ಬಂದೂಕು ಮತ್ತು ಯುದ್ಧಕಲೆ ತರಬೇತಿ ಶಿಬಿರ ಆಯೋಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಸಂಘಟನೆ ಶ್ರೀರಾಮ ಸೇನೆಯ 27 ಸದಸ್ಯರ ವಿರುದ್ದ ಬಾಗಲಕೋಟೆ ಜಿಲ್ಲೆಯ ಸಾವಳಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಬಂದೂಕು ತರಬೇತಿ ಶಿಬಿರವನ್ನು ಆಯೋಜಿಸಿ ಅತಿಕ್ರಮಣ ಮತ್ತು ಶಸ್ತ್ರಾಸ್ತ್ರ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ನಿಂಗಪ್ಪ ಶಿವಪ್ಪ ಹೂಗಾರ ಎಂಬವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಜನವರಿ 7ರ ಮಂಗಳವಾರ ಪ್ರಕರಣ ದಾಖಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
2024ರ ಡಿಸೆಂಬರ್ 25 ರಿಂದ 29ರವರೆಗೆ ಬಾಗಲಕೋಟೆ ಜಿಲ್ಲೆಯ ತೊದಲಬಾಗಿ ಗ್ರಾಮದಲ್ಲಿರುವ ಕಾಶಿ ಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀರಾಮ ಸೇನೆಯು ಶಸ್ತ್ರಾಸ್ತ್ರ ತರಬೇತಿ ಶಿಬಿರವನ್ನು ನಡೆಸಿತ್ತು.
ತನ್ನ ಮತ್ತು ತನ್ನ ಸಹೋದರನ ಒಡೆತನದ ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿದ್ದಲ್ಲದೆ, ಬಂದೂಕು ತರಬೇತಿ ನೀಡುವ ಮೂಲಕ ಕಾನೂನು ಉಲ್ಲಂಘಿಸಿರುವ ಶ್ರೀರಾಮ ಸೇನೆಯ 27 ಮಂದಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ನಿಂಗಪ್ಪ ಅವರು ದೂರು ನೀಡಿದ್ದರು.
“ಅವರು (ಶ್ರೀರಾಮ ಸೇನೆ ಸದಸ್ಯರು) ಅನುಮತಿ ಪಡೆಯದೆ ಅಕ್ರಮವಾಗಿ ನಮ್ಮ ಜಮೀನಿಗೆ ಪ್ರವೇಶಿಸಿದ್ದಲ್ಲದೆ, ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದಾರೆ. ಈ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಸಾರ್ವಜನಿಕರಲ್ಲಿ ಭಯ ಉಂಟಾಗಿದೆ” ಎಂದು ನಿಂಗಪ್ಪ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ನ್ಯೂಸ್ ಮಿನಿಟ್ ವರದಿ ವಿವರಿಸಿದೆ.
“ಜಮೀನು ಮಾಲೀಕರಿಂದ ದೂರು ಬಂದ ನಂತರ ಕ್ರಮ ಕೈಗೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ. ಶಿಬಿರದಲ್ಲಿ ಬಳಸಿರುವುದು ಬಂದೂಕುಗಳೇ ಅಥವಾ ಏರ್‌ಗನ್‌ಗಳೇ? ಎಂಬುದನ್ನು ನಿರ್ಧರಿಸಲು ಜಮಖಂಡಿ ಪೊಲೀಸ್ ಉಪ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಲಾಗಿದೆ, ಇನ್ನೂ ವರದಿ ಸಲ್ಲಿಕೆಯಾಗಿಲ್ಲ” ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ. ಅಮರನಾಥ ರೆಡ್ಡಿ ಹೇಳಿದ್ದಾಗಿ ವರದಿ ತಿಳಿಸಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 329(3) (ಅತಿಕ್ರಮಣ) ಮತ್ತು ಶಸ್ತ್ರಾಸ್ತ್ರ ಪರವಾನಗಿ ಷರತ್ತುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ 1959 ರ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 30ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಶ್ರೀರಾಮ ಸೇನೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ (ಎಐಎಲ್‌ಎಜೆ) ಒತ್ತಾಯಿಸಿದ್ದು, ಪೊಲೀಸರ ಆರಂಭಿಕ ನಿಷ್ಕ್ರಿಯತೆಯನ್ನು ಟೀಕಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ಎಐಎಲ್‌ಎಜೆ, ರಾಜ್ಯದಲ್ಲಿ ಉಗ್ರಗಾಮಿ ಗುಂಪುಗಳು ನಡೆಸುವ ಇದೇ ರೀತಿಯ ಚಟುವಟಿಕೆಗಳ ಮಾದರಿಯನ್ನು ಎತ್ತಿ ತೋರಿಸಿದೆ. ಇಂತಹ ಕೃತ್ಯಗಳು ಕೋಮು ಸಾಮರಸ್ಯವನ್ನು ಹಾಳುಮಾಡುತ್ತವೆ ಮತ್ತು ಅಲ್ಪಸಂಖ್ಯಾತರು, ದಲಿತರು ಮತ್ತು ಪ್ರಗತಿಪರ ಚಿಂತಕರ ವಿರುದ್ಧ ಹಿಂಸಾಚಾರವನ್ನು ಉತ್ತೇಜಿಸುತ್ತವೆ ಎಂದು ಹೇಳಿದೆ.
AILAJ Karnataka has written to the @DgpKarnataka seeking for action against the organisers of the arms training camp by Sri Rama Sena. Such right-wing organisations have disrupted communal harmony and engaged in moral policing, mob lynchings & violence. pic.twitter.com/JFkYLJnDrJ
— AILAJ_HQ (@AilajHq) January 7, 2025
ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಅವರ ಹತ್ಯೆಯಂತಹ ಘಟನೆಗಳನ್ನು ಉಲ್ಲೇಖಿಸಿ, ಈ ಶಿಬಿರಗಳಂತಹ ಅನಿಯಂತ್ರಿತ ಚಟುವಟಿಕೆಗಳು ಸಮಾಜಕ್ಕೆ ದೊಡ್ಡ ಮಟ್ಟದ ಅಪಾಯಗಳನ್ನು ಉಂಟು ಮಾಡುತ್ತವೆ ಎಂದು ಎಐಎಲ್‌ಎಜೆ ಕಳವಳ ವ್ಯಕ್ತಪಡಿಸಿದೆ.
ಬಂದೂಕು ತರಬೇತಿ ಶಿಬಿರ ಸಂಘಟಕರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 (ಕೆಲವು ಅಪರಾಧಗಳಿಗೆ ಶಿಕ್ಷೆ) ಮತ್ತು 27 (ಶಸ್ತ್ರಾಸ್ತ್ರಗಳನ್ನು ಬಳಸಿದ್ದಕ್ಕಾಗಿ ಶಿಕ್ಷೆ) ಹಾಗೂ ಬಿಎನ್‌ಎಸ್‌ನ ಸೆಕ್ಷನ್ 61 (ಕ್ರಿಮಿನಲ್ ಪಿತೂರಿ) ಮತ್ತು 189 (ಕಾನೂನುಬಾಹಿರ ಸಭೆ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಎಐಎಲ್‌ಎಜೆ ಅಧಿಕಾರಿಗಳನ್ನು ಒತ್ತಾಯಿಸಿದೆ.
ಇದನ್ನೂ ಓದಿ : ಲೈಂಗಿಕ ದೌರ್ಜನ್ಯ ಪ್ರಕರಣ| ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ನಿಗದಿಗೆ ಹೈಕೋರ್ಟ್ ತಡೆ


