ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ಜನರ ಗುಂಪೊಂದು ಇಬ್ಬರು ಬುಡಕಟ್ಟು ಮಹಿಳೆಯರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯ ರೆಮುನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಯ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಡಿಸೆಂಬರ್ 26, ಗುರುವಾರ ಬಾಲಸೋರ್ ಜಿಲ್ಲೆಯ ಖರಿಮುಖ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇಬ್ಬರು ಬುಡಕಟ್ಟು ಮಹಿಳೆಯರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಗ್ರಾಮಸ್ಥರನ್ನು ಮನವೊಲಿಸಲು ಖರಿಮುಖ ಗ್ರಾಮಕ್ಕೆ ತೆರಳಿದ್ದರು. ಈ ಸುದ್ದಿ ಗ್ರಾಮದಲ್ಲಿ ಹರಡಿ, ಹಿಂದುತ್ವ ಸಂಘಟನೆಯೊಂದರ ಸದಸ್ಯರು ಮತ್ತು ಸ್ಥಳೀಯರನ್ನು ಒಳಗೊಂಡ ಗುಂಪೊಂದು ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದೆ ಎಂದು ವರದಿಗಳು ಹೇಳಿವೆ.
ಜನರ ಗುಂಪು ಮಹಿಳೆಯರ ಮುಖವನ್ನು ವಿರೂಪಗೊಳಿಸಿದೆ ಮತ್ತು ‘ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದೆ. ಮಾಹಿತಿ ತಿಳಿದ ಸ್ಥಳೀಯ ನೀಲಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಬಳಿಕ, ಮಹಿಳೆಯರನ್ನು ರೆಮುನಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ವಿಚಾರಣೆ ವೇಳೆ, ಸ್ಥಳೀಯರನ್ನು ಮತಾಂತರಗೊಳಿಸಲು ಗ್ರಾಮಕ್ಕೆ ಹೋಗಿದ್ದಾಗಿ ಮಹಿಳೆಯರು ಒಪ್ಪಿಕೊಂಡಿದ್ದಾರೆ ಎಂದು ರೆಮುನಾ ಪೊಲೀಸ್ ಠಾಣೆ ಉಸ್ತುವಾರಿ ಸುಭಾಸ್ ಚಂದ್ರ ಮಲ್ಲಿಕ್ ಹೇಳಿದ್ದಾರೆ.
ಘಟನೆ ಸಂಬಂಧ ಹಲ್ಲೆಗೊಳಗಾದ ಮಹಿಳೆಯರು ಮತ್ತು ಗ್ರಾಮಸ್ಥರು ನೀಡಿದ ದೂರುಗಳನ್ನು ಆಧರಿಸಿ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಮತಾಂತರಕ್ಕೆ ಯತ್ನಸಿದ ಆರೋಪದ ಮೇಲೆ ಒಡಿಶಾ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 1967 ರ ಸೆಕ್ಷನ್ 4 ಮತ್ತು ಬಿಎನ್‌ಎಸ್ ಸೆಕ್ಷನ್‌ಗಳಾದ 299,3(5) ಮತ್ತು 351 (2) ಅಡಿ ಮಹಿಳೆಯರ ವಿರುದ್ದ ಆರೋಪ ಹೊರಿಸಲಾಗಿದೆ. ಅದೇ ರೀತಿ ಹಲ್ಲೆ ಆರೋಪದ ಮೇಲೆ ಗ್ರಾಮದ 15 ಜನರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ಮತ್ತು ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಮಹಿಳೆಯರಿಗೆ ಥಳಿಸಿದವರನ್ನು ಪೊಲೀಸರು ಗುರುತಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ದುಷ್ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೆಮುನಾ ಪೊಲೀಸ್ ಠಾಣೆ ಉಸ್ತುವಾರಿ ಸುಭಾಸ್ ಚಂದ್ರ ಮಲ್ಲಿಕ್ ಹೇಳಿದ್ದಾರೆ.
ಇದನ್ನೂ ಓದಿ : ಅಪ್ರಾಪ್ತ ಮುಸ್ಲಿಂ ಬಾಲಕಿಯ ಅಪಹರಣ: ಸಾಕ್ಷ್ಯ ನೀಡಿದರೂ ಆರೋಪಿಯ ಬಂಧಿಸದ ಪೊಲೀಸರು


