ಆರೆಸ್ಸೆಸ್ ಹಾಗೂ ಬಿಜೆಪಿ ಮಾಜಿ ನಾಯಕ ಕೆ.ಎನ್. ಗೋವಿಂದಾಚಾರ್ಯ ಮತ್ತು ಭಾರತ ವಿಕಾಸ ಸಂಗಮದ ಮುಖ್ಯಸ್ಥ, ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ನೇತೃತ್ವದಲ್ಲಿ ಕಲಬುರಗಿಯ ಸೇಡಂನಲ್ಲಿ ಬಲಪಂಥೀಯ ಗುಂಪುಗಳು ನಡೆಸುತ್ತಿರುವ ‘7ನೇ ಭಾರತೀಯ ಸಂಸ್ಕೃತಿ ಉತ್ಸವ’ ಕಾರ್ಯಕ್ರಮಕ್ಕೆ ವಿರುದ್ಧವಾಗಿ ಪ್ರಗತಿಪರ ಗುಂಪುಗಳು ‘ಸೌಹಾರ್ದ ಭಾರತ ಉತ್ಸವ’ ನಡೆಸುವುದಾಗಿ ತೀರ್ಮಾನ ಕೈಗೊಂಡಿವೆ. ಕಲಬುರಗಿ
ಆರೆಸ್ಸೆಸ್ ಹಾಗೂ ಬಿಜೆಪಿ ಪರ ಬಲಪಂಥೀಯ ಸಂಘಟನೆಯು ಜನವರಿ 29 ಮತ್ತು ಫೆಬ್ರವರಿ 6 ರ ನಡುವೆ ‘ಭಾರತೀಯ ಸಂಸ್ಕೃತಿ ಉತ್ಸವ’ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ವಿರುದ್ಧವಾಗಿ ಜನವರಿ 17ರಂದು ಪ್ರಗತಿಪರ ಸಂಘಟನೆಗಳು ತಮ್ಮ ಆದ ಕಾರ್ಯಕ್ರಮವನ್ನು ಪ್ರಾರಂಭಿಸಲು ಪ್ರತಿಜ್ಞೆ ಮಾಡಿದೆ.
ಆರೆಸ್ಸೆಸ್ ನಾಯಕ ಕೆ.ಎನ್. ಗೋವಿಂದಾಚಾರ್ಯ ಅವರು 2016ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ಭಾರತೀಯತೆಯನ್ನು ಪ್ರತಿಬಿಂಬಿಸಲು ನಾವು ಸಂವಿಧಾನವನ್ನು ಪುನಃ ಬರೆಯುತ್ತೇವೆ’ ಎಂದು ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡಿದ್ದರು. ಅವರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಆರೆಸ್ಸೆಸ್ ನಾಯಕ ದತ್ತಾತ್ರೆಯ ಹೊಸಬಾಳೆ, ವೀರೇಂದ್ರ ಹೆಗಡೆ, ಯಡಿಯೂರಪ್ಪ, ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿಶ್ವೇಶ್ವರ ಕಾಗೇರಿ, ಯತ್ನಾಲ್, ಸುಧಾ ಮೂರ್ತಿ, ವಿಜಯೇಂದ್ರ, ಬಾಬಾ ರಾಮದೇವ್ ಸೇರಿದಂತೆ ಹಲವಾರು ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ. ಕಲಬುರಗಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಷ್ಟೆ ಅಲ್ಲದೆ, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು ಹಾಗೂ ಹಲವು ಕಾಂಗ್ರೆಸ್ ನಾಯಕ ಹೆಸರುಗಳು ಕಾಣಿಸಿಕೊಂಡಿದೆ. ಅದಾಗ್ಯೂ, ಈ ಕಾರ್ಯಕ್ರಮಕ್ಕೆ ತಾವು ತೆರಳುವುದಿಲ್ಲ ಮತ್ತು ತಮಗೆ ತಿಳಿಯದಂತೆ ನಮ್ಮ ಹೆಸರು ಸೇರಿಸಲಾಗಿದೆ ಎಂದು ಅವರು ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದರು. ಉಳಿದ ಕಾಂಗ್ರೆಸ್ ನಾಯಕರು ಈ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಿದ್ದು ವರದಿಯಾಗಿಲ್ಲ.
ಪ್ರಗತಿಪರ ಸಂಘಟನೆಗಳು ನಡೆಸುತ್ತಿರುವ ಕಾರ್ಯಕ್ರಮದ ಬಗ್ಗೆ ಮಾತನಾಡಿದ ವಿದ್ವಾಂಸರಾದ ಪ್ರೊ. ಮೀನಾಕ್ಷಿ ಬಾಳಿ ಅವರು, ”ಇದು ಸಾಮಾನ್ಯ ಪ್ರತಿಭಟನೆಯಲ್ಲ. ನಾವು ಅವರನ್ನು ತಡೆಯಲು ಬಯಸುವುದಿಲ್ಲ, ಆದರೆ ಯಾವುದೇ ಸಂಭವನೀಯ ಕೋಮುವಾದಿ ಕಾರ್ಯಚಟುವಟಿಕೆ ಇದ್ದರೆ, ಬಲಪಂಥೀಯರ ರ್ಯಾಲಿಯು ಫಲಪ್ರದವಾಗದಂತೆ ಮತ್ತು ಅದರ ಉದ್ದೇಶವನ್ನು ಈಡೇರದಂತೆ ಕೆಲಸ ಮಾಡುತ್ತೇವೆ ಎಂದು ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ” ಎಂದು ಹೇಳಿದ್ದಾರೆ.
ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ನಿರ್ಣಾಯಕ ಪೂರ್ವಸಿದ್ಧತಾ ಸಭೆಗಳು ನಡೆದಿದ್ದು, ನಂತರದ ಕಾರ್ಯತಂತ್ರದ ಸಭೆಗಳನ್ನು ದಾವಣಗೆರೆ, ವಿಜಯಪುರ ಮತ್ತು ಇತರ ಪಟ್ಟಣಗಳಲ್ಲಿ ನಡೆಸಲಾಗಿದೆ ಎಂದು ಬಾಳಿ ಅವರು ಹೇಳಿದ್ದಾರೆ.
ಅದಾಗ್ಯೂ, ಪ್ರಗತಿಪರ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಈ ಆಂದೋಲನಕ್ಕೆ ಹಣದ ಕೊರತೆಯಿದೆ, ಆದರೆ, ಬಲಪಂಥೀಯರು ತಮ್ಮ ಕಾರ್ಯಕ್ರಮಕ್ಕೆ ಅಪಾರ ಪ್ರಮಾಣದ ಹಣವನ್ನು ಸುರಿಯುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಪ್ರಗತಿಪರ ನಾಯಕರು ತಮ್ಮ ಕಾರ್ಯಕ್ರಮವನ್ನು ನಡೆಸಲು ಹರಸಾಹಸ ಪಡುತ್ತಿದ್ದು, “ನಾವು ನಮ್ಮಲ್ಲಿರುವ ಸ್ವಲ್ಪ ಸ್ವಲ್ಪ ಹಣವನ್ನು ಒಟ್ಟುಗೂಡಿಸಿ ಕಾರ್ಯಕ್ರಮ ನಡೆಸಲಿದ್ದೇವೆ” ಎಂದು ಬಾಳಿ ಹೇಳಿದ್ದಾರೆ.
ಪ್ರಗತಿಪರರ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಬೆಂಬಲವಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೀನಾಕ್ಷಿ ಬಾಳಿ, “ಈ ಬಗ್ಗೆ ಕಾಂಗ್ರೆಸ್‌ಗೆ ಯಾವುದೇ ತಂತ್ರವಿಲ್ಲ. ಈ ಕಾರ್ಯಕ್ರಮದಿಂದ ಏನು ಅಪಾಯವಿದೆ ಎಂದು ಅವರಿಗೆ ಅರ್ಥವಾಗುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ಈ ಮಧ್ಯೆ ಜನವರಿ 29 ರ ಆರೆಸ್ಸೆಸ್ ಕಾರ್ಯಕ್ರಮದ ಪ್ರಮುಖ ವ್ಯಕ್ತಿ ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಪ್ರತಿಕ್ರಿಯಿಸಿ, ಪ್ರಗತಿಪರರ ಕಾರ್ಯಕ್ರಮವನ್ನು ‘ಕೇವಲ ಸೈಡ್‌ಶೋ’ ಎಂದು ಹೇಳಿದ್ದಾರೆ. “ಇದು ಭಾರತ ವಿಕಾಸ ಸಂಗಮ್ ಮೂಲಕ ಗೋವಿಂದಾಚಾರ್ಯರು ಯೋಜಿಸಿರುವ ಪ್ರಮುಖ ಕಾರ್ಯಕ್ರಮವಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಕೂಟಗಳ ಸರಣಿಯಲ್ಲಿ ಇದು ಏಳನೆಯದು. ಈ ಹಿಂದಿನ ಕಾರ್ಯಕ್ರಮಗಳಲ್ಲಿ ಭಾರಿ ಜನ ಸೇರಿದ್ದರು. ಕಲಬುರಗಿಯ ಕಾರ್ಯಕ್ರಮದಲ್ಲಿ ಸುಮಾರು 25 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಲ್ಲಿದ್ದೇವೆ.” ಎಂದು ಅವರು ಹೇಳಿದ್ದಾರೆ.


