ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ತನಿಖೆಗೆ ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಮದ್ರಾಸ್ ಹೈಕೋರ್ಟ್ ಶನಿವಾರ (ಡಿ.28) ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಎಂ ಸುಬ್ರಮಣ್ಯಂ ಮತ್ತು ನ್ಯಾಯಮೂರ್ತಿ ವಿ.ಲಕ್ಷ್ಮಿನಾರಾಯಣನ್ ಅವರ ರಜಾಕಾಲದ ಪೀಠವು, ಪ್ರಕರಣದ ಎಫ್‌ಐಆರ್ ಪ್ರತಿ ಸೋರಿಕೆಗೆ ಸಂಬಂಧಪಟ್ಟಂತೆ ಸರ್ಕಾರ ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಸಂತ್ರಸ್ತೆಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ.
ಸಂತ್ರಸ್ತೆಗೆ ಉಚಿತ ಶಿಕ್ಷಣ ಮತ್ತು ವಸತಿ ಒದಗಿಸುವಂತೆ ಹಾಗೂ ಆಕೆ ಶಿಕ್ಷಣ ಮುಂದುವರಿಸುವಂತೆ ನೋಡಿಕೊಳ್ಳಲು ಅಣ್ಣಾ ವಿಶ್ವವಿದ್ಯಾಲಯಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.
“ಅಗತ್ಯವಿದ್ದಲ್ಲಿ, ತಮಿಳುನಾಡು ಸರ್ಕಾರ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣದ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ ಚೆನ್ನೈ ಪೊಲೀಸ್ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬಹುದು” ಎಂದು ಪೀಠ ಹೇಳಿದೆ.
ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರ ತನಿಖೆ ಪಕ್ಷಪಾತದಿಂದ ಕೂಡಿದೆ. ಹಾಗಾಗಿ, ಆ ತನಿಖೆಯ ಮೇಲೆ ನಮಗೆ ನಂಬಿಕೆಯಿಲ್ಲ. ನ್ಯಾಯಾಲಯ ಪ್ರಕರಣ ಸಂಬಂಧ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದು ವಕೀಲೆ ವರಲಕ್ಷೀ ಎಂಬವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆ ಮನವಿ ಪರಿಗಣಿಸಿ ಶುಕ್ರವಾರ (ಡಿ.27) ನ್ಯಾಯಾಲಯ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತ್ತು. ಅದರ ಭಾಗವಾಗಿ, ಇಂದು ಕೆಲ ಆದೇಶಗಳನ್ನು ಹೊರಡಿಸಿದೆ.
ನ್ಯಾಯಾಲಯ ರಚಿಸಿದ ಎಸ್‌ಐಟಿಯಲ್ಲಿ ಐಪಿಎಸ್ ಅಧಿಕಾರಿಗಳಾದ ಸ್ನೇಹಾ ಪ್ರಿಯಾ, ಅಯ್ಮನ್ ಜಮಾಲ್ ಮತ್ತು ಬೃಂದಾ ಅವರು ಇದ್ದಾರೆ.
ಎನ್‌ಐಸಿ ನಿರ್ವಹಿಸುತ್ತಿರುವ ಪೋರ್ಟಾಲ್‌ಗೆ ಅಪ್ಲೋಡ್ ಮಾಡುವಾಗ ಉಂಟಾದ ದೋಷದಿಂದ ಎಫ್‌ಐರ್ ಪ್ರತಿ ಸೋರಿಕೆಯಾಗಿದೆ. ಈ ವಿಚಾರ ಗಮನಕ್ಕೆ ಬಂದ ತಕ್ಷಣ ಅದನ್ನು ತಡೆ ಹಿಡಿಯಲಾಗಿದೆ. ಈ ನಡುವೆ 14 ಮಂದಿ ಅದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅವರನ್ನು ಐಪಿ ಅಡ್ರೆಸ್ ಮೂಲಕ ಪತ್ತೆ ಮಾಡಲಾಗುವುದು ಎಂದು ಸರ್ಕಾರ ಪರ ಅಡ್ವೋಕೇಟ್ ಜನರಲ್ ಪಿ.ಎಸ್ ರಾಮನ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ವೇಳೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ನೀವು ನಿಜವಾಗ್ಲೂ ಎಫ್‌ಐಆರ್‌ನಲ್ಲಿರುವ ಅಂಶಗಳನ್ನು ಓದಿದ್ದೀರಾ? ಅದರಲ್ಲಿ ಸಂತ್ರಸ್ತೆಯನ್ನೇ ತಪ್ಪಿತಸ್ಥಳು ಎಂದು ಬಿಂಬಿಸಲಾಗಿದೆ. ಅತ್ಯಾಚಾರಕ್ಕೆ ಆಕೆಯ ಉಡುಗೆ ಕಾರಣ ಎನ್ನುವಂತಿದೆ. ಅದಲ್ಲದೆ, ಚೆನ್ನೈ ಪೊಲೀಸ್ ಆಯುಕ್ತರು ತರಾತುರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಪ್ರಕರಣದಲ್ಲಿ ಒಬ್ಬ ಆರೋಪಿ ಮಾತ್ರ ಭಾಗಿಯಾಗಿದ್ದಾನೆ ಎಂದು ಹೇಳಿದ್ದಾರೆ. ಪ್ರಕರಣದ ತನಿಖೆ ಇನ್ನೂ ಪ್ರಾರಂಭ ಹಂತದಲ್ಲಿರುವಾಗ ಪೊಲೀಸ್ ಆಯುಕ್ತರು ಅಷ್ಟು ಬೇಗ ತೀರ್ಮಾನಕ್ಕೆ ಏಕೆ ಬಂದರು? ಎಲ್ಲಾ ವಿಷಯಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವ ಅಗತ್ಯವೇನಿತ್ತು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಉತ್ತರ ಕೊಟ್ಟ ಅಡ್ವೋಕೇಟ್ ಜನರಲ್ ” ಮಾಧ್ಯಮಗಳು ಪ್ರಕರಣ ಸಂಬಂಧ ಹಲವು ರೀತಿಯ ವರದಿಗಳನ್ನು ಬಿತ್ತರಿಸುತ್ತಿತ್ತು. ಈ ಕಾರಣಕ್ಕೆ ಅವರಿಗೆ ಸ್ಪಷ್ಟನೆ ಕೊಡುವ ಉದ್ದೇಶದಿಂದ ಮಾತ್ರ ಪೊಲೀಸ್ ಆಯುಕ್ತರು ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದಕ್ಕೆ ಮರುತ್ತರ ಕೊಟ್ಟ ನ್ಯಾಯಾಧೀಶರು, ಹಾಗಾದರೆ, ಎಲ್ಲಾ ಪ್ರಕರಣಗಳಲ್ಲೂ ಪೊಲೀಸ್ ಆಯುಕ್ತರು ಹೀಗೆಯೇ ಮಾಹಿತಿ ನೀಡುತ್ತಾರಾ? ನೀವು ಮಾಧ್ಯಗಳನ್ನು ದೂರ ಇಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಆಗ, ಎನ್‌ಸಿಆರ್‌ಬಿ ವರದಿಯ ಪ್ರಕಾರ, ಚೆನ್ನೈ ಮತ್ತು ಕೊಯಮತ್ತೂರು ಸುರಕ್ಷಿತ ನಗರ ಎಂದು ಅಡ್ವೋಕೇಟ್ ಜನರಲ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ನಗರಗಳು ಸುರಕ್ಷಿತವಾಗಿರುವುದು ಅಲ್ಲಿನ ಒಳ್ಳೆಯ ಜನರಿಂದ, ಸರ್ಕಾರ ಅದರ ಶ್ರೇಯಸ್ಸು ಪಡೆಯುವುದು ಬೇಡ” ಎಂದು ತಿರುಗೇಟು ಕೊಟ್ಟಿದ್ದಾರೆ.
ಮಾಧ್ಯಮಗಳು ಪ್ರಕರಣದ ಕುರಿತು ತಪ್ಪು ಮಾಹಿತಿಗಳನ್ನು ಹರಡುತ್ತಿವೆ, ಗೊಂದಲಗಳನ್ನು ಸೃಷ್ಟಿಸುತ್ತಿವೆ ಎಂಬ ಅಡ್ವೋಕೇಟ್ ಜನರಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು “ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಅವರು ಕಾನೂನು ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೇರಳ | ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣ : ಸಿಪಿಐ(ಎಂ) ಮಾಜಿ ಶಾಸಕ ಸೇರಿ 14 ಮಂದಿ ದೋಷಿಗಳೆಂದು ತೀರ್ಪು ಪ್ರಕಟ


