ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಶಸ್ವಿಯಾಗಿ ‘ಮಾಂಸಾಹಾರ’ ವಿತರಿಸುವ ಮೂಲಕ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಸಮಾನ ಮನಸ್ಕರು ಹೊಸ ಇತಿಹಾಸ ಬರೆದರು.
ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಮಾಂಸಾಹಾರ ವಿತರಿಸಲಾಗಿದೆ. ‘ಆಹಾರ ಕ್ರಾಂತಿ’ಯ ಭಾಗವಾಗಿ ಒಂದೆಡೆ ಹೋರಾಟಗಾರರು ಬಾಡೂಟ ಹಂಚಿದರೆ, ಮತ್ತೊಂದೆಡೆ ಒತ್ತಡಕ್ಕೆ ಮಣಿದ ಸರ್ಕಾರ ಅಧಿಕೃತವಾಗಿ ಮೊಟ್ಟೆ ವಿತರಿಸುವ ಮೂಲಕ ‘ಆಹಾರ ಅಸಮಾನತೆ’ಯನ್ನು ಮುರಿಯಿತು. ಈ ಮೂಲಕ ಮಂಡ್ಯದ ಸಮ್ಮೇಳನ ಹೊಸ ಇತಿಹಾಸ ಬರೆಯಿತು.

ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಸಮ್ಮೇಳನದ ನಿಯಮಗಳನ್ನು ಬಿಡುಗಡೆ ಮಾಡಿದಾಗ ಅದರಲ್ಲಿ ತಂಬಾಕು, ಮದ್ಯದ ಜೊತೆ ಮಾಂಸಾಹಾರವನ್ನು ನಿಷೇಧಿಸಿ, ಬಹುಜನರ ಆಹಾರವನ್ನು ಕೀಳಾಗಿ ಕಂಡಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕಸಾಪ ತನ್ನ ನಿಯಮವನ್ನು ಮಾರ್ಪಡಿಸುವಂತೆ ಆಗ್ರಹಿಸಲಾಗಿತ್ತು.
ಕಸಾಪ ಮಾಂಸಾಹಾರ ನಿಷೇಧಿಸಿ ನಿಯಮ ಪ್ರಕಟಿಸಿದ ಮರುದಿನವೇ ಮಂಡ್ಯದಲ್ಲಿ ಬಾಡೂಟ ಬಳಗದವರು ಸಭೆ ನಡೆಸಿ ಸರ್ಕಾರ ಈ ಬಾರಿ ಸಮ್ಮೇಳನದಲ್ಲಿ ಮಾಂಸಾಹಾರ ನೀಡಲೇಬೇಕು. ಇಲ್ಲದಿದ್ದರೆ, ನಾವೇ ಕುರಿ, ಕೋಳಿ ಸಂಗ್ರಹಿಸಿ ಬಾಡೂಟ ಹಂಚುತ್ತೀವಿ ಎಂದು ಸವಾಲು ಹಾಕಿದ್ದರು.
ಸರ್ಕಾರ ಸಮ್ಮೇಳನ ಪ್ರಾರಂಭವಾಗುವವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೂ, ಪ್ರಗತಿಪರ ಮತ್ತು ಸಮಾನ ಮನಸ್ಕರು ತಾವು ಹೇಳಿದಂತೆ ಕುರಿ, ಕೋಳಿ ಸಂಗ್ರಹಕ್ಕೆ ಕರೆ ಕೊಟ್ಟರು.
ಸಮ್ಮೇಳನದ ಹಿಂದಿನ ದಿನ (ಡಿ.19ರಂದು) ಮಂಡ್ಯದ ಹಳೆ ಬೂದನೂರು ಗ್ರಾಮದಲ್ಲಿ ‘ಮನೆಗೊಂದು ಕೋಳಿ, ಊರಿಗೊಂದು ಕುರಿ’ ಹೆಸರಿನಲ್ಲಿ ಕುರಿ, ಕೋಳಿ ಸಂಗ್ರಹಕ್ಕೆ ಚಾಲನೆ ನೀಡಲಾಯಿತು. ‘ಅಂದು ವಿಚಾರ ಕ್ರಾಂತಿ, ಇಂದು ಆಹಾರ ಕ್ರಾಂತಿ’ ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಅಭಿಯಾನದ ಮೂಲಕ ಕುರಿ, ಕೋಳಿ ಸಂಗ್ರಹಿಸಿ ಸಮ್ಮೇಳನದ ಕಡೆಯ ದಿನವಾದ ನಿನ್ನೆ (ಡಿ.22) ಮಾಂಸಾಹಾರ ವಿತರಿಸಲಾಗಿದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿರುವ ಸಿಪಿಐ(ಎಂ) ಮಂಡ್ಯ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಅವರು, “ಸುಮಾರು 500 ಜನರಿಗೆ 800 ಮೊಟ್ಟೆ, ಕೋಳಿ ಸಾರು, ಮುದ್ದೆ ಸೇರಿದಂತೆ ಮಂಡ್ಯ ಶೈಲಿಯ ಮಾಂಸಾಹಾರವನ್ನು ವಿತರಿಸಿದ್ದೇವೆ. ನಮ್ಮ ಒತ್ತಡಕ್ಕೆ ಮಣಿದು ಸರ್ಕಾರ ಕೂಡ ಕಡೆಯ ಕ್ಷಣದಲ್ಲಿ ಅಧಿಕೃತವಾಗಿ ಮೊಟ್ಟೆ ವಿತರಿಸಿದೆ. ಈ ಮೂಲಕ ಹೊಸ ಇತಿಹಾಸ ಬರೆದಿದ್ದೇವೆ” ಎಂದಿದ್ದಾರೆ.
“ಮಾಂಸಾಹಾರ ವಿತರಣೆಗೆ ಮಂಡ್ಯದ ಶೇ.90ರಷ್ಟು ಜನರ ಬೆಂಬಲ ಇತ್ತು. ನಾವು ಮಾಂಸಾಹಾರ ವಿತರಿಸಿರುವುದು ಕೇವಲ ಜನರ ಸಂತೃಪ್ತಿಗಲ್ಲ. ಇದೊಂದು ಸಾಮಾಜಿಕ ಮಹತ್ವ ಸಾರಿದ ಹೋರಾಟ. ಈ ಮೂಲಕ ನಾವು 100 ವರ್ಷಗಳ ಆಹಾರ ಅಸಮಾನತೆಯನ್ನು ತೊಡೆದು ಹಾಕಿದ್ದೇವೆ. ಇದು ‘ಅಂಬೇಡ್ಕರ್ ಅವರು ಚೌಡಾರ್ ಕೆರೆ ನೀರು ಕುಡಿದಂತಾಗಿದೆ’ ಎಂದು ಹೇಳಿದ್ದಾರೆ.
“ಮುಂದಿನ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯಲಿದೆ. ಅಲ್ಲೂ ಆಹಾರ ಅಸಮಾನತೆಯ ವಿರುದ್ದದ ಅಭಿಯಾನವನ್ನು ಮುಂದುವರೆಸುವಂತೆ ಅಲ್ಲಿನ ಪ್ರಗತಿಪರರು ಮತ್ತು ಸಮಾನ ಮನಸ್ಕರಿಗೆ ನಾವು ಪತ್ರ ಬರೆದು ಮನವಿ ಮಾಡುತ್ತೇವೆ. ಮಾಂಸಾಹಾರ ನಿಷೇಧಿಸುವ ಮೂಲಕ ಸರ್ಕಾರವೇ ಮುಂದೆ ನಿಂತು ‘ಆಹಾರ ಅಸಮಾನತೆ, ಅಸ್ಪೃಶ್ಯತೆ ಆಚರಿಸಬಾರದು. ಮುಂದಿನ ಸಮ್ಮೇಳನದಲ್ಲಾದರೂ ಸರಿಯಾದ ರೀತಿಯಲ್ಲಿ ಮಾಂಸಾಹಾರ ವಿತರಿಸಬೇಕು ಎಂದು ಕೃಷ್ಣೇಗೌಡ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸಿ.ಟಿ. ರವಿ ಅಶ್ಲೀಲ ಪದ ಬಳಸಿದ್ದಕ್ಕೆ ನಮ್ಮ ಬಳಿ ಸಾಕ್ಷಿ ಇದೆ: ಸಿಎಂ ಸಿದ್ದರಾಮಯ್ಯ


