ಮೈಸೂರಿನ ಕೆಆರ್‌ಎಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಿತ್ತಾಟ ಶುರುವಾಗಿದೆ.
ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ಕೆಆರ್‌ಎಸ್ ರಸ್ತೆ ಅಥವಾ ರಾಜಕುಮಾರಿ ರಸ್ತೆಗೆ (Princess Road)’ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಮರುನಾಮಕರಣ ಮಾಡಲು ಮುಂದಾಗಿದೆ. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಮೈಸೂರು ನಗರದ ಒಂಟಿಕೊಪ್ಪಲಿನ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದ ವೃತ್ತದಿಂದ ಮೇಟಗಳ್ಳಿ ರಾಯಲ್ ಇನ್ ಜಂಕ್ಷನ್‌ವರೆಗಿನ 1.5 ಕಿಮೀ ವ್ಯಾಪ್ತಿಯನ್ನು ಕೆಆರ್‌ಎಸ್ ರಸ್ತೆ ಅಥವಾ ರಾಜಕುಮಾರಿ ರಸ್ತೆ ( Princess Road) ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಇಲ್ಲಿ ಪ್ರಿನ್ಸೆಸ್ ಅಥವಾ ರಾಜಕುಮಾರಿ ಎಂದರೆ ಒಡೆಯರ್ ಕುಟುಂಬದ ಕೃಷ್ಣರಾಜಮ್ಮನಿ ಅವರಾಗಿದ್ದಾರೆ.
ಕಳೆದ ನವೆಂಬರ್ ಅಂತ್ಯದಲ್ಲಿ ನಡೆದ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಶಿಷ್ಟಾಚಾರದ ಪ್ರಕಾರ ಈ ನಿರ್ಧಾರಕ್ಕೆ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಬಿಜೆಪಿ ನಾಯಕರು ಮತ್ತು ಕೆಲ ಸಾರ್ವಜನಿಕರು ಪಾಲಿಕೆ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ನೈತಿಕ ಹೊಣೆಗಾರಿಕೆ ಇಲ್ಲವೇ? : ಬಿ.ವೈ ವಿಜಯೇಂದ್ರ
ಮೈಸೂರು ಸಾಮ್ರಾಜ್ಯವನ್ನು ರಾಜರು ಮತ್ತು ಆಡಳಿತಗಾರರು ಕಟ್ಟಿ ಬೆಳೆಸಿದರು. ಆದರೆ, ಮಹಾನ್ ರಾಜವಂಶದ ಹೆಸರನ್ನು ಹೊಂದಿರುವ ರಸ್ತೆಗೆ ತಮ್ಮ ಹೆಸರಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಸದ್ಯ ಚುನಾಯಿತ ಪ್ರತಿನಿಧಿಗಳಿಲ್ಲದ ಮೈಸೂರು ಮಹಾನಗರ ಪಾಲಿಕೆಯು ಇಂತಹ ಪ್ರಮುಖ ನಿರ್ಧಾರ ಕೈಗೊಳ್ಳುವುದು ಎಷ್ಟು ಸಮಂಜಸವಾಗಿದೆ. ಸಿದ್ದರಾಮಯ್ಯನವರಿಗೆ ನೈತಿಕ ಹೊಣೆಗಾರಿಕೆ ಇಲ್ಲವೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಸಂಸ್ಥಾನ ಕಟ್ಟಿ ಬೆಳೆಸಿದವರು ಮೈಸೂರಿನ ರಾಜ ಮಹಾರಾಜರು, ಅಂತಹ ಶ್ರೇಷ್ಠ ರಾಜ ಮನೆತನದವರ ಹೆಸರಿರುವ ರಸ್ತೆಗೆ ಮುಖ್ಯಮಂತ್ರಿ @siddaramaiah ನವರು ತಮ್ಮದೇ ಹೆಸರಿಟ್ಟುಕೊಳ್ಳಲು ಹೊರಟಿದ್ದಾರೆ.
ಜನಪ್ರತಿನಿಧಿಗಳೇ ಇಲ್ಲದ ಮೈಸೂರು ಮಹಾನಗರ ಪಾಲಿಕೆ ಈ ನಿರ್ಧಾರ ತೆಗೆದುಕೊಂಡಿರುವುದು ಎಷ್ಟು ಕ್ರಮಬದ್ಧ ಹಾಗೂ ಎಷ್ಟು ಸಮಂಜಸ? ತಾವೇ… pic.twitter.com/tbs7T3Ptkd— Vijayendra Yediyurappa (@BYVijayendra) December 25, 2024
ರಾಜ ಕುಟುಂಬದ ಮೇಲಿನ ದಾಳಿ ಹೆಚ್ಚಾಗಿದೆ : ಸಂಸದ ಯಧುವೀರ್
“ನಾನು ಸಂಸದನಾದ ಮೇಲೆ ರಾಜ ಕುಟುಂಬದ ಮೇಲಿನ ದಾಳಿ ಹೆಚ್ಚಾಗಿದೆ. ಎಂಸಿಸಿ ಯಾವುದೇ ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಮರುನಾಮಕರಣ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕೆಆರ್‌ಎಸ್ ರಸ್ತೆಯನ್ನು ಹಾಗೆಯೇ ಬಿಡಬೇಕು. 1904ರಲ್ಲಿ ಯುವರಾಣಿ ಕೃಷ್ಣರಾಜಮ್ಮಣ್ಣಿ ಕ್ಷಯರೋಗದಿಂದ ಮೃತಪಟ್ಟಿದ್ದರಿಂದ ಈ ರಸ್ತೆಗೆ ರಾಜಕುಮಾರಿ ರಸ್ತೆ ಎಂಬ ಹೆಸರು ಬಂದಿದೆ” ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಮೈಸೂರು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಬಿಜೆಪಿಗೆ ವಿರೋಧಿಸೋದು ಬಿಟ್ಟು ಬೇರೆ ಗೊತ್ತಿಲ್ಲ : ಸಿಎಂ ಸಿದ್ದರಾಮಯ್ಯ
ಬಿಜೆಪಿಗರ ವಿರೋಧದ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಎಲ್ಲಾ ವಿಷಯಗಳನ್ನು ವಿರೋಧಿಸುವುದು ಬಿಜೆಪಿಗರ ಕೆಲಸ. ಬಿಜೆಪಿಯವರು ಇದನ್ನು (ರಸ್ತೆಯ ಹೆಸರು ಬದಲಾವಣೆ) ಸ್ವಾಗತಿಸುತ್ತಾರಾ? ವಿರೋಧಿಸುವುದು ಅವರ ಕರ್ತವ್ಯ. ಅವರು ಒಳ್ಳೆಯದ್ದನ್ನೂ ವಿರೋಧಿಸುತ್ತಾರೆ, ಕೆಟ್ಟದ್ದನ್ನೂ ವಿರೋಧಿಸುತ್ತಾರೆ. ಅವರಿಗೆ ಏನೂ ಗೊತ್ತಿಲ್ಲ” ಎಂದಿದ್ದಾರೆ.
ಪಾಲಿಕೆ ನಿರ್ಧಾರ ಸ್ವಾಗತಿಸಿದ ಪ್ರತಾಪ್ ಸಿಂಹ!
ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ಪಾಲಿಕೆ ನಿರ್ಧಾರವನ್ನು ಮೈಸೂರಿನ ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್ ಸಿಂಹ ಸ್ವಾಗತಿಸಿದ್ದಾರೆ. “ಸಿದ್ದರಾಮಯ್ಯ ಮೈಸೂರಿನ ಸುಪುತ್ರ. ಸೈದ್ಧಾಂತಿಕವಾಗಿ ಅವರನ್ನು ವಿರೋಧಿಸುತ್ತೇನೆಯೇ ಹೊರತು, ರಸ್ತೆಗೆ ನಾಮಕರಣ ವಿಚಾರದಲ್ಲಿ ಅವರನ್ನು ವಿರೋಧ ಮಾಡುವುದಿಲ್ಲ” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಇದನ್ನೂ ಓದಿ : ಮನಮೋಹನ್ ಸಿಂಗ್ ನಿಧನ | ಬೆಳಗಾವಿ ಕಾಂಗ್ರೆಸ್ ಸಮಾವೇಶ ರದ್ದು ; ಅದೇ ವೇದಿಕೆಯಲ್ಲಿ ಶ್ರದ್ಧಾಂಜಲಿ ಸಭೆ


