ಹೊಸದಿಲ್ಲಿ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಕ್ಕಾಗಿ ದೆಹಲಿ ಪೊಲೀಸರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಕಾಂಗ್ರೆಸ್ ಮತ್ತು ಎಐಎಂಐಎಂ ಸೇರಿದಂತೆ ರಾಜಕೀಯ ಪಕ್ಷಗಳು ಗುರುವಾರ ಪೊಲೀಸರು ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದ ನೀತಿಗಳೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ಕಾಂಗ್ರೆಸ್ ಹೇಳಿದರೆ, ಎಐಎಂಐಎಂ ಅವರ ಬಂಧನದ ಹಿಂದಿನ ಉದ್ದೇಶವನ್ನು ಪ್ರಶ್ನಿಸಿ ಅದನ್ನು ‘ಕ್ರೂರ ಮತ್ತು ರಾಜಕೀಯ ಪ್ರೇರಿತ’ ಎಂದು ಕರೆದಿದೆ.
2020ರ ಈಶಾನ್ಯ ದೆಹಲಿ ಗಲಭೆಯಲ್ಲಿ ಪರಿಣಾಮವಾಗಿ 53ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದವು. ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರ ಕಾರ್ಯಕರ್ತರು ಈ ಸಂಬಂದ ಪ್ರತಿಭಟಿಸಿದ್ದಕ್ಕಾಗಿ ಹಲವಾರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ವಿಚಾರಣೆಯಲ್ಲಿ ವಿಳಂಬದ ಆಧಾರದ ಮೇಲೆ ಅವರು ಜಾಮೀನು ಕೋರಿದರೂ, ದೆಹಲಿ ಪೊಲೀಸರು ಇದನ್ನು ಪ್ರಶ್ನಿಸುತ್ತಿದ್ದಾರೆ.
ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇವರ ವಿರುದ್ಧ ಯುಎಪಿಎ ಹೇರುವ ಸಿಂಧುತ್ವವನ್ನು ಪ್ರಶ್ನಿಸಿತು. ಇವರುಗಳು ಪ್ರತಿಭಟನೆ ಆಯೋಜಿಸುವುದಕ್ಕಾಗಿ ಇವರುಗಳ ಮೇಲೆ ಯುಎಪಿಎ ಹೇರುವುದು ಸಮರ್ಥಿಸುತ್ತದೆಯೇ ಎಂದು ಕೇಳಿತು.
ಅಧಿಕಾರದಲ್ಲಿರುವವರ ವಿರುದ್ಧದ ಭಿನ್ನಾಭಿಪ್ರಾಯವನ್ನು ದೇಶದ್ರೋಹವೆಂದು ನೋಡಲಾಗುವುದಿಲ್ಲ ಮತ್ತು ಪ್ರತಿಭಟನಾಕಾರರನ್ನು ‘ಭಯೋತ್ಪಾದಕರು’ ಎಂದು ಕರೆಯಲಾಗುವುದಿಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಹೇಳಿದ್ದಾರೆ.
ಭಿನ್ನಾಭಿಪ್ರಾಯ ಮತ್ತು ದಂಗೆಯ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಗುರುತಿಸುವ ಅಗತ್ಯವನ್ನು ಮಾತನಾಡಿದ ಖೇರಾ ಅವರು, ಯಾರಾದರೂ ಸರ್ಕಾರಿ ನೀತಿಯ ವಿರುದ್ಧ ಪ್ರತಿಭಟಿಸುತ್ತಿದ್ದರೆ, ಅವರ ಜಾತಿ ಮತ್ತು ಧರ್ಮವನ್ನು ಅವಲಂಬಿಸಿ ನೀವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ. ದೇಶದ ಸಂವಿಧಾನವು ನಮಗೆ ಈ ಸ್ವಾತಂತ್ರ್ಯವನ್ನು ನೀಡಿದೆ ಎಂದಿದ್ದಾರೆ.
ಎಐಎಂಐಎಂ ನಾಯಕ ವಾರಿಸ್ ಪಠಾಣ್ ದೆಹಲಿ ಪೊಲೀಸರು ಮತ್ತು ಬಿಜೆಪಿ ನೇತೃತ್ವದ ಕೇಂದ್ರವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಕಾನೂನು ಪ್ರಕ್ರಿಯೆಯನ್ನು ‘ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ’ ತರಾಟೆಗೆ ತೆಗೆದುಕೊಂಡರು. “ಉಮರ್ ಖಾಲಿದ್ ಮತ್ತು ಇತರ ಅನೇಕರು ಇಂದು ಜೈಲಿನಲ್ಲಿದ್ದಾರೆ. ಯುಎಪಿಎ ಕಾನೂನನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಅವರ ಜಾಮೀನು ಅರ್ಜಿಯನ್ನು ವಿಚಾರಣೆಗೆ ಒಳಪಡಿಸುತ್ತಿಲ್ಲ. ಯಾವುದೋ ಒಬ್ಬ ದೊಡ್ಡ ಭಯೋತ್ಪಾದಕನ ಮೇಲೆ ಯುಎಪಿಎ ವಿಧಿಸಬೇಕು. ಸರ್ಜೀಲ್ ಇಮಾಮ್ ಮತ್ತು ಉಮರ್ ಖಾಲಿದ್ ಅವರಂತಹ ವಿದ್ಯಾರ್ಥಿಗಳ ವಿರುದ್ಧ ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯವನ್ನು ಬಳಸಿದ್ದಕ್ಕಾಗಿ ಇವರ ಮೇಲೆ ಯುಎಪಿಎ ಹೇರಿದರೆ ಅದರ ಅರ್ಥವೇನು? ಅವರು ಸರ್ಕಾರದ ತಪ್ಪು ನೀತಿಗಳ ವಿರುದ್ಧ ಪ್ರತಿಭಟಿಸಿದರು. ಸರ್ಕಾರಿ ನೀತಿಗಳ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ನೀವು ಯಾರ ಮೇಲಾದರೂ ಯುಎಪಿಎ ವಿಧಿಸುತ್ತೀರಾ” ಎಂದು ಅವರು ಕೇಳಿದರು.
ಇನ್ನೋರ್ವ ಕಾಂಗ್ರೆಸ್ ನಾಯಕ ಶಕ್ತಿಸಿನ್ಹ್ ಗೋಹಿಲ್ ಮಾತನಾಡಿ, ದೆಹಲಿ ಪೊಲೀಸರು ಮತ್ತು ಬಿಜೆಪಿ ಸರ್ಕಾರವನ್ನು ಟೀಕಿಸಲು ಉಮರ್ ಅವರು ಈ ಅವಕಾಶವನ್ನು ಬಳಸಿಕೊಂಡರು. ಬಿಜೆಪಿ ತನ್ನ ರಾಜಕೀಯವನ್ನು ಮುಂದುವರಿಸುವುದಕ್ಕಾಗಿ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡ ಇತಿಹಾಸವನ್ನು ಹೊಂದಿದೆ. ಸಮುದಾಯಗಳ ನಡುವೆ ಒಡಕು ಮೂಡಿಸಲು ಆಡಳಿತವನ್ನು ಬಳಸಿಕೊಳ್ಳುವಲ್ಲಿ ಅದು ಹಿಂಜರಿಯುವುದಿಲ್ಲ. ವಾತಾವರಣವನ್ನು ಹಾಳು ಮಾಡಿದ್ದಕ್ಕಾಗಿ ನ್ಯಾಯಾಲಯವು ದೆಹಲಿ ಪೊಲೀಸರು ಮತ್ತು ಅದರ ರಾಜಕೀಯ ನೇತಾರರನ್ನು ತರಾಟೆಗೆ ತೆಗೆದುಕೊಂಡಿರುವುದು ಒಳ್ಳೆಯದು ಎಂದು ಅವರು ಹೇಳಿದರು.
ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಮತ್ತು ಇತರರ ಮೇಲೆ 2020ರ ಫೆಬ್ರವರಿ 23 ಮತ್ತು 25ರ ನಡುವೆ ಈಶಾನ್ಯ ದೆಹಲಿಯಲ್ಲಿ ಗಲಭೆ ಉಂಟುಮಾಡಲು ಪೂರ್ವ ಯೋಜಿತ ಪಿತೂರಿ ನಡೆಸಿದ ಆರೋಪವಿದೆ. ಅವರ ಮೇಲೆ ಯುಎಪಿಎ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಲಾಗಿದ್ದು, ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ.


