ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಗೆ ಬುಧವಾರ (ಜ.8) ಬೆಂಗಳೂರಿನ ನ್ಯಾಯಾಲಯ ಜಾಮೀನು ನೀಡಿದೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲಾ ಆರೋಪಿಗಳಿಗೆ ಜಾಮೀನು ದೊರೆತಂತಾಗಿದೆ.
ಬೆಂಗಳೂರಿನ ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಮುರಳೀಧರ ಪೈ ಬಿ ಅವರು ಆರೋಪಿ ಶರದ್ ಬಾಹು ಸಾಹೇಬ್ ಕಲಾಸ್ಕರ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಸೆಪ್ಟೆಂಬರ್ 2018ರಿಂದ ಈತ ಬಂಧನದಲ್ಲಿದ್ದು, ವಿಚಾರಣೆ ಶೀಘ್ರದಲ್ಲೇ ಮುಕ್ತಾಯಗೊಳ್ಳುವ ಸಾಧ್ಯತೆಯಿಲ್ಲ ಎಂಬುವುದನ್ನು ಗಮನಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.
ಕಲಾಸ್ಕರ್‌ಗೆ ನ್ಯಾಯಾಲಯ ಜಾಮೀನು ನೀಡಿದ ಹಿನ್ನೆಲೆ, ಪ್ರಕರಣದಲ್ಲಿ ಬಂಧಿತರಾಗಿದ್ದ ಎಲ್ಲಾ 17 ಆರೋಪಿಗಳು ಜಾಮೀನು ಪಡೆದಂತಾಗಿದೆ. ಈ ಪ್ರಕರಣದಲ್ಲಿ ಒಟ್ಟು 18 ಆರೋಪಿಗಳನ್ನು ಗುರುತಿಸಲಾಗಿದ್ದು, 17 ಮಂದಿಯನ್ನು ಬಂಧಿಸಲಾಗಿತ್ತು. ಇನ್ನೋರ್ವ ಆರೋಪಿ ವಿಕಾಸ್ ಪಾಟೀಲ್ ಎಂಬಾತ ತಲೆಮರೆಸಿಕೊಂಡಿದ್ದು, ಇನ್ನೂ ಬಂಧನವಾಗಿಲ್ಲ.
ಆರೋಪಿ ಕಲಾಸ್ಕರ್ ತಾನು ನಿರಪರಾಧಿ, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡು ಜಾಮೀನು ಕೋರಿದ್ದರು. ಪ್ರಕರಣದಲ್ಲಿ ತನ್ನ ಸಹ ಆರೋಪಿಗಳಲ್ಲಿ ಹೆಚ್ಚಿನವರಿಗೆ ಈಗಾಗಲೇ ಜಾಮೀನು ನೀಡಲಾಗಿದೆ ಎಂದು ಹೇಳಿದ್ದರು. ಸಮಾನತೆಯ ಆಧಾರದ ಮೇಲೆ ಜಾಮೀನು ನೀಡುವಂತೆ ಮನವಿ ಮಾಡಿದ್ದರು.
ಕಲಾಸ್ಕರ್ ಜಾಮೀನು ಅರ್ಜಿಗೆ ಪ್ರಾಸಿಕ್ಯೂಷನ್ ವಿರೋಧ ವ್ಯಕ್ತಪಡಿಸಿತ್ತು. ಈತ ಪುನರಾವರ್ತಿತ ಅಪರಾಧಿಯಾಗಿದ್ದು, ಮತ್ತೊಂದು ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಯನ್ನು ಎದುರಿಸಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆಯಾದರೆ, ಇನ್ನೊಂದು ಅಪರಾಧ ಮಾಡುವ ಸಾಧ್ಯತೆಯಿದೆ ಎಂದು ವಾದಿಸಿತ್ತು.
ಆದಾಗ್ಯೂ, ನ್ಯಾಯಾಲಯವು ಕಲಾಸ್ಕರ್ ಅವರಿಗೆ ಸಮಾನತೆಯ ಆಧಾರದ ಮೇಲೆ ಜಾಮೀನು ಪಡೆಯಲು ಅರ್ಹತೆ ಇದೆ ಎಂದು ತೀರ್ಪು ನೀಡಿದೆ.
ಸಂವಿಧಾನದ ವಿಧಿ 21ರ ಅಡಿ ಸ್ವತಂತ್ರ ಬದುಕು ಮೂಲಭೂತ ಹಕ್ಕು. ಪ್ರಕರಣದ ವಿಚಾರಣೆ ಬಾಕಿ ಇರುವಾಗ ಮತ್ತು ಅದು ಶೀಘ್ರ ಮುಕ್ತಾಯಗೊಳ್ಳುವ ಸಾಧ್ಯತೆ ಇಲ್ಲದಿರುವಾಗ ಆರೋಪಿಯನ್ನು ಬಂಧನದಲ್ಲಿಟ್ಟು ಅವರ ವೈಯಕ್ತಿಕ ಬದುಕಿನ ಹಕ್ಕು ಕಸಿದುಕೊಳ್ಳಲು ಸಾಧ್ಯವಿಲ್ಲ. ಜಾಮೀನಿನ ಅನಗತ್ಯ ವಿಳಂಬವು ಆರೋಪಿಯ ಬದುಕುವ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.
ಕಳೆದ ವರ್ಷ ಜುಲೈನಲ್ಲಿ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠ ಗೌರಿ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ನೀಡಿತ್ತು. ಇದಾಗಿ, ಒಂದು ತಿಂಗಳ ನಂತರ, ಪ್ರಕರಣದ ಇನ್ನೂ ನಾಲ್ವರು ಆರೋಪಿಗಳಿಗೆ ಮಂಜೂರು ಮಾಡಿತ್ತು. ಈ ಎಲ್ಲಾ ಆರೋಪಿಗಳು ಸಮಾನತೆಯ ಆಧಾರದ ಮೇಲೆ ಜಾಮೀನು ಕೋರಿದ್ದರು. ವಿಚಾರಣೆಯಲ್ಲಿ ವಿಳಂಬದ ಕಾರಣ ನೀಡಿ ಡಿಸೆಂಬರ್ 2023ರಲ್ಲಿ ಹೈಕೋರ್ಟ್ ಪ್ರಮುಖ ಆರೋಪಿ ಮೋಹನ್ ನಾಯಕ್‌ಗೆ ಜಾಮೀನು ನೀಡಿತ್ತು.
ಮಾಸಿಕ ₹10 ಸಾವಿರ ಗೌರವಧನ ನೀಡುವುದಾಗಿ ಸಿಎಂ ಭರವಸೆ : ಮುಷ್ಕರ ಹಿಂಪಡೆದ ಆಶಾ ಕಾರ್ಯಕರ್ತೆಯರು


