ಗೋಹತ್ಯೆ ಶಂಕೆ ಮೇಲೆ ಸ್ವಘೋಷಿತ ಗೋರಕ್ಷಕರ ಗುಂಪು ವ್ಯಕ್ತಿಯೊಬ್ಬರನ್ನು ಅಮಾನವೀಯವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಮಜೋಲಾದಲ್ಲಿ ಸೋಮವಾರ (ಡಿ.30) ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಶಹದೀನ್ ಖುರೇಷಿ (37) ಎಂದು ಗುರುತಿಸಲಾಗಿದೆ. ಗುಂಪು ಹಲ್ಲೆಗೊಳಗಾದ ಶಹದೀನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಶಹದೀನ್ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದನ್ನು ಮಂಗಳವಾರ ಆರೋಪಿಗಳೇ ಹರಿಬಿಟ್ಟಿರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ವಿಡಿಯೋದಲ್ಲಿ, ಬಲಪಂಥೀಯ ಸಂಘಟನೆಯ ಕೆಲ ಕಾರ್ಯಕರ್ತರು ಶಹದೀನ್ ಅವರಿಗೆ ಒದಿಯುತ್ತಿರುವ, ಗುದ್ದುತ್ತಿರುವ ಮತ್ತು ಹರಿತವಾದ ಆಯುಧಗಳಿಂದ ಹೊಡೆಯುತ್ತಿರುವ ದೃಶ್ಯವಿದೆ. ನೆಲದಲ್ಲಿ ಬಿದ್ದಿರುವ ಶಹದೀನ್ ಮೈತುಂಬಾ ಗಾಯಗಳು ಕಾಣಿಸುತ್ತಿದ್ದು, ಉಸಿರಾಡಲು ಕಷ್ಟಪಡುತ್ತಿರುವ ದೃಶ್ಯ ಮನ ಕಲುಕುವಂತಿದೆ. ಶಹದೀನ್ ಅವರ ಪಕ್ಕದಲ್ಲಿ ಸತ್ತ ಹಸುವಿನ ಕಳೇಬರ ಇದ್ದು, ಹಸುವನ್ನು ಶಹದೀನ್ ಅವರೇ ಹತ್ಯೆ ಮಾಡಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ವರದಿ ವಿವರಿಸಿದೆ.
“ಜಾನುವಾರನ್ನು ಹತ್ಯೆ ಮಾಡಲಾಗಿದೆ ಎನ್ನುವುದು ಸ್ಥಳೀಯರಿಗೆ ತಿಳಿದು ಬಂದಿದ್ದು, ಹಸುವನ್ನು ಹತ್ಯೆ ಮಾಡಲಾಗಿದೆ ಎನ್ನಲಾದ ಗುಂಪಿನ ಎಲ್ಲರೂ ತಪ್ಪಿಸಿಕೊಂಡಿದ್ದು, ಒಬ್ಬ ವ್ಯಕ್ತಿಯನ್ನು ಮಾತ್ರ ಸಾರ್ವಜನಿಕರು ಹಿಡಿದಿದ್ದಾರೆ. ಹಸುವಿನ ಕಳೇಬರವನ್ನು ಕಂಡು ಸಾರ್ವಜನಿಕರು ವ್ಯಕ್ತಿಯನ್ನು ಅಮಾನುಷವಾಗಿ ಥಳಿಸಿದ್ದಾರೆ. ಚಿಕಿತ್ಸೆ ವೇಳೆ ವ್ಯಕ್ತಿ ಮೃತಪಟ್ಟಿದ್ದಾರೆ. ವ್ಯಕ್ತಿಯ ಸಹೋದರ ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಕೊಲೆ ಆರೋಪದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಶೀಘ್ರ ಪತ್ತೆ ಮಾಡಿ ಬಂಧಿಸಲಾಗುವುದು” ಎಂದು ಮೊರದಾಬಾದ್ ನಗರ ಎಸ್ಪಿ ರಣವಿಜಯ ಸಿಂಗ್ ಹೇಳಿದ್ದಾರೆ.
ಮಾಂಸದ ಅಂಗಡಿ ನಡೆಸುತ್ತಿರುವ ಶಹದೀದ್ ಅವರ ಸಹೋದರ ಶಹಝಾದ್ ಮಾತನಾಡಿದ್ದು “ನನ್ನ ಸಹೋದರ ಬಾಡಿಬಿಲ್ಡರ್ ಆಗಿದ್ದು, ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಂಸದ ವ್ಯಾಪಾರಕ್ಕೂ ಆತನಿಗೂ ಯಾವುದೇ ಸಂಬಂಧವಿಲ್ಲ. ಈ ಹಿಂದೆ ಆತನ ವಿರುದ್ಧ ಯಾವುದೇ ಎಫ್‌ಐಆರ್ ಕೂಡ ದಾಖಲಾಗಿಲ್ಲ. ಒಂದು ವರ್ಷದ ಹಿಂದೆ, ಅನಾರೋಗ್ಯಕ್ಕೆ ಒಳಗಾಗಿದ್ದ ಶಹದೀನ್ ಶ್ವಾಸಕೋಶಗಳು ದುರ್ಬಲಗೊಂಡಿದ್ದರಿಂದ ಆಸ್ಪತ್ರೆಯಲ್ಲಿ ಸುಮಾರು ಆರು ತಿಂಗಳ ಕಾಲ ಕಳೆದಿದ್ದರು. ಈ ವೇಳೆ ಅವರ ಕೆಲಸ ಹೋಗಿತ್ತು. ನನ್ನ ಸಹೋದರ ಎಂದಿಗೂ ತಪ್ಪು ಕೆಲಸ ಮಾಡುವವನಲ್ಲ. ಇತರರು ಮಾಡಿರುವುದಕ್ಕೆ ಈತ ಬೆಲೆ ತೆತ್ತಿದ್ದಾನೆ” ಎಂದು ಹೇಳಿದ್ದಾಗಿ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ಶಹದೀನ್ ಅವರ ಪತ್ನಿ ರಿಝ್ವಾನಾ ಮಾತನಾಡಿ, “ಭಾನುವಾರ ಮಧ್ಯರಾತ್ರಿಯ ಸುಮಾರಿಗೆ ನನ್ನ ಪತಿ ಮನೆಯಲ್ಲಿ ಮಲಗಿದ್ದಾಗ, ಅವರ ಸ್ನೇಹಿತರು ಕರೆದುಕೊಂಡು ಹೋಗಿದ್ದರು. ಕೆಲ ಗಂಟೆಗಳ ನಂತರ, ಗುಂಪೊಂದು ಶಹದೀನ್ ಅವರನ್ನು ಹತ್ಯೆಗೈದಿರುವುದು ನಮಗೆ ತಿಳಿಯಿತು. ಅಪರಾಧಿಗಳು ನಿರ್ದಯವಾಗಿ ಹಲ್ಲೆ ನಡೆಸುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುವ ವಿಡಿಯೋಗಳಿದ್ದರೂ, ಪೊಲೀಸರು ಅಪರಿಚಿತರ ವಿರುದ್ದ ಎಫ್‌ಐಅರ್ ದಾಖಲಿಸಿದ್ದಾರೆ” ಎಂದು ಅಸಮಧಾನ ವ್ಯಕ್ತಪಡಿಸಿದ್ದಾಗಿ ವರದಿ ಹೇಳಿದೆ.
“ನಮ್ಮ ಗುಂಪಿನ ಸದಸ್ಯರೂ ಆಗಿರುವ ಸ್ಥಳೀಯ ಅಂಗಡಿಯವರಿಂದ ಒಬ್ಬ ವ್ಯಕ್ತಿ ಗೋಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ನಮಗೆ ತಿಳಿಯಿತು. ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಗೋವಿನ ಕಳೇಬರದೊಂದಿಗೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಹಸುವನ್ನು ಹತ್ಯೆ ಮಾಡಿದವರ ವಿರುದ್ಧ ದೂರು ದಾಖಲಿಸಲಾಗಿದೆ ಮತ್ತು ಪೊಲೀಸರು ನಮಗೆ ಕಠಿಣ ಕ್ರಮದ ಭರವಸೆ ನೀಡಿದ್ದಾರೆ” ಎಂದು ರಾಷ್ಟ್ರೀಯ ಬಜರಂಗ ದಳದ ಕಾರ್ಯಾಧ್ಯಕ್ಷ ರೋಹನ್ ಸಕ್ಸೇನಾ ಹೇಳಿದ್ದಾರೆ.
ಅಸಲತ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದ ಶಹದೀನ್ ಖುರೇಷಿ ಅವರು ಪತ್ನಿ ರಿಝ್ವಾನಾ ಮತ್ತು ಮೂವರು ಪುತ್ರರಾದ ಆರಾಮ್ (13), ಆಶಿ (11) ಮತ್ತು ಇಬ್ಝಾನ್ (9) ಅವರನ್ನು ಅಗಲಿದ್ದಾರೆ. ಸೋಮವಾರ ರಾತ್ರಿ ಶಹದೀನ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ, ಮಂಗಳವಾರ ಬೆಳಗ್ಗೆ ಅಂತ್ಯಕ್ರಿಯೆ ನಡೆಸಲಾಗಿದೆ.
ಕೃಪೆ : timesofindia.indiatimes.com
ಇದನ್ನೂ ಓದಿ : ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣ : ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


