ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರಗಳು ಗ್ಯಾರಂಟಿ ಯೋಜನೆಯ ಭಾಗವಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದನ್ನು ಬಿಜೆಪಿ ಟೀಕೆ ಮಾಡುತ್ತಿದೆ. ಈ ನಡುವೆ ಅದರ ಮಿತ್ರ ಪಕ್ಷ ಟಿಡಿಪಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಉಚಿತ ಬಸ್ ಪ್ರಯಾಣದ ಕುರಿತು ಪರಿಶೀಲಿಸಲು ಸಮಿತಿ ರಚಿಸಿದೆ.
ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ಡಿ.21ರಂದು ಸರ್ಕಾರ ರಚಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಗಿರಿಜನ ಕಲ್ಯಾಣ ಸಚಿವೆ ಗುಮ್ಮಡಿ ಸಂಧ್ಯಾ ರಾಣಿ, ಗೃಹ ಸಚಿವೆ ವಿ ಅನಿತಾ ಸಮಿತಿಯ ಸದಸ್ಯರಾಗಿದ್ದಾರೆ.
ಸಾರಿಗೆ, ರಸ್ತೆ ಮತ್ತು ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸಮಿತಿಯ ಸಂಚಾಲಕರಾಗಿರುತ್ತಾರೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಸಮಿತಿ ರಚನೆ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ವೈ.ಎಸ್ ಶರ್ಮಿಲಾ ಅವರು, “ಟಿಡಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ವಿಳಂಬ ತಂತ್ರಗಳನ್ನು ಅನುಸರಿಸುತ್ತಿದೆ” ಎಂದಿದ್ದಾರೆ. ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಭರವಸೆಗಳನ್ನು ಜಾರಿಗೊಳಿಸಲು ಪ್ರಾಮಾಣಿಕತೆ ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಎಪಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವುದು ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ಅದರ ಮಿತ್ರ ಪಕ್ಷಗಳಾದ ಜನಸೇನಾ ಮತ್ತು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ 6 ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ.
ಇದನ್ನೂ ಓದಿ : ಚುನಾವಣಾ ಆಯೋಗದ ಸಾಂಸ್ಥಿಕ ಸಮಗ್ರತೆ ನಾಶಪಡಿಸುವುದು ಮೋದಿ ಸರ್ಕಾರದ ಪಿತೂರಿಯ ಭಾಗ: ಖರ್ಗೆ ಆರೋಪ


