ಅಮೆರಿಕದ 39ನೇ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ ಅವರು ನಿಧನರಾಗಿದ್ದಾರೆ, ಅವರಿಗೆ 100 ವರ್ಷ ವಯಸ್ಸಾಗಿತ್ತು. ಜಾರ್ಜಿಯಾದ ಪ್ಲೇನ್ಸ್‌ನಲ್ಲಿರುವ ಅವರ ಮನೆಯಲ್ಲಿ ಕಾರ್ಟರ್ ಕೊನೆಯುಸಿರೆಳೆದಿದ್ದಾರೆ ಎಂದು ಕಾರ್ಟರ್ ಸೆಂಟರ್ ತಿಳಿಸಿದೆ.
1977ರಿಂದ 1981ರವರೆಗೆ ಜಿಮ್ಮಿ ಕಾರ್ಟರ್ ಅವರು ಅಮೆರಿಕದ ಅಧ್ಯಕ್ಷರಾಗಿದ್ದರು. ಶತಾಯುಸಿ ಕಾರ್ಟರ್ ಅತಿ ಹೆಚ್ಚು ಅವಧಿ ಜೀವಿಸಿದ್ದ ಅಮೆರಿಕದ ಅಧ್ಯಕ್ಷ ಎನಿಸಿಕೊಂಡಿದ್ದರು.
ಜಿಮ್ಮಿ ಕಾರ್ಟರ್ ಅವರು ಜಾಕ್, ಚಿಪ್, ಜೆಫ್ ಮತ್ತು ಆ್ಯಮಿ ಎಂಬ ನಾಲ್ವರು ಮಕ್ಕಳು, 11 ಮಂದಿ ಮೊಮ್ಮಕ್ಕಳು ಮತ್ತು 14 ಮಂದಿ ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.
“ಜಿಮ್ಮಿ ಕಾರ್ಟರ್ ಅಗಲಿಕೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಸಂತಾಪ ಸೂಚಿಸಿದ್ದು, “ಇಂದು ಜಗತ್ತು ಅಸಾಧಾರಣ ನಾಯಕ, ರಾಜಕಾರಣಿ ಮತ್ತು ಮಾನವತವಾದಿಯನ್ನು ಕಳೆದುಕೊಂಡಿದೆ” ಎಂದಿದ್ದಾರೆ.
ಹರಿಯಾಣದ ಗ್ರಾಮಕ್ಕೆ ‘ಕಾರ್ಟರ್’ ಹೆಸರು
ಜಿಮ್ಮಿ ಕಾರ್ಟರ್ ಭಾರತಕ್ಕೆ ಭೇಟಿ ನೀಡಿದ ಮೂರನೇ ಅಮೆರಿಕ ಅಧ್ಯಕ್ಷರಾಗಿದ್ದಾರೆ. 1977ರಲ್ಲಿ ತುರ್ತು ಪರಿಸ್ಥಿತಿ ತೆರವಾದ ಬಳಿಕ ಭಾರತಕ್ಕೆ ಆಗಮಿಸಿದ್ದ ಅವರು, ಸಂಸತ್‌ನಲ್ಲಿ ಭಾಷಣ ಮಾಡಿದ್ದರು. ಕಾರ್ಟರ್ ಅವರ ಭೇಟಿಯ ಗೌರವಾರ್ಥ ಹರಿಯಾಣದ ಗ್ರಾಮಕ್ಕೆ ‘ಕಾರ್ಟರ್‌ಪುರಿ’ ಎಂದು ಹೆಸರಿಡಲಾಗಿತ್ತು.
ನೊಬೆಲ್ ಪುರಸ್ಕೃತರು ಜಿಮ್ಮಿ ಕಾರ್ಟರ್
ಪ್ರಾಮಾಣಿಕತೆ ಮತ್ತು ಮಾನವೀಯ ಪ್ರಯತ್ನಗಳಿಗಾಗಿ ಸಾರ್ವತ್ರಿಕ ಶ್ಲಾಘನೆಗೆ ಪಾತ್ರರಾಗಿ ಜಿಮ್ಮಿ ಕಾರ್ಟರ್ ಅವರಿಗೆ, ಇಸ್ರೇಲ್-ಈಜಿಫ್ಟ್ ನಡುವೆ ಶಾಂತಿಗೆ ಮಧ್ಯಸ್ಥಿಕೆ ವಹಿಸಿದ್ದಕ್ಕೆ ಹಾಗೂ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ವಿಶ್ವಾದ್ಯಂತ ಪಸರಿಸಿದ್ದಕ್ಕಾಗಿ 2002ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾರ್ಟರ್ ಅವರು 1978ರಲ್ಲಿ ಇಸ್ರೇಲ್ ಮತ್ತು ಈಜಿಫ್ಟ್ ನಡುವೆ ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದರು.
ಇದನ್ನೂ ಓದಿ : 15 ಅಡಿ ಎತ್ತರದ ವೇದಿಕೆಯಿಂದ ಬಿದ್ದ ಕಾಂಗ್ರೆಸ್ ಶಾಸಕಿ : ಗಂಭೀರ ಗಾಯ


