ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ವಿಷಾದ ವ್ಯಕ್ತಪಡಿಸಿದ ಮರುದಿನವೇ ಇಂದು (ಜ.1) ಮಣಿಪುರದಲ್ಲಿ ಹಿಂಸಾಚಾರ ನಡೆದಿದೆ. ಈ ಮೂಲಕ ಹೊಸ ವರ್ಷವೂ ಸಂಘರ್ಷ ಮುಂದುವರೆದಂತಾಗಿದೆ.
ಇಂದು ಮುಂಜಾನೆ ಇಂಫಾಲ್ ಪಶ್ಚಿಮ ಜಿಲ್ಲೆಯ ಕಡಂಗ್‌ಬಂಡ್ ಪ್ರದೇಶದಲ್ಲಿ ಶಂಕಿತ ಬಂಡುಕೋರರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್‌ಪೋಕ್ಪಿ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಿಂದ ಬಂಡುಕೋರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಹಲವಾರು ಸುತ್ತು ಗುಂಡು ಹಾರಿಸಿದ್ದಾರೆ ಮತ್ತು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಇಂಫಾಲ್ ಪಶ್ಚಿಮ ಜಿಲ್ಲೆಯ ಕಡಂಗ್‌ಬಂಡ್‌ನ ತಗ್ಗು ಪ್ರದೇಶಗಳ ಮೇಲೆ ಬಾಂಬ್‌ಗಳನ್ನು ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಪಡೆಗಳು ಧಾವಿಸಿದ್ದರೂ, ಆ ಪ್ರದೇಶದಲ್ಲಿ ನಿಯೋಜಿಸಲಾದ ಗ್ರಾಮ ಸ್ವಯಂಸೇವಕರು ಗುಂಡು ಸಿಡಿಸಿ, ಬೆದರಿಸಿ ಭದ್ರತಾ ಪಡೆಗಳನ್ನು ವಾಪಸ್ ಕಳುಹಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಿಂದಾಗಿ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿದ್ದ ಹಲವಾರು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡಬೇಕಾಯಿತು ಎಂದು ವರದಿಗಳು ಹೇಳಿವೆ.
ಮೇ 2023ರಲ್ಲಿ ರಾಜ್ಯದಲ್ಲಿ ಹಿಂಸಾಚಾರ ಪ್ರಾರಂಭವಾದಾಗಿನಿಂದ ಕಡಂಗ್‌ಬಂಡ್ ಪ್ರದೇಶದಲ್ಲಿ ಶಂಕಿತ ಬಂಡುಕೋರರು ಹಲವಾರು ಬಾರಿ ದಾಳಿ ನಡೆಸಿದ್ದಾರೆ.
2023ರಲ್ಲಿ ಪ್ರಾರಂಭಗೊಂಡ ಮಣಿಪುರದ ಜನಾಂಗೀಯ ಹಿಂಸಾಚಾರ ಎರಡು ವರ್ಷಗಳು ಪೂರ್ಣಗೊಳ್ಳುತ್ತಾ ಬಂದರೂ ಕೊನೆಗೊಳ್ಳುವ ಲಕ್ಷಣ ಕಾಣುತ್ತಿಲ್ಲ. 2024ರ ಕೊನೆಯ ದಿನವಾದ ನಿನ್ನೆ (ಡಿ.31) ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಅವರು ಸುದ್ದಿಗೋಷ್ಠಿ ನಡೆಸಿ “ಹಿಂದಿನದನ್ನು ಮರೆತುಬಿಡಿ, ನನ್ನನ್ನು ಕ್ಷಮಿಸಿ” ಎಂದು ಮನವಿ ಮಾಡಿದ್ದರು. ಆದರೆ, ಇಂದು ಹೊಸ ವರ್ಷದಂದೂ ದಾಳಿ ಮುಂದುವರೆದಿದೆ.
ಇದನ್ನೂ ಓದಿ : ‘ನನ್ನನ್ನು ಕ್ಷಮಿಸಿ, ಹಿಂದಿನದನ್ನು ಮರೆತುಬಿಡಿ..’; ಮಣಿಪುರ ಹಿಂಸಾಚಾರಕ್ಕೆ ಕ್ಷಮೆಯಾಚಿಸಿದ ಮುಖ್ಯಮಂತ್ರಿ ಬಿರೇನ್ ಸಿಂಗ್


