ಪಂಜಾಬ್‌ನ ಲುಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಗುರುಪ್ರೀತ್ ಗೋಗಿ ಅವರು ‘ಗುಂಡು ತಗುಲಿ’ ಇಂದು (ಜ.11) ಸಾವನ್ನಪ್ಪಿದ್ದಾರೆ.
ಕೆಲ ವರದಿಗಳು, ಆಕಸ್ಮಿಕವಾಗಿ ಗುಂಡು ತಗುಲಿ ದುರಂತ ಸಂಭವಿಸಿದೆ ಎಂದಿವೆ. ಆದರೂ, ಇದು ಆಕಸ್ಮಿಕ ಘಟನೆಯೋ, ಕೊಲೆಯೋ ಎಂಬುವುದು ಖಚಿತವಾಗಿಲ್ಲ.
ಕುಟುಂಬ ಸದಸ್ಯರ ಪ್ರಕಾರ, ತಲೆಗೆ ಗುಂಡೇಟಿನಿಂದಾಗಿ 58 ವರ್ಷದ ಗುರುಪ್ರೀತ್ ಗೋಗಿ ಅವರು ತಡರಾತ್ರಿ 12 ಗಂಟೆಯ ಸುಮಾರಿಗೆ ಸಾವನ್ನಪ್ಪಿದ್ದಾರೆ. ಗುಂಡೇಟು ಬಿದ್ದಾಗ ಶಾಸಕರನ್ನು ದಯಾನಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು, ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾಗಿ ವೈದ್ಯರು ಘೋಷಿಸಿದ್ದಾರೆ.
“ಮಧ್ಯರಾತ್ರಿ ಘಟನೆ ನಡೆದಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಲುಧಿಯಾನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಸ್ಕರನ್ ಸಿಂಗ್ ತೇಜ ಮಾಧ್ಯಮಗಳಿಗೆ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೆ ಸಾವಿನ ಹಿಂದಿನ ಅಸಲಿ ಕಾರಣ ತಿಳಿದು ಬರಬೇಕಿದೆ ಎಂದು ವರದಿಗಳು ಹೇಳಿವೆ.
‘ಬುದ್ಧ ನುಲ್ಲಾ ಅಥವಾ ಬುದ್ದ ನಾಲಾ’ ಎನ್ನುವ ಕಾಲುವೆಯ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ, ಶಾಸಕ ಗೋಗಿ ಅವರು ಪಂಜಾಬ್ ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಮತ್ತು ಸಂಸದ ಸಂತ ಬಾಬಾ ಬಲ್ಬೀರ್ ಸಿಂಗ್ ಸೀಚೆವಾಲ್ ಅವರನ್ನು ಶುಕ್ರವಾರ ಲುಧಿಯಾನದಲ್ಲಿ ಭೇಟಿಯಾಗಿದ್ದರು.
ಪ್ರಾಚಿನ್ ಶೀತ್ಲಾ ಮಾತಾ ಮಂದಿರಕ್ಕೂ ಭೇಟಿ ನೀಡಿ, ಎರಡು ದಿನಗಳ ಹಿಂದೆ ದೇವಸ್ಥಾನದಿಂದ ಬೆಳ್ಳಿಯನ್ನು ಕದ್ದ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭಕ್ತರಿಗೆ ಭರವಸೆ ನೀಡಿದ್ದರು. ಆದರೆ, ರಾತ್ರಿ ದುರಂತ ಸಂಭವಿಸಿದೆ.
2022ರಲ್ಲಿ ಎಎಪಿ ಸೇರಿದ್ದ ಗೋಗಿ ಅವರು, ಆಗಿನ ಪಂಜಾಬ್ ಕ್ಯಾಬಿನೆಟ್ ಸಚಿವ ಹಾಗೂ ಎರಡು ಬಾರಿಯ ಶಾಸಕ ಭರತ್ ಭೂಷಣ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದರು. ಶಾಸಕರಾಗುವ ಮೊದಲು ಗೋಗಿ ಅವರು ಎರಡು ಬಾರಿ ಮುನ್ಸಿಪಲ್ ಕಾರ್ಪೋರೇಷನ್ ಕೌನ್ಸಿಲರ್ ಆಗಿದ್ದರು. ಅದಕ್ಕೂ ಮುನ್ನ ಕಾಂಗ್ರೆಸ್ ಜಿಲ್ಲಾ (ನಗರ) ಅಧ್ಯಕ್ಷರೂ ಆಗಿದ್ದರು.
ಗೋಗಿ ಅವರ ಪತ್ನಿ ಸುಖಚೈನ್ ಕೌರ್ ಗೋಗಿ ಇತ್ತೀಚೆಗೆ ಲುಧಿಯಾನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಇಂದರ್ಜಿತ್ ಸಿಂಗ್ ಇಂಡಿ ವಿರುದ್ಧ ಸೋಲನುಭವಿಸಿದ್ದರು.
ಮಹಿಳೆಯರ ಮೇಲಿನ ಅಪರಾಧಗಳಿಗೆ ಕಠಿಣ ಶಿಕ್ಷೆ: ಎರಡು ಮಸೂದೆಗಳನ್ನು ಮಂಡಿಸಿದ ಸಿಎಂ ಸ್ಟಾಲಿನ್


