2024ನೇ ವರ್ಷವು 1901ರಿಂದ ಇದುವರೆಗೆ ಭಾರತದಲ್ಲಿ ದಾಖಲಾದ ಗರಿಷ್ಠ ತಾಪಮಾನದ ವರ್ಷವಾಗಿದೆ. ಸರಾಸರಿ ಕನಿಷ್ಠ ತಾಪಮಾನವು ದೀರ್ಘಾವಧಿಯ ಸರಾಸರಿಗಿಂತ 0.90 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ (ಜ.1) ತಿಳಿಸಿದೆ.
ವರ್ಷದ ಕೊನೆಯ ಮೂರು ತಿಂಗಳುಗಳು (ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್) ಅತಿ ಹೆಚ್ಚು ತಾಪಮಾನ ದಾಖಲಾದ ಜಂಟಿ ತಿಂಗಳುಗಳಾದರೆ, ಅಕ್ಟೋಬರ್ 2024 ಅತಿ ಹೆಚ್ಚು ತಾಪಮಾನ ದಾಖಲಾದ ಒಂಟಿ (ಪ್ರತ್ಯೇಕ) ತಿಂಗಳಾಗಿದೆ ಎಂದು ಐಎಂಡಿ ಹೇಳಿದೆ.
2024ರ ವಾರ್ಷಿಕ ಸರಾಸರಿ ತಾಪಮಾನವು 25.75 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಇದು ದೀರ್ಘಾವಧಿ ಸರಾಸರಿ ತಾಪಮಾನಕ್ಕಿಂತ 0.65 ಹೆಚ್ಚು. ಸರಾಸರಿ ಗರಿಷ್ಠ ತಾಪಮಾನವು 31.25 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಇದು ಸಾಮಾನ್ಯಕ್ಕಿಂತ 0.20 ಡಿಗ್ರಿ ಹೆಚ್ಚು ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ವಿವರಿಸಿದ್ದಾರೆ.
ಈ ಹಿಂದೆ 2016ರಲ್ಲಿ ಗರಿಷ್ಠ ತಾಪಮಾನ ದಾಖಲಾಗಿತ್ತು. ದೀರ್ಘಾವಧಿ ಸರಾಸರಿ ತಾಪಮಾನಕ್ಕಿಂತ 0.54 ಹೆಚ್ಚು ಇತ್ತು. 2016 ಮತ್ತು 2024ರ ಸರಾಸರಿ ತಾಪಮಾನದ ನಡುವೆ 0.11 ಡಿಗ್ರಿ ವ್ಯತ್ಯಾಸ ಕಂಡು ಬಂದಿದೆ.
ಭಾರತದಲ್ಲಿ ತಾಪಮಾನ ಏರಿಕೆಯೊಂದಿಗೆ ಜಾಗತಿಕ ತಾಪಮಾನದಲ್ಲೂ ಹೆಚ್ಚಳ ಕಂಡು ಬಂದಿದೆ. ವಿಶ್ವ ಹವಾಮಾನ ಸಂಸ್ಥೆ ಕೂಡ 2024ನ್ನು ಅತ್ಯಂತ ಬೆಚ್ಚಗಿನ ವರ್ಷ ಎಂದು ಹೇಳಿದೆ. ಜಾಗತಿಕ ತಾಪಮಾನ ಪ್ಯಾರಿಸ್ ಒಪ್ಪಂದದ ಮಿತಿಯನ್ನು ಮೀರಿ 1.5ರಷ್ಟು ಹೆಚ್ಚಳವಾಗಿದೆ. ಪ್ಯಾರಿಸ್ ಒಪ್ಪಂದವು ಕೈಗಾರಿಕಾ ಪೂರ್ವದ(1850-1900) ತಾಪಮಾನವನ್ನು ಮಿತಿಯಾಗಿಟ್ಟುಕೊಂಡಿದೆ. 2023ರಲ್ಲಿ ಜಾಗತಿಕ ತಾಪಮಾನ 1.45 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿತ್ತು. ಈ ಬಾರಿ ಆ ದಾಖಲೆ ಮುರಿದಿದೆ.
ಜನವರಿಯಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಪೂರ್ವ ವಾಯುವ್ಯ ಮತ್ತು ಪಶ್ಚಿಮ-ಮಧ್ಯ ಪ್ರದೇಶಗಳ ಕೆಲವು ಪ್ರದೇಶಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಐಎಂಡಿಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಜನವರಿಯಲ್ಲಿ ಮಧ್ಯ ಭಾರತದ ಪಶ್ಚಿಮ ಮತ್ತು ಉತ್ತರ ಭಾಗಗಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಶೀತದ ವಾತವರಣವಿರುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಭೀಮಾ-ಕೋರೆಗಾಂವ್ ಶೌರ್ಯ ದಿನ : ಸ್ಮಾರಕ ವಿಸ್ತರಣೆಗೆ ₹200 ಕೋಟಿ ಬೇಡಿಕೆ


