ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ದಯೆಯಿಂದ ಕಿಯೋನಿಕ್ಸ್ ಸರಬರಾಜುದಾರರು ದಯಾಮರಣ ಕೋರುವಂತಾಗಿದೆಯೇ ಹೊರತು ನಮ್ಮಿಂದಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕಿಯೋನಿಕ್ಸ್ ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ ಅವರೊಂದಿಗೆ ಪ್ರಿಯಾಂಕ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದೆಡೆಗಿನ ನಮ್ಮ ಸರ್ಕಾರದ ಕಠಿಣ ನಿಲುವಿಗೆ ಹಾಗೂ ಜನರ ತೆರೆಗೆ ಹಣದ ದುರ್ಬಳಕೆಯನ್ನು ತಡೆಯುವ ನಮ್ಮ ಪ್ರಯತ್ನಕ್ಕೆ ಬಿಜೆಪಿಯವರು ‘ಕಿರುಕುಳ’ ಎಂದು ಹೆಸರು ಕೊಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಪಾರದರ್ಶಕತೆಯು ಭ್ರಷ್ಟರಿಗೆ ಕಿರುಕುಳದಂತೆ ಭಾಸವಾಗುವುದು ಸಹಜವೇ ಆಗಿದೆ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಇಂದು ಕಿಯೋನಿಕ್ಸ್ ಸರಬರಾಜುದಾರರ ಬಿಲ್ ಬಾಕಿ ಉಳಿದಿದೆ ಎಂದರೆ ಅದಕ್ಕೆ ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು, ಬೊಮ್ಮಯಿಯವರು ಹಾಗೂ ಮಾಜಿ ಸಚಿವ ಅಶ್ವಥ್ ನಾರಾಯಣ್ ಅವರೇ ನೇರ ಕಾರಣ. ಜನಸಾಮಾನ್ಯರ ಬೆವರಿನ ನೂರಾರು ಕೋಟಿ ತೆರಿಗೆ ಹಣದ ಪ್ರತಿ ರೂಪಾಯಿಗೂ ಸಮರ್ಪಕ ಲೆಕ್ಕ ಇಡುವುದು ನಮ್ಮ ಹೊಣೆ ಮತ್ತು ಅತ್ಯಗತ್ಯದ ಕರ್ತವ್ಯ, ಆ ಕರ್ತವ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
2018-2023ರ ನಡುವೆ ನಡೆದ ವಹಿವಾಟುಗಳು ಮತ್ತು ಸಂಗ್ರಹಣೆಗಳಿಗೆ ಸಂಬಂಧಿಸಿದಂತೆ ಅಕೌಂಟೆಂಟ್ ಜನರಲ್ ಕಚೇರಿಯು ನಡೆಸಿದ ಟೆಸ್ಟ್ ಆಡಿಟ್ ತಪಾಸಣೆ ವರದಿಯಲ್ಲೆ ಭಾರಿ ಮೌಲ್ಯದ ಉಲ್ಲಂಘನೆಗಳು ಬೆಳಕಿಗೆ ಬಂದಿವೆ ಎಂದು ಅವರು ಆರೋಪಿಸಿದ್ದಾರೆ.
ಕಿಯೊನಿಕ್ಸ್ ಸಂಸ್ಥೆಯಲ್ಲಿ 2018-2023ರ ನಡುವೆ ನಡೆದ ವಹಿವಾಟುಗಳು ಮತ್ತು ಸಂಗ್ರಹಣೆಗಳಿಗೆ ಸಂಬಂಧಿಸಿದಂತೆ ಅಕೌಂಟೆಂಟ್ ಜನರಲ್ ಕಚೇರಿಯು ನಡೆಸಿದ ವಿವರವಾದ ಆಡಿಟ್ ತಪಾಸಣೆ ವರದಿಯಂತೆ ಭಾರಿ ಮೌಲ್ಯದ ಉಲ್ಲಂಘನೆಗಳು ಬೆಳಕಿಗೆ ಬಂದಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಿಯೊನಿಕ್ಸ್ ಸಂಸ್ಥೆಯ ಅಧ್ಯಕ್ಷ ಶರತ್ ಬಚ್ಚೇಗೌಡ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಿಯೊನಿಕ್ಸ್ ಸಂಸ್ಥೆ ಆದೇಶ ನೀಡಿದ್ದ 1544 ಕೋಟಿ ರೂ. ಗಳಿಗೆ ಸಂಬಂಧಿಸಿದಂತೆ ಸುಮಾರು 1200 ಸಂಗ್ರಹಣೆಗಳಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯು 45 ಸಂಗ್ರಹಣೆಗಳನ್ನು ಪ್ರಾಯೋಗಿಕವಾಗಿ ಆಡಿಟ್ ತಪಾಸಣೆಗೆ ಒಳಪಡಿಸಿದ್ದು, 455 ಕೋಟಿ ರೂ. ಮೌಲ್ಯದ ಉಲ್ಲಂಘನೆಗಳು ಕಂಡು ಬಂದಿವೆ ಎಂದು ಅವರು ಹೇಳಿದ್ದಾರೆ.
2018-2023ರ ನಡುವೆ ನಡೆದ ವಹಿವಾಟುಗಳನ್ನು ಸಮಗ್ರ ತನಿಖೆಗೆ ಒಳಪಡಿಸುವ ಸಲುವಾಗಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರರಾವ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರತಿ ರೂಪಾಯಿಯನ್ನೂ ಪ್ರಾಮಾಣಿಕವಾಗಿ ವಿನಿಯೋಗಿಸುತ್ತೇವೆ ಎಂಬ ಭರವಸೆಯಿಂದ ನಾಡಿನ ಜನತೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆಯೇ ಹೊರತು ಬಿಜೆಪಿಯವರ ತಾಳಕ್ಕೆ ತಕ್ಕಂತೆ ಕುಣಿಯುವುದಕ್ಕಲ್ಲ,
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಆಡಿಟ್ ಪರಿಶೀಲನೆಯಲ್ಲಿ ಆಕ್ಷೇಪಣೆ ಕಂಡುಬಂದಿರುವುದರಿಂದ ಸಮಗ್ರ ತನಿಖೆಯಾಗಬೇಕಿದೆ. ಕಿಯೋನಿಕ್ಸ್ ವೆಂಡರ್ ಗಳಿಗೆ ಏನಾದರೂ ತೊಂದರೆ ಆಗಿದ್ದರೆ ಅದಕ್ಕೆ ಬಿಜೆಪಿಯ ಭ್ರಷ್ಟಾಚಾರ ಕಾರಣವೇ ಹೊರತು ನಾವಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದನ್ನೂಓದಿ: ಲೈಂಗಿಕ ದೌರ್ಜನ್ಯ ಪ್ರಕರಣ | ಆಸಾರಾಮ್ ಬಾಪುಗೆ ಮಾರ್ಚ್ 31 ರವರೆಗೆ ಮಧ್ಯಂತರ ಜಾಮೀನು
ಲೈಂಗಿಕ ದೌರ್ಜನ್ಯ ಪ್ರಕರಣ | ಆಸಾರಾಮ್ ಬಾಪುಗೆ ಮಾರ್ಚ್ 31 ರವರೆಗೆ ಮಧ್ಯಂತರ ಜಾಮೀನು


