾಲ್ತುಳಿತ ಪ್ರಕರಣ : ಸಿಎಂ ರೇವಂತ್ ರೆಡ್ಡಿ- ನಟ ಅಲ್ಲು ಅರ್ಜುನ್ ನಡುವೆ ತಾರಕಕ್ಕೇರಿದ ವಾಗ್ಯುದ್ಧ


