ರಾಮ ಮಂದಿರ ಪ್ರತಿಷ್ಠಾಪನೆಯ ನಂತರ ಭಾರತಕ್ಕೆ ‘ನಿಜವಾದ ಸ್ವಾತಂತ್ರ್ಯ’ ಬಂತು ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ದೇಶದ್ರೋಹಕ್ಕೆ ಸಮನಾಗಿದ್ದು, ಭಾಗವತ್ ಭಾರತೀಯರನ್ನು ಅವಮಾನಿಸಿದ್ದಾರೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ (ಜ.14) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯ ಕೋಟ್ಲಾ ರಸ್ತೆಯಲ್ಲಿರುವ ನಿರ್ಮಿಸಿರುವ ಕಾಂಗ್ರೆಸ್ ಪಕ್ಷದ ಹೊಸ ಪ್ರಧಾನ ಕಚೇರಿ ‘ಇಂದಿರಾ ಗಾಂಧಿ ಭವನ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಸ್ವಾತಂತ್ರ್ಯ ಚಳವಳಿ ಮತ್ತು ಸಂವಿಧಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳುವ ದಿಟ್ಟತನವನ್ನು ಮೋಹನ್ ಭಾಗವತ್ ಪ್ರದರ್ಶಿಸಿದ್ದಾರೆ. ನಿನ್ನೆ ಅವರು ಏನು ಹೇಳಿದ್ದಾರೊ ಅದು ದೇಶದ್ರೋಹಕ್ಕೆ ಸಮವಾಗಿದೆ” ಎಂದು ಹೇಳಿದ್ದಾರೆ.
Mohan Bhagwat’s audacious comment that India didn’t gain true independence in 1947 is an insult to our freedom fighters, every single Indian citizen and an attack on our Constitution. pic.twitter.com/6sMhdxn3xA
— Rahul Gandhi (@RahulGandhi) January 15, 2025
“ಬೇರೆ ದೇಶದಲ್ಲಾಗಿದ್ದರೆ ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದರು. ಭಾಗವತ್ ಅವರು ಇಷ್ಟೊತ್ತಿಗೆ ಬಂಧನವಾಗಬೇಕಿತ್ತು” ಎಂದಿದ್ದಾರೆ.
ಹೊಸ ಪ್ರಧಾನ ಕಚೇರಿಯು ಸಂವಿಧಾನದ ಅಡಿಪಾಯದ ಸಂಕೇತವನ್ನು ಹೊಂದಿದೆ ಎಂದು ಒತ್ತಿ ಹೇಳಿದ ರಾಹುಲ್ ಗಾಂಧಿ, ಕೇಸರಿ ಪಕ್ಷ ಮತ್ತು ಕಾಂಗ್ರೆಸ್‌ನ ಸಿದ್ಧಾಂತ ನಡುವೆ ಸಂಘರ್ಷ ಇರುವುದರಿಂದ ಆರ್‌ಎಸ್‌ಎಸ್‌ನೊಂದಿಗೆ ನಮ್ಮ ಕಾರ್ಯಕರ್ತರು ನಾಗರಿಕ ಯುದ್ಧ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
“ಬಿಜೆಪಿ ಮತ್ತು ಆರ್‌ಎಸ್‌ಎಸ್ ನಮ್ಮ ದೇಶದ ಪ್ರತಿಯೊಂದು ಸಂಸ್ಥೆಯನ್ನೂ ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿದೆ. ನಾವು ಈಗ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಾರತೀಯ ರಾಜ್ಯಗಳ ವಿರುದ್ಧವೇ ಹೋರಾಡುವಂತಾಗಿದೆ” ಎಂದಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರವು ಭಾರತದ ಬಗ್ಗೆ ಕಾಂಗ್ರೆಸ್‌ಗಿಂತ ಸಂಪೂರ್ಣವಾಗಿ ಭಿನ್ನವಾದ ದೃಷ್ಟಿಕೋನವನ್ನು ಹೊಂದಿದೆ. “ಅವರು ಭಾರತವನ್ನು ನೆರಳಿನ, ಗುಪ್ತ, ರಹಸ್ಯ ಸಮಾಜದಿಂದ ಹಾಗೂ ಒಬ್ಬ ವ್ಯಕ್ತಿ ನಡೆಸಬೇಕೆಂದು ಬಯಸುತ್ತಾರೆ. ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ಜಾತಿಗಳ ಮತ್ತು ಬುಡಕಟ್ಟು ಜನಾಂಗದವರ ಧ್ವನಿಯನ್ನು ಹತ್ತಿಕ್ಕಲು ಬಯಸುತ್ತಾರೆ. ಇದು ಅವರ ಕಾರ್ಯಸೂಚಿ” ಎಂದು ಹೇಳಿದ್ದಾರೆ.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ಮಾತು ಪ್ರತಿ ಭಾರತೀಯರಿಗೆ ಮಾಡಿದ ಅವಮಾನವಾಗಿದೆ. ಅಜ್ಞಾನದಿಂದ ಕೂಡಿದ ಇಂತಹ ಹೇಳಿಕೆಗಳನ್ನು ಆಲಿಸದೇ ಇರುವುದು ಸೂಕ್ತ ಎಂದು ತಿಳಿಸಿದ್ದಾರೆ.


