ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸುವ ಕೇರಳದ ತಿರುವನಂತಪುರಂನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು ಪ್ಲಸ್ ಒನ್ (11ನೇ ತರಗತಿ) ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಟ್ಯೂಷನ್ ಶಿಕ್ಷಕನಿಗೆ ಮಂಗಳವಾರ (ಡಿ.30) 111 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ತಿರುವನಂತಪುರಂ ಜಿಲ್ಲೆಯ ಮನಕಾಡು ಬಳಿಯ ಕೊಂಚಿರವಿಳ ನಿವಾಸಿ ಮನೋಜ್ (44) ಶಿಕ್ಷೆಗೆ ಗುರಿಯಾದ ಅಪರಾಧಿ. ವಿಶೇಷ ನ್ಯಾಯಾಧೀಶೆ ರೇಖಾ ಆರ್. ಅವರು ಶಿಕ್ಷೆ ಪ್ರಕಟಿಸಿದ್ದು, 1.05 ಲಕ್ಷ ರೂ. ದಂಡವನ್ನೂ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಲು ಆದೇಶಿಸಿದ್ದಾರೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿಜಯ್ ಮೋಹನ್ ಆರ್.ಎಸ್ ನೇತೃತ್ವದ ಪ್ರಾಸಿಕ್ಯೂಷನ್ ಪ್ರಕಾರ, ಸರ್ಕಾರಿ ನೌಕರ ಮನೋಜ್ ಜುಲೈ 2, 2019 ರಂದು ವಿಶೇಷ ಟ್ಯೂಷನ್ ತರಗತಿಯ ನೆಪದಲ್ಲಿ ಬಾಲಕಿಯನ್ನು ತನ್ನ ಮನೆಗೆ ಕರೆಸಿದ್ದ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ತನ್ನ ದುಷ್ಕೃತ್ಯವನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಆತ, ಬಾಲಕಿಯನ್ನು ಬೆದರಿಸಿ ಮತ್ತೆ ಕಿರುಕುಳ ನೀಡಲು ಯತ್ನಿಸಿದ್ದ.
ಆತ್ಮಹತ್ಯೆ ಮಾಡಿಕೊಂಡ ಮನೋಜ್ ಪತ್ನಿ
ಅತ್ಯಾಚಾರಕ್ಕೊಳಗಾದ ಬಳಿಕ ಆಘಾತಕ್ಕೊಳಗಾದ ಬಾಲಕಿ ಮನೋಜ್ ಮನೆಗೆ ಟ್ಯೂಷನ್‌ಗೆ ಹೋಗುವುದನ್ನು ನಿಲ್ಲಿಸಿದ್ದಳು. ಇದರಿಂದ ಮನೋಜ್ ಬಾಲಕಿ ಮೇಲೆ ಅತ್ಯಾಚಾರವೆಸಗಿರುವುದು ಆತನ ಪತ್ನಿಗೆ ಗೊತ್ತಾಗಿತ್ತು. ಪತಿಯ ದುಷ್ಕೃತ್ಯದಿಂದ ನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ನಡುವೆ ಬಾಲಕಿ ಮೇಲೆ ನಡೆದ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು.
ಬಾಲಕಿಯ ಪೋಷಕರು ಮನೋಜ್ ವಿರುದ್ದ ಸ್ಥಳೀಯ ಫೋರ್ಟ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ವೇಳೆ ತಾನು ತಪ್ಪಿತಸ್ಥ ಅಲ್ಲ ಎಂದು ರುಜುವಾತು ಮಾಡಲು ಮನೋಜ್ ಎಲ್ಲಾ ಪ್ರಯತ್ನ ನಡೆಸಿದ್ದ. ಆದರೆ, ಪೊಲೀಸರು ಮನೋಜ್‌ನ ಮೊಬೈಲ್‌ನಿಂದ ಅಶ್ಲೀಲ ವಿಡಿಯೋಗಳನ್ನು ವಶಪಡಿಸಿಕೊಂಡಿದ್ದರು ಮತ್ತು ಆತನ ಮೊಬೈಲ್ ನೆಟ್‌ವರ್ಕ್ ಟ್ರ್ಯಾಕ್ ಮಾಡಿದಾಗ ದೊರೆತ ಮಾಹಿತಿಗಳು, ಬಾಲಕಿ ಮೇಲೆ ಅತ್ಯಾಚಾರವೆಸಗಿದ ದಿನದಂದು ಆತ ಟ್ಯೂಷನ್ ಸೆಂಟರ್‌ನಲ್ಲಿದ್ದ ಎಂಬುವುದನ್ನು ದೃಢಪಡಿಸಿತ್ತು.
ಪ್ರಕರಣದ ತನಿಖೆ ವೇಳೆ 24 ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ವಿಚಾರಣೆ ನಡೆಸಿದೆ. 46 ದಾಖಲೆಗಳನ್ನು ಮತ್ತು ಐದು ವಸ್ತುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಮಹತ್ವದ ತೀರ್ಪು ಪ್ರಕಟಿಸಿದ ನ್ಯಾಯಾಧೀಶೆ ರೇಖಾ ಅವರು, “ತಪ್ಪಿತಸ್ಥರ ಮೇಲೆ ಕರುಣೆ ತೋರಿಸುವ ಅಗತ್ಯವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ : ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣ : ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


