ಪಾಟ್ನಾ: ಪಾಟ್ನಾದ ಗಾಂಧಿ ಮೈದಾನದಲ್ಲಿ ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) ಆಕಾಂಕ್ಷಿಗಳು ನಡೆಸುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಚುನಾವಣಾ ತಂತ್ರಗಾರ-ರಾಜಕಾರಣಿ ಪ್ರಶಾಂತ್ ಕಿಶೋರ್ ಮತ್ತು ಇತರರ ವಿರುದ್ಧ ಬಿಹಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಿಶೋರ್ ಮತ್ತು ಅವರ ಪಕ್ಷ ಜನ್ ಸೂರಾಜ್ ಪಾರ್ಟಿಯ ಇತರ ಸದಸ್ಯರು ಬಿಪಿಎಸ್‌ಸಿ ಆಕಾಂಕ್ಷಿಗಳನ್ನು ಪ್ರಚೋದಿಸಿ, ಅವರನ್ನು ಬೀದಿಗಿಳಿಸಿ ನಗರದ ವಿವಿಧ ಭಾಗಗಳಲ್ಲಿ ಗಲಭೆ ಸೃಷ್ಟಿಸಲು ಕಾರಣಕರ್ತರಾಗಿದ್ದಾರೆ. ಜಿಲ್ಲಾಡಳಿತ ತಮ್ಮ ಮನವಿಯನ್ನು ತಿರಸ್ಕರಿಸಿದ್ದರೂ ಗಾಂಧಿ ಮೈದಾನದ ಬಳಿ ಪ್ರತಿಭಟನೆ ನಡೆಸಿದೆ ಎಂದು ಆರೋಪಿಸಿ ಜನ್ ಸೂರಾಜ್ ಪಕ್ಷದ ಬಿಹಾರ ಮುಖ್ಯಸ್ಥರ ವಿರುದ್ಧವೂ ಪ್ರಕರಣ ದಾಖಲಾಗಿದೆ.
70ನೇ ಬಿಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯ ಮರುಪರೀಕ್ಷೆ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡುವಂತೆ ಆಗ್ರಹಿಸಿ ಸಾವಿರಾರು ಆಕಾಂಕ್ಷಿಗಳು ಭಾನುವಾರ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ಮುಂದುವರಿಸಿದ್ದರು. ಪ್ರತಿಭಟನೆಯು ಡಿಸೆಂಬರ್ 13ರಿಂದ ಪ್ರಾರಂಭವಾಗಿದೆ ಮತ್ತು ಅಂದಿನಿಂದ, ಹಲವಾರು ಪ್ರಮುಖ ರಾಜಕಾರಣಿಗಳು, ಶಿಕ್ಷಣ ತಜ್ಞರು ಇದನ್ನು ಬೆಂಬಲಿಸುತ್ತಾ ಬಂದಿದ್ದಾರೆ.
ಕಿಶೋರ್ ಅವರ ಜನ್ ಸೂರಾಜ್ ಪಾರ್ಟಿಯು ಗಾಂಧಿ ಮೈದಾನದಲ್ಲಿ ಛತ್ರ ಸಂಸದ್ (ವಿದ್ಯಾರ್ಥಿ ಸಂಸತ್ತು) ನಡೆಸುವ ಉದ್ದೇಶವನ್ನು ಜಿಲ್ಲಾಡಳಿತಕ್ಕೆ ಶನಿವಾರದಂದು ತಿಳಿಸಿತ್ತು ಎಂದು ಬಿಹಾರ ಪೊಲೀಸ್ ಹೇಳಿಕೆ ತಿಳಿಸಿದ್ದು, ಜಿಲ್ಲಾಡಳಿತ ಈ ಮನವಿಯನ್ನು ತಿರಸ್ಕರಿಸಿ ಪಕ್ಷಕ್ಕೆ ತನ್ನ ನಿರ್ಧಾರವನ್ನು ತಿಳಿಸಿತ್ತು.
ಇದರ ಹೊರತಾಗಿಯೂ, ಭಾನುವಾರ, ಪಕ್ಷವು ಗಾಂಧಿ ಪ್ರತಿಮೆ ಬಳಿ ಅನಧಿಕೃತ ಗುಂಪನ್ನು ಜಮಾಯಿಸಿ ಪ್ರತಿಭಟನೆಯನ್ನು ಜನ್ ಸೂರಾಜ್ ಪಾರ್ಟಿಯು ಪ್ರಚೋದಿಸಿತು ಮತ್ತು ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಸೃಷ್ಟಿಸಿತು ಎಂದು ಪೊಲೀಸರು ಹೇಳಿದ್ದಾರೆ.
ಜನ್ ಸುರಾಜ್ ಪಕ್ಷದ ಅಧ್ಯಕ್ಷ ಮನೋಜ್ ಭಾರ್ತಿ, ಕೋಚಿಂಗ್ ಇನ್‌ಸ್ಟಿಟ್ಯೂಟ್ ನಿರ್ವಾಹಕರಾದ ರಹಮಾನ್ಶು ಮಿಶ್ರಾ, ನಿಖಿಲ್ ಮಣಿ ತಿವಾರಿ, ಸುಭಾಷ್ ಕುಮಾರ್ ಠಾಕೂರ್, ಶುಭಂ ಸ್ನೇಹಿಲ್; ಪ್ರಶಾಂತ್ ಕಿಶೋರ್, ಅವರೊಂದಿಗೆ ಇಬ್ಬರು ಬೌನ್ಸರ್‌ಗಳು – ಆನಂದ್ ಮಿಶ್ರಾ ಮತ್ತು ರಾಕೇಶ್ ಕುಮಾರ್ ಮಿಶ್ರಾ ಮತ್ತು ಇತರರು ಸೇರಿದಂತೆ 19ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಹೆಚ್ಚುವರಿಯಾಗಿ, 600ಕ್ಕೂ ಹೆಚ್ಚು ಅಪರಿಚಿತ ಜನರ ಮೇಲೆ ಆರೋಪ ಪಟ್ಟಿ ಮಾಡಲಾಗಿದೆ. ಈ ಬೆಳವಣಿಗೆಯನ್ನು ದೃಢಪಡಿಸಿದ ಪಾಟ್ನಾದ ಜಿಲ್ಲಾ ಮ್ಯಾಜಿಸ್ಟ್ರೇಟ್, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಭಾನುವಾರ ಮುಂಜಾನೆ, ಕಿಶೋರ್ ಅವರು ಬಿಹಾರದ ಪರೀಕ್ಷೆಯಲ್ಲಿನ ಭ್ರಷ್ಟಾಚಾರವನ್ನು ಕೊನೆಗಾಣಿಸುವಂತೆ ಒತ್ತಾಯಿಸಿ ಪ್ರತಿಭಟನಾನಿರತ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದರು. ನಿತೀಶ್ ಕುಮಾರ್ ಅವರು ಖಾಸಗಿ ಭೇಟಿಗಾಗಿ ದೆಹಲಿಗೆ ಹೋಗಿದ್ದಾರೆ. ಆದರೆ ತಮ್ಮದೇ ರಾಜ್ಯದ ಯುವಕರ ಭೇಟಿಗೆ ಸಮಯವಿಲ್ಲ ಎಂದು ಟೀಕಿಸಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಪಾಟ್ನಾದಲ್ಲಿ ಪ್ರತಿಭಟನಾ ನಿರತ ಅಭ್ಯರ್ಥಿಗಳನ್ನುದ್ದೇಶಿಸಿ ಮಾತನಾಡಿದ ಕಿಶೋರ್, ”ಮುಖ್ಯಮಂತ್ರಿಗಳಿಗೆ ಪ್ರತಿಭಟನಾ ನಿರತ ಆಕಾಂಕ್ಷಿಗಳ ಅಹವಾಲನ್ನು ಆಲಿಸಲು ಸಮಯವಿಲ್ಲದೇ ದಿಲ್ಲಿಗೆ ತೆರಳಿದ್ದಾರೆ. ಪರೀಕ್ಷೆ ರದ್ದುಗೊಳಿಸಬೇಕೆಂಬ ಅಕಾಂಕ್ಷಿಗಳ ಬೇಡಿಕೆಯನ್ನು ಈಡೇರಿಸುವವರೆಗೆ ಪ್ರತಿಭಟನೆ ಮುಂದುವರಿಯಲಿದೆ. ಪ್ರತಿಭಟಿಸುವ ವಿದ್ಯಾರ್ಥಿಗಳ ಜೊತೆ ನಾನು ಸದಾ ಇರುತ್ತೇನೆ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮುನ್ನ ಶಿಕ್ಷಣ ಕ್ಷೇತ್ರದ ಅಧಿಕಾರಿಗಳೊಂದಿಗೆ ವಿಸ್ತೃತ ಮಾತುಕತೆ ನಡೆಸಿದ ಕಿಶೋರ್ ಅವರು, “ಬಿಹಾರದಲ್ಲಿ ಯಾವುದೇ ಪರೀಕ್ಷೆಯು ಭ್ರಷ್ಟಾಚಾರ ಅಥವಾ ಪೇಪರ್ ಸೋರಿಕೆ ಇಲ್ಲದೆ ನಡೆದಿಲ್ಲ. ಇದು ಕೊನೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾವು ಒಂದಾಗಬೇಕು” ಎಂದು ಹೇಳಿದ್ದಾರೆ.
ಡಿಸೆಂಬರ್ ಮಧ್ಯಭಾಗದಲ್ಲಿ ಆರಂಭವಾದ ಆಂದೋಲನವು ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಹಲವು ಅಕ್ರಮಗಳ ಆರೋಪದಿಂದ ಕಿಡಿ ಹೊತ್ತಿಸಿದೆ.
ಹಲವಾರು ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಗಳನ್ನು ತಡವಾಗಿ ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಕೆಲವರು ಪರೀಕ್ಷೆಯು ಪ್ರಾರಂಭವಾಗುವ ಸುಮಾರು ಒಂದು ಗಂಟೆಯ ನಂತರ ಪತ್ರಿಕೆಗಳನ್ನು ಪಡೆದಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಉತ್ತರ ಪತ್ರಿಕೆಗಳು ಹರಿದಿದ್ದು, ಅವ್ಯವಹಾರದ ಭೀತಿ ಮತ್ತಷ್ಟು ಹೆಚ್ಚಿದೆ ಎಂದು ಆರೋಪಿಸಿದ್ದಾರೆ.
ಪ್ರಶಾಂತ್ ಕಿಶೋರ್ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು, ಘರ್ಷಣೆಗೆ ಬಿಹಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಆಂದೋಲನವನ್ನು ವಿದ್ಯಾರ್ಥಿಗಳು ಪ್ರಾರಂಭಿಸಿದ್ದಾರೆ. ನಾನು ಇತ್ತೀಚೆಗೆ ಹೋಗಿದ್ದ ಗರ್ದಾನಿ ಬಾಗ್‌ನಲ್ಲಿ ಸುಮಾರು ಎರಡು ವಾರಗಳ ಕಾಲ ನಡೆದ ಧರಣಿಯು ಸರ್ಕಾರವನ್ನು ನಡುಗುವಂತೆ ಮಾಡಿದೆ ಎಂದು ಅವರು ಭಾನುವಾರ ತಡರಾತ್ರಿ ವಿಡಿಯೋ ಸಂದೇಶದಲ್ಲಿ ತೇಜಸ್ವಿ ತಿಳಿಸಿದ್ದಾರೆ.
ಆಡಳಿತದ ಎಚ್ಚರಿಕೆಯ ಹೊರತಾಗಿಯೂ ಪ್ರತಿಭಟನಾಕಾರರನ್ನು ಗಾಂಧಿ ಮೈದಾನದಲ್ಲಿ ಮೆರವಣಿಗೆ ಮಾಡಲು ದಾರಿ ತಪ್ಪಿಸಲಾಗಿದೆ ಮತ್ತು ಲಾಠಿ ಚಾರ್ಜ್ ಮತ್ತು ನೀರಿನ ಫಿರಂಗಿಗಳನ್ನು ಪ್ರಯೋಗಿಸಿದಾಗ ಪ್ರತಿಭಟನೆಯ ನೇತೃತ್ವ ವಹಿಸಿದ್ದವರು ಓಡಿಹೋಗಲು ನಿರ್ಧರಿಸಿದರು ಎಂದು ಅವರು ಆರೋಪಿಸಿದ್ದಾರೆ.
ರಾಜ್ಯಾದ್ಯಂತ 900ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಐದು ಲಕ್ಷ ಅಭ್ಯರ್ಥಿಗಳು ಡಿಸೆಂಬರ್ 13ರಂದು ನಡೆದ ಬಿಪಿಎಸ್‌ಸಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಪ್ರತಿಭಟನಾಕಾರರ ಬೇಡಿಕೆಯನ್ನು ಆರ್ ಜೆಡಿ ಬೆಂಬಲಿಸುತ್ತದೆ ಎಂದು ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ.
ಆದರೆ ನೀವು ಪೊಳ್ಳು ಭರವಸೆಗಳಿಗೆ ಮಣಿಯಬಾರದು. ಜನವರಿ 4ಕ್ಕೆ ಇನ್ನೂ ಕೆಲವೇ ದಿನಗಳು ಬಾಕಿಯಿದೆ. ಸರ್ಕಾರವನ್ನು ಮಂಡಿಯೂರಿಸಲು ಸಾಕಷ್ಟು ಸಮಯವಿದೆ. ಬಿಪಿಎಸ್‌ಸಿ ಪರೀಕ್ಷೆ ಸರ್ಕಾರದ ಅಡಿಯಲ್ಲಿ ಬರುವುದಿಲ್ಲ ಎಂದು ಹೇಳುವುದು ಅಸಂಬದ್ಧ ಎಂದು ಟೀಕಿಸಿದ್ದಾರೆ.


