ಐದು ಮತ್ತು ಎಂಟನೇ ತರಗತಿಯಲ್ಲಿ ಕಲಿಯುವ ಮಕ್ಕಳನ್ನು ಅನುತ್ತೀರ್ಣಗೊಳಿಸದಂತೆ ತಡೆ ನೀಡಿದ್ದ ‘ಅನುತ್ತೀರ್ಣರಹಿತ ನೀತಿ’ಯನ್ನು (ನೋ ಡಿಟೆನ್ಷನ್ ಪಾಲಿಸಿ) ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಇದರಿಂದ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾಗದ 5 ಮತ್ತು 8ನೇ ತರಗತಿ ಮಕ್ಕಳನ್ನು ಇನ್ನು ಮುಂದೆ ಅನುತ್ತೀರ್ಣಗೊಳಿಸಬಹುದು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ 2019ರಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ (ಆರ್‌ಟಿಐ) ಮಾಡಿರುವ ಬದಲಾವಣೆಗಳ ಅನುಸಾರ ಅನುತ್ತೀರ್ಣರಹಿತ ನೀತಿಯನ್ನು ರದ್ದುಗೊಳಿಸಿ
ಕೇಂದ್ರ ಶಿಕ್ಷಣ ಸಚಿವಾಲಯ ಸೋಮವಾರ (ಡಿ.23) ಅಧಿಸೂಚನೆ ಹೊರಡಿಸಿದೆ.
ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಮತ್ತು ಸೈನಿಕ ಶಾಲೆಗಳು ಸೇರಿದಂತೆ ಕೇಂದ್ರ ಸರ್ಕಾರ ಅಧೀನದಲ್ಲಿರುವ 3 ಸಾವಿರಕ್ಕೂ ಅಧಿಕ ಶಾಲೆಗಳಿಗೆ ಈ ಆದೇಶ ಅನ್ವಯವಾಗಲಿದೆ.
ಶೈಕ್ಷಣಿಕ ವರ್ಷದ ಕೊನೆಯಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾಗದ ವಿದ್ಯಾರ್ಥಿಗಳಿಗೆ ಫಲಿತಾಂಶ ಹೊರಬಿದ್ದ ಎರಡು ತಿಂಗಳ ಒಳಗಾಗಿ ಮರು ಪರೀಕ್ಷೆ ನಡೆಸಬೇಕು. ಅದರಲ್ಲೂ ವಿದ್ಯಾರ್ಥಿ ಪಾಸಾಗದಿದ್ದರೆ ಇನ್ನೊಂದು ವರ್ಷ ಅದೇ ತರಗತಿಯಲ್ಲಿ (5-8) ಕಲಿಕೆ ಮುಂದುವರೆಸಬೇಕಾಗುತ್ತದೆ ಎಂದು ಸರ್ಕಾರದ ಸುತ್ತೋಲೆ ತಿಳಿಸಿದೆ.
ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಶಿಕ್ಷಕರು ವಿಶೇಷ ಗಮನವಹಿಸಬೇಕು. ಅವರ ಕಲಿಕಾ ಹಿನ್ನಡೆಯ ಬಗ್ಗೆ ಪೋಷಕರಿಗೂ ಮನದಟ್ಟು ಮಾಡಬೇಕು. ಕಾಲ ಕಾಲಕ್ಕೆ ಕಲಿಕಾ ಸಾಮರ್ಥ್ಯದ ಮೌಲ್ಯಮಾಪನ ನಡೆಸಿ, ಅದಕ್ಕೆ ತಕ್ಕಂತೆ ತರಬೇತಿ ನೀಡಬೇಕು ಎಂದು ಸುತ್ತೋಲೆ ಸೂಚಿಸಿದೆ.
ಆದರೆ, ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವವರೆಗೆ ಯಾವುದೇ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 18 ಕಡೆಗಳಲ್ಲಿ ಈಗಾಗಲೇ ‘ಅನುತ್ತೀರ್ಣರಹಿತ ನೀತಿ’ ರದ್ದುಗೊಂಡಿದೆ.
ತಮಿಳುನಾಡು ವಿರೋಧ
ಮಕ್ಕಳನ್ನು ಅನುತ್ತೀರ್ಣಗೊಳಿಸಲು ಅವಕಾಶ ನೀಡಿದ ಕೇಂದ್ರ ಸರ್ಕಾರದ ಆದೇಶವನ್ನು ತಮಿಳುನಾಡು ಸರ್ಕಾರ ವಿರೋಧಿಸಿದೆ. ನಾವು ಯಾವುದೇ ಕಾರಣಕ್ಕೂ 8ನೇ ತರಗತಿಯವರೆಗೆ ಮಕ್ಕಳನ್ನು ಅನುತ್ತೀರ್ಣಗೊಳಿಸುವುದಿಲ್ಲ ಎಂದಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರು “ಅನುತ್ತೀರ್ಣಗೊಳಿಸುವುದು ಹಿಂದುಳಿದ ವರ್ಗದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯುಂಟು ಮಾಡಲಿದೆ” ಎಂದು ಹೇಳಿದೆ.
ಶೇಖ್ ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾದೇಶ ರಾಜತಾಂತ್ರಿಕ ಟಿಪ್ಪಣಿ – ಖಚಿತಪಡಿಸಿದ ಭಾರತ


