ಪೋಕ್ಸೋ ಪ್ರಕರಣದ ಆರೋಪಿಯನ್ನು ಬಂಧನದಿಂದ ರಕ್ಷಿಸಿ ಕಾನೂನುಬಾಹಿರ ಕೃತ್ಯವೆಸಗಿದ ಪ್ರಕರಣದಲ್ಲಿ ಚೆನ್ನೈನ ಅಣ್ಣಾ ನಗರ ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಮತ್ತು ಎಐಎಡಿಎಂಕೆ ಪಕ್ಷದ ಕಾರ್ಯಕರ್ತನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ.
ಅಣ್ಣಾ ನಗರ ಮಹಿಳಾ (ಎಲ್ಲಾ) ಠಾಣೆಯ ಇನ್‌ಸ್ಪೆಕ್ಟರ್ ರಾಜಿ ಮತ್ತು ಎಐಎಡಿಎಂಕೆ ಪಕ್ಷದ ಕಾರ್ಯಕರ್ತ ಸುಧಾಕರ್ ಬಂಧನಕ್ಕೊಳಗಾದ ಆರೋಪಿಗಳು ಎಂದು ದಿ ನ್ಯೂಸ್ ಮಿನಿಟ್ ವರದಿ ಹೇಳಿದೆ.
ಇನ್‌ಸ್ಪೆಕ್ಟರ್ ರಾಜಿ ವಿರುದ್ದ ಸಂತ್ರಸ್ತೆಗೆ ಬೆದರಿಕೆ ಹಾಕಿ ಹೇಳಿಕೆ ಬದಲಿಸುವ ಮೂಲಕ ಪ್ರಕರಣದ ದಿಕ್ಕು ತಪ್ಪಿಸಿದ ಅಥವಾ ಕಳಪೆ ತನಿಖೆ ನಡೆಸಿದ ಆರೋಪವಿದೆ. ಎಐಎಡಿಎಂ ಕಾರ್ಯಕರ್ತ ಸುಧಾಕರ್ ವಿರುದ್ದ ಆರೋಪಿಗೆ ರಕ್ಷಣೆ ಒದಗಿಸಿರುವ ಆರೋಪವಿದೆ.
ಪ್ರಕರಣದ ಹಿನ್ನೆಲೆ : ಆರೋಗ್ಯ ಹದೆಗೆಟ್ಟ ಕಾರಣ ಆಗಸ್ಟ್ 29, 2024ರಂದು 10 ವರ್ಷದ ಬಾಲಕಿಯನ್ನು ಆಕೆಯ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷಿಸಿದ ವೈದ್ಯರು ಆಕೆಯ ಮೇಲೆ ಅತ್ಯಾಚಾರ ನಡೆದಿರುವುದಾಗಿ ಹೇಳಿದ್ದರು. ಬಾಲಕಿಯನ್ನು ವಿಚಾರಿಸಿದಾಗ, ಆಕೆ ತನ್ನ ಪಕ್ಷದ ಮನೆಯ ನೀರು ವಿತರಕ 30 ವರ್ಷದ ಸತೀಶ್ ಎಂಬಾತ ಕೃತ್ಯವೆಸಗಿರುವುದಾಗಿ ಹೇಳಿದ್ದಳು.
ತಮ್ಮ ಮಗಳ ಮೇಲೆ ದೌರ್ಜನ್ಯ ನಡೆದಿರುವ ಕುರಿತು ದೂರು ನೀಡಲು ಬಾಲಕಿಯ ಪೋಷಕರು ಆಗಸ್ಟ್ 30, 2024ರಂದು ಅಣ್ಣಾ ನಗರ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ರಾಜಿ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಳಿಕ ಪೋಷಕರಿಂದ ದೂರು ಪಡೆದುಕೊಂಡ ಪೊಲೀಸರು, ಅಂದೇ ಎಫ್‌ಐಆರ್ ದಾಖಲಿಸಿದ್ದರು. ಬಾಲಕಿ ಹೆಸರಿಸಿದ ಆರೋಪಿ ಸತೀಶ್ ವಿರುದ್ದ ಸೆಕ್ಷನ್ 5(ಐ),5(ಎಂ), ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ- 2012ರ ಸೆಕ್ಷನ್ 6ರ ಅಡಿಯಲ್ಲಿ ಆರೋಪ ಹೊರಿಸಿದ್ದರು. ರಾತ್ರಿ 10 ಗಂಟೆಯ ನಂತರ ಬಾಲಕಿ ದಾಖಲಾಗಿದ್ದ ಆಸ್ಪತ್ರೆಗೆ ತೆರಳಿ ಬಾಲಕಿಯಿಂದ ಹೇಳಿಕೆ ಪಡೆದಿದ್ದರು.
“ಬಾಲಕಿಯಿಂದ ಹೇಳಿಕೆ ಪಡೆಯವಾಗ, ಆರೋಪಿ ಸತೀಶ್ ಹೆಸರು ಹೇಳದಂತೆ ಪೊಲೀಸರು ಆಕೆಯನ್ನು ಹೆದರಿಸಿದ್ದಾರೆ. ಸತೀಶ್ ಹೆಸರು ಹೇಳಿದರೆ ನಿನ್ನ ತಂದೆ-ತಾಯಿ ಜೈಲಿಗೆ ಹೋಗುತ್ತಾರೆ. ನಂತರ ನಿನ್ನ ಸಹೋದರರು ಕೇರ್ ಹೋಮ್‌ನಲ್ಲಿ ಉಳಿಯಬೇಕಾಗುತ್ತದೆ ಎಂದು ಭಯ ಹುಟ್ಟಿಸಿದ್ದಾರೆ. ಇದರಿಂದ ಹೆದರಿದ ಬಾಲಕಿ ಆರಂಭದಲ್ಲಿ ಹೇಳಿದ್ದ ಸತೀಶ್ ಬದಲು, ಮತ್ತೊಬ್ಬ ಅಪ್ರಾಪ್ತನನ್ನು ಆರೋಪಿ ಎಂದು ಹೆಸರಿಸಿದ್ದಾಳೆ” ಎಂದು ಆಕೆಯ ತಾಯಿ ಆರೋಪಿಸಿದ್ದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಈ ನಡುವೆ ಸಂತ್ರಸ್ತ ಬಾಲಕಿ ಪೊಲೀಸರ ಮುಂದೆ ಹೇಳಿಕೆ ನೀಡಿದ ಆಡಿಯೋ ಮತ್ತು ಪ್ರಕರಣದ ಎಫ್‌ಐಆರ್ ಮಾಹಿತಿ ಸೆಪ್ಟೆಂಬರ್ 2024ರಂದು ಪೊಲೀಸರು ಸೋರಿಕೆ ಮಾಡಿದ್ದರು.
ಮದ್ರಾಸ್ ಹೈಕೋರ್ಟ್ ಈ ಸಂಬಂಧ ಸೆಪ್ಟೆಂಬರ್‌ನಲ್ಲಿ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತ್ತು. ಅಕ್ಟೋಬರ್ 1ರಂದು ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿತ್ತು.
ಉದ್ಯಮಿ ಬಾಬಿ ಚೆಮ್ಮನ್ನೂರ್ ವಿರುದ್ಧ ದೂರು ದಾಖಲಿಸಿದ ಮಲಯಾಳಂ ನಟಿ ಹನಿ ರೋಸ್


