ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಕಾಡ್ಗಿಚ್ಚಿಗೆ ಸುಮಾರು 35,000 ಎಕರೆಗಿಂತಲೂ ಅಧಿಕ ಪ್ರದೇಶ ಸುಟ್ಟು ಭಸ್ಮವಾಗಿದೆ. ವಿಶೇಷವಾಗಿ ಹಾಲಿವುಡ್ ಸಿನಿಮಾ ತಾರೆಯರ ಮನೆಗಳಿರುವ ಪೆಸಿಫಿಕ್ ಪ್ಯಾಲಿಸೈಡ್ಸ್ ಪ್ರದೇಶದ ಹಾಲಿವುಡ್ ಹಿಲ್ಸ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಸುಮಾರು 16,000ಕ್ಕೂ ಎಕರೆ ಪ್ರದೇಶ ಸುಟ್ಟು ಹೋಗಿದೆ. ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿರುವ ಅಗ್ನಿ ದುರಂತದ ನಡುವೆ ವಿವಿಧ ಪ್ರತಿಪಾದನೆಗಳೊಂದಿಗೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪರ್ವತಗಳು ಬೆಂಕಿಯಿಂದ ಉರಿಯುತ್ತಿರುವ ಮತ್ತು ಅಗ್ನಿ ಜ್ವಾಲೆಯಿಂದ ನಗರಗಳು ಮುಳುಗಿರುವ ವಿಡಿಯೋಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಸಂಭವಿಸಿರುವ ಕಾಡ್ಗಿಚ್ಚಿನ ನೈಜ ತುಣುಕುಗಳು ಎನ್ನಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರು ವಿಡಿಯೋವೊಂದನ್ನು ಹಂಚಿಕೊಂಡು, ‘‘ಇದು ಹಾಲಿವುಡ್ ಗ್ರಾಫಿಕ್ಸ್ ಅಲ್ಲ, ಬೆಂಕಿಗೆ ಆಹುತಿ ಆಗುತ್ತಿರುವ ಲಾಸ್ ಏಂಜಲೀಸ್’’ ಎಂದು ಬರೆದುಕೊಂಡಿದ್ದರು.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಬಹುತೇಕ ವಿಡಿಯೋಗಳು ಎಐ- ರಚಿತವಾಗಿದೆ ಮತ್ತು ಅದರಲ್ಲಿರುವ ಕಾಡ್ಗಿಚ್ಚಿನ ದೃಶ್ಯಗಳು ನಿಜವಾದದು ಅಲ್ಲ ಎಂದು ಗೊತ್ತಾಗಿದೆ.
ವಿಡಿಯೋಗಳ ನಿಜಾಂಶವನ್ನು ತಿಳಿಯಲು ನಾವು ಅವುಗಳಿಗೆ ಸಂಬಂಧಪಟ್ಟ ವಿಶ್ವಾಸಾರ್ಹ ವರದಿಗಳನ್ನು ಹುಡುಕಿದ್ದೇವೆ. ಆದರೆ, ಈ ವಿಡಿಯೋಗೆ ಹೋಲುವ ಯಾವುದೇ ವರದಿಯೂ ನಮಗೆ ಕಂಡುಬಂದಿಲ್ಲ. ಎಐ ಬಳಸಿಕೊಂಡು ವಿಡಿಯೋಗಳನ್ನು ರಚಿಸಲಾಗಿದೆ ಎಂದು ವೈರಲ್ ಪೋಸ್ಟ್‌ಗೆ ಅನೇಕ ಬಳಕೆದಾರರು ಕಾಮೆಂಟ್‌ಗಳನ್ನು ಮಾಡಿರುವುದನ್ನು ನಾವು ನೋಡಿದ್ದೇವೆ.
ವಿವಿಧ ಸ್ಥಳಗಳಲ್ಲಿ ಬೆಂಕಿ ಆವರಿಸುತ್ತಿರುವುದನ್ನು ತೋರಿಸುವ ಆರು ಕ್ಲಿಪ್‌ಗಳನ್ನು ವಿಲೀನಗೊಳಿಸಿ ವಿಡಿಯೋವನ್ನು ರಚಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ನಾವು ಕೀ ಫ್ರೇಮ್‌ಗಳನ್ನು ಹೊರತೆಗೆಯುವ ಮೂಲಕ ವಿಡಿಯೋವನ್ನು ವಿಶ್ಲೇಷಿಸಿದ್ದೇವೆ ಮತ್ತು ಎಐ ಡಿಟೆಕ್ಟರ್ ಮೂಲಕ ಅದನ್ನು ಪರಿಶೀಲಿಸಿದ್ದೇವೆ.
ಮೊದಲ ಕೀಫ್ರೇಮ್ ಸುಡುವ ಪರ್ವತದ ಕಡೆಗೆ ಹೋಗುವ ತಾಳೆ ಮರಗಳಿಂದ ಕೂಡಿದ ರಸ್ತೆಯನ್ನು ತೋರಿಸುತ್ತದೆ, ಎರಡನೆಯದು ಉರಿಯುತ್ತಿರುವ ಬೆಂಕಿಯ ಮಧ್ಯೆ ಟ್ರಾಫಿಕ್ ಲೈಟ್‌ನಲ್ಲಿ ಕಾರುಗಳನ್ನು ನಿಲ್ಲಿಸಿರುವುದನ್ನು ಕಾಣಬಹುದು. ಮೂರನೆಯದು ರಾತ್ರಿಯಲ್ಲಿ ಜ್ವಾಲೆ ಮತ್ತು ಹೊಗೆಯಲ್ಲಿ ಮುಳುಗಿರುವ ನಗರದ ವೈಮಾನಿಕ ನೋಟವನ್ನು ನೋಡಬಹುದು, ನಾಲ್ಕನೆಯದು ಕಟ್ಟಡಗಳು ಮತ್ತು ರಸ್ತೆಗಳಲ್ಲಿ ವ್ಯಾಪಕ ಬೆಂಕಿ ಹರಡಿದಿರುವುದು ತೋರಿಸುತ್ತದೆ. ಐದನೇಯದರಲ್ಲಿ ಜ್ವಾಲೆಯು ಬೆಟ್ಟದ ತುದಿಯನ್ನು ಆವರಿಸಿದೆ. ಅಂತಿಮ ಕೀಫ್ರೇಮ್ನಲ್ಲಿ ಕಿತ್ತಳೆ ಬಣ್ಣದ ಆಕಾಶದಲ್ಲಿ ಜ್ವಾಲೆಗಳಿಂದ ಮುಳುಗಿರುವ ನಗರವನ್ನು ಕಾಣಬಹುದು. ಈ ಎಲ್ಲಾ ದೃಶ್ಯಗಳು ಎಐ- ರಚಿತವಾದವು ಎಂದು ಪತ್ತೆಹಚ್ಚಲಾಗಿದೆ. (ಇದನ್ನು ಇಲ್ಲಿ , ಇಲ್ಲಿ , ಇಲ್ಲಿ , ಇಲ್ಲಿ , ಇಲ್ಲಿ ಮತ್ತು ಇಲ್ಲಿ ಪರಿಶೀಲಿಸಿ)
ಮತ್ತೊಂದು ಡಿಟೆಕ್ಟರ್, “ವಾಸಿತ್ ಎಐ”, ಕೊನೆಯ ಕೀಫ್ರೇಮ್ ಹೊರತುಪಡಿಸಿ, ಇತರ ಐದು ಎಐ- ರಚಿತವಾಗಿದೆ ಎಂದು ಕಂಡುಹಿಡಿದಿದೆ.



