ಕೇರಳದ ನಿಲಂಬೂರಿನ ಸ್ವತಂತ್ರ ಶಾಸಕ ಪಿ.ವಿ. ಅನ್ವರ್ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್ ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ತೊರೆದು ಜನವರಿ 10 ರಂದು ಶುಕ್ರವಾರ ಅಧಿಕೃತವಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರ್ಪಡೆಯಾಗಿದ್ದಾರೆ.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಸದಸ್ಯತ್ವ ನೀಡುವ ಮೂಲಕ ಅನ್ವರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಟಿಎಂಸಿ ಎಕ್ಸ್ ಪೋಸ್ಟ್ ಮೂಲಕ ಅನ್ವರ್ ಅವರು ಪಕ್ಷ ಸೇರ್ಪಡೆಯಾಗಿರುವುದನ್ನು ದೃಢಪಡಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೂಡ ಅನ್ವರ್ ಅವರನ್ನು ಪಕ್ಷಕ್ಕೆ ಸ್ವಾಗತಿಸುವ ಸಂದೇಶ ಹಂಚಿಕೊಂಡಿದ್ದಾರೆ.
Extending a very warm welcome to Shri P V Anvar, MLA Nilambur, who joined the @AITCofficial family today in the presence of our Hon'ble Nat'l GS Shri @abhishekaitc.
Together, we shall work towards the welfare of the people of our nation. pic.twitter.com/6qqI9yndWl
— All India Trinamool Congress (@AITCofficial) January 10, 2025
“ಕೇರಳದ ನಿಲಂಬೂರಿನ ಗೌರವಾನ್ವಿತ ಶಾಸಕರಾದ ಶ್ರೀ ಪಿ.ವಿ. ಅನ್ವರ್ ಅವರು ಎಐಟಿಸಿ ಕುಟುಂಬಕ್ಕೆ ಸೇರ್ಪಡೆಗೊಂಡಿದ್ದು, ಅವರಿಗೆ ಆತ್ಮೀಯ ಸ್ವಾಗತ. ಸಾರ್ವಜನಿಕ ಸೇವೆಗೆ ಅವರ ಸಮರ್ಪಣೆ ಮತ್ತು ಕೇರಳದ ಜನರ ಹಕ್ಕುಗಳಿಗಾಗಿ ಅವರ ವಕಾಲತ್ತು ನಮ್ಮ ಸಮಗ್ರ ಬೆಳವಣಿಗೆಯ ಧ್ಯೇಯವನ್ನು ಶ್ರೀಮಂತಗೊಳಿಸುತ್ತದೆ. ಒಟ್ಟಾಗಿ, ಪ್ರತಿಯೊಂದು ಧ್ವನಿಯೂ ಮುಖ್ಯವಾಗುವ ಮತ್ತು ಪ್ರತಿಯೊಂದು ಕನಸು ನನಸಾಗುವ ಪ್ರಗತಿಪರ ಭಾರತಕ್ಕಾಗಿ ನಾವು ಶ್ರಮಿಸುತ್ತೇವೆ!” ಎಂದು ಮಮತಾ ಬ್ಯಾನರ್ಜಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ಎಲ್‌ಡಿಎಫ್ ಜೊತೆಗಿನ ಭಿನ್ನಾಭಿಪ್ರಾಯದ ಮೂರು ತಿಂಗಳ ನಂತರ ಅನ್ವರ್ ಅವರು ಟಿಎಂಸಿ ಸೇರ್ಪಡೆಯಾಗಿದ್ದಾರೆ.
ನಿಲಂಬೂರಿನ ವಿಭಾಗೀಯ ಅರಣ್ಯ ಕಚೇರಿ (ಉತ್ತರ) ಮೇಲೆ ದಾಳಿ ಮಾಡಿದ್ದಕ್ಕಾಗಿ ಡಿಸೆಂಬರ್ 5ರಂದು ಅನ್ವರ್ ಅವರನ್ನು ಬಂಧಿಸಲಾಗಿತ್ತು. ಡಿಸೆಂಬರ್ 6 ರಂದು ಮರುದಿನ ಜಾಮೀನಿನ ಮೇಲೆ ಬಿಡುಗಡೆಯಾದ ಅವರು, ಎಲ್‌ಡಿಎಫ್ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನೊಂದಿಗೆ ಸಹಕರಿಸಲು ಸಿದ್ಧರಿರುವುದಾಗಿ ಹೇಳಿದ್ದರು. ಅನ್ವರ್ ಅವರು ಎಂಟು ವರ್ಷಗಳಿಗೂ ಹೆಚ್ಚು ಕಾಲ ಎಲ್‌ಡಿಎಫ್ ಜೊತೆಗಿದ್ದರು.
ಅನ್ವರ್ 2016ರಲ್ಲಿ ಎಲ್‌ಡಿಎಫ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾದರು. ಭೂ ಅತಿಕ್ರಮಣ ಮತ್ತು ಅಕ್ರಮ ನಿರ್ಮಾಣಗಳಿಗೆ ಸಂಬಂಧಿಸಿದ ವಿವಾದಗಳ ಹೊರತಾಗಿಯೂ, ಸಿಪಿಐ(ಎಂ) ಅವರನ್ನು 2021ರಲ್ಲಿ ಮತ್ತೆ ಕಣಕ್ಕಿಳಿಸಿತ್ತು ಮತ್ತು ಅವರು ಮರು ಆಯ್ಕೆಯಾಗಿದ್ದರು.
ಸೆಪ್ಟೆಂಬರ್ 2024ರಲ್ಲಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜಕೀಯ ಕಾರ್ಯದರ್ಶಿ ಪಿ. ಶಶಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಅವರು ಕಳ್ಳಸಾಗಣೆ ಮಾಡಿದ ಚಿನ್ನವನ್ನು ತಡೆಹಿಡಿಯಲು ಮತ್ತು ವಶಪಡಿಸಿಕೊಂಡ ಅಕ್ರಮ ವಸ್ತುಗಳನ್ನು ದುರುಪಯೋಗಪಡಿಸಿಕೊಳ್ಳಲು ಕಾನೂನು ಜಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ ನಂತರ ಅನ್ವರ್ ಮತ್ತು ಸಿಪಿಐ(ಎಂ) ನಡುವೆ ತಿಕ್ಕಾಟ ಶುರುವಾಗಿತ್ತು. ಇದು ಅನ್ವರ್ ಅವರು ಎಡರಂಗದ ಸಖ್ಯ ತೊರೆಯಲು ಕಾರಣವಾಯಿತು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರು ಅನ್ವರ್ ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಪಕ್ಷ ಕಡಿದುಕೊಂಡಿದೆ ಎಂದು ಘೋಷಿಸಿದ್ದರು.
ಸಿಪಿಐ(ಎಂ) ತೊರೆದ ನಂತರ, ಡಿಎಂಕೆ ಮತ್ತು ಕಾಂಗ್ರೆಸ್ ಸೇರಲು ಅನ್ವರ್ ಮಾಡಿದ ಪ್ರಯತ್ನಗಳು ವಿಫಲವಾದವು, ಟಿಎಂಸಿಗೆ ಸೇರ್ಪಡೆಗೊಳ್ಳುವವರೆಗೂ ಅವರನ್ನು ರಾಜಕೀಯವಾಗಿ ಅಲೆದಾಡುವಂತೆ ಮಾಡಿತು.
ಇದನ್ನೂ ಓದಿ : ಪಂಜಾಬ್ : ಎಎಪಿ ಶಾಸಕ ಗುಂಡೇಟಿಗೆ ಬಲಿ


