ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆ ಬೆಳಗಾವಿಯಲ್ಲಿ ಇಂದು (ಡಿ.27) ನಡೆಯಬೇಕಿದ್ದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶ ರದ್ದು ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ನಿನ್ನೆ (ಡಿ.26) ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಸಮಾವೇಶ ನಡೆಯಬೇಕಿದ್ದ ವೇದಿಕೆಯಲ್ಲಿಯೇ ಇಂದು (ಶುಕ್ರವಾರ) ಬೆಳಿಗ್ಗೆ 10.30ಕ್ಕೆ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಟರ ಬಳಿ ಮಾತನಾಡಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಆದಷ್ಟು ಬೇಗ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿಗಳು, ಆರ್ಥಿಕ ತಜ್ಞರಾದ ಡಾ. ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶವನ್ನು ರದ್ದುಗೊಳಿಸಲಾಗಿದೆ. ನಾಳೆ ಸರ್ಕಾರಿ ರಜೆ ಘೋಷಿಸಲಾಗಿದ್ದು, ಒಂದು ವಾರ ಕಾಲ ಶೋಕಾಚರಣೆ ಮಾಡಲಾಗುವುದು. ಬೆಳಗಾವಿಗೆ ಬಂದಿದ್ದ ಪ್ರಮುಖ ನಾಯಕರು ಈಗಾಗಲೇ… pic.twitter.com/a3iYTaaEFV
— DK Shivakumar (@DKShivakumar) December 26, 2024
ಇಂದು ಸರ್ಕಾರದ ಹಾಗೂ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಸರ್ಕಾರಿ ರಜೆ ಘೋಷಣೆ ಮಾಡಲಾಗಿದ್ದು, ರಾಜ್ಯದಲ್ಲಿ ಒಂದು ವಾರಗಳ ಕಾಲ ಶೋಕಾಚರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹೊರ ಜಿಲ್ಲೆಗಳಿಂದ ಜನರು ಆಗಮಿಸುವುದು ಬೇಡ. ಬದಲಾಗಿ ಬೆಳಗಾವಿಯಲ್ಲಿ ಇರುವವರು ಭಾಗವಹಿಸಿ ಗೌರವ ಸಲ್ಲಿಸಿದರೆ ಸಾಕು. ಹೊರ ಊರುಗಳಿಂದ ಹೊರಡುವ ಕಾರ್ಯಕರ್ತರು ಹಾಗೂ ನಾಯಕರುಗಳು ಬೆಳಗಾವಿಗೆ ಬರುವುದು ಬೇಡ. ಈಗಾಗಲೇ ಹೊರ ಊರುಗಳಿಂದ ಬಂದಿರುವವರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಡಿಕೆಶಿ ಮನವಿ ಮಾಡಿದ್ದಾರೆ.
ಹೊರ ಊರುಗಳಿಂದ ಬಂದಿರುವ ಸಂಸದರು ಹಾಗೂ ನಾಯಕರುಗಳ ಹೊಣೆ ಹೊತ್ತಿರುವ ಉಸ್ತುವಾರಿ ಸಮಿತಿಯವರು ಅವರುಗಳು ತೆರಳುವ ತನಕ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ನಿಮ್ಮ ಜವಾಬ್ದಾರಿ ಮರೆಯಬಾರದು ಎಂದು ಡಿಕೆಶಿ ಸೂಚಿಸಿದ್ದಾರೆ.
ಅಂತಿಮ ದರ್ಶನಕ್ಕಾಗಿ ದೆಹಲಿಗೆ ಪ್ರಯಾಣ
“ನೀವು ದೆಹಲಿಗೆ ತೆರಳುವಿರಾ? ಎಂದು ಪತ್ರಕರ್ತರು ಕೇಳಿದಾಗ, “ಪಕ್ಷದ ಅಧ್ಯಕ್ಷನಾಗಿ ಮನಮೋಹನ್ ಸಿಂಗ್ ಅವರ ಅಂತಿಮ ದರ್ಶನದಲ್ಲಿ ಭಾಗವಹಿಸುವುದು ನನ್ನ ಕರ್ತವ್ಯ. ರಾಜ್ಯದ ಹಿರಿಯ ನಾಯಕರು ಸೇರಿದಂತೆ ಒಂದಷ್ಟು ಮಂದಿ ದೆಹಲಿಗೆ ತೆರಳಲಿದ್ದೇವೆ. ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿ ಹಾಗೂ ಕೈ ಕೆಳಗೆ ಕೆಲಸ ಮಾಡಿದವರು ಎಂದು ಡಿಕೆಶಿ ಹೇಳಿದ್ದಾರೆ.
‘ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟವರು ಸಿಂಗ್’
“ಮನಮೋಹನ್ ಸಿಂಗ್ ಅವರು ಕರ್ನಾಟಕಕ್ಕೆ, ಅದರಲ್ಲೂ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದವರು. ‘ನರ್ಮ್ ಯೋಜನೆ’ ಮೂಲಕ ಅನೇಕ ನಗರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದವರು. ಬೆಂಗಳೂರಿನ ಅನೇಕ ಮೇಲ್ಸೇತುವೆಗಳು ಅವರು ನೀಡಿದ ಕೊಡುಗೆಗಳು. ಮನಮೋಹನ್ ಸಿಂಗ್ ಅವರ ಬಗ್ಗೆ ಮಾತನಾಡಲು ಒಂದ ದಿನ ಸಾಲುವುದಿಲ್ಲ. ಅವರು ದೇಶದ ಎಲ್ಲಾ ವರ್ಗದ ಜನರಿಗೆ ಮರೆಯಲಾಗದ ಕೊಡುಗೆ ಕೊಟ್ಟಿದ್ದಾರೆ. ರೈತರ ಸಾಲಮನ್ನಾ ಮಾಡಿ ಅವರ ಪರವಾಗಿ ದೃಢವಾಗಿ ನಿಂತವರು” ಎಂದು ಡಿಕೆಶಿ ಸ್ಮರಿಸಿದ್ದಾರೆ.
“ಪ್ರತಿ ಕೆಲಸದಲ್ಲಿಯೂ ಗಾಂಭೀರ್ಯತೆ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದವರು ಮನಮೋಹನ್ ಸಿಂಗ್. ಅವರ ಆಡಳಿತ ಅವಧಿಯಲ್ಲಿ ಬಡವರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನರೇಗಾ ಮೂಲಕ ಗ್ರಾಮೀಣ ಜನರ ಬದುಕಿನಲ್ಲಿ ಉದ್ಯೋಗ ಗ್ಯಾರಂಟಿ ಸೃಷ್ಟಿ ಮಾಡಿದವರು. ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು ಸೇರಿದಂತೆ ಈ ದೇಶವನ್ನು ಗಟ್ಟಿಗೊಳಿಸುವ ಅನೇಕ ಕಾಯ್ದೆಗಳನ್ನು ನೀಡಿದವರು” ಎಂದಿದ್ದಾರೆ.
“ಗಾಂಧಿ ಭಾರತ’ ಕಾರ್ಯಕ್ರಮ ಅಂಗವಾಗಿ ಬೆಳಗಾವಿಯಲ್ಲಿ ಮಾಡಿರುವ ವಿದ್ಯುತ್ ದೀಪಾಲಂಕಾರವನ್ನು ಸಾರ್ವಜನಿಕರ ವೀಕ್ಷಣೆಗೆ ಉಳಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಶುಕ್ರವಾರ ಬೆಳಿಗ್ಗೆ ಮಾಹಿತಿ ನೀಡಲಾಗುವುದು. ಸಾಕಷ್ಟು ಜನರು ದೀಪಾಲಂಕಾರವನ್ನು ವೀಕ್ಷಿಸುತ್ತಿದ್ದಾರೆ. ಈ ಕಾರಣಕ್ಕೆ ಉಳಿಸಿಕೊಳ್ಳುವ ಬಗ್ಗೆ ತೀರ್ಮಾನ ಮಾಡಲಾಗುವುದು” ಎಂದು ಡಿಸಿಎಂ ಹೇಳಿದ್ದಾರೆ.
ಇದನ್ನೂ ಓದಿ : ಮನಮೋಹನ್ ಸಿಂಗ್ ನಿಧನ | 7 ದಿನಗಳ ರಾಷ್ಟ್ರೀಯ ಶೋಕಾಚರಣೆ; ಇಂದು ಸರ್ಕಾರಿ ರಜೆ ಘೋಷಣೆ


