ಅಮೆರಿಕದ ಕಾನ್ಸುಲೇಟ್ ಕಚೇರಿಯ ಶಾಖೆಯು ಇಂದಿನಿಂದ (ಜನವರಿ 17, 2025 ಶುಕ್ರವಾರ) ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಲಿದೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗ್ಯಾರ್‌ಸೆಟ್ ಅವರು ನೂತನ ಕಚೇರಿಗೆ ಚಾಲನೆ ನೀಡಲಿದ್ದಾರೆ.
ನಗರದ ವಿಠ್ಠಲ್ ಮಲ್ಯ ರಸ್ತೆಯ ಜೆಡಬ್ಲ್ಯು ಮ್ಯಾರಿಯೇಟ್ ಹೋಟೆಲ್‌ನಲ್ಲಿ ಅಮೆರಿಕದ ವಿದೇಶಾಂಗ ವಾಣಿಜ್ಯ ವ್ಯವಹಾರಗಳ ಸೇವಾ ಕಚೇರಿ ಇದ್ದು, ಅದಕ್ಕೆ ಹೊಂದಿಕೊಂಡಂತೆಯೇ ನೂತನ ಕಾನ್ಸುಲೇಟ್ ಆರಂಭಿಸಲಾಗುತ್ತಿದೆ.
ಇದು ತಾತ್ಕಾಲಿಕ ಕಚೇರಿಯಾಗಿದ್ದು, ಮುಂದಿನ ದಿನಗಳಲ್ಲಿ ಹೊಸ ಕಚೇರಿಗೆ ಕಾನ್ಸುಲೇಟ್ ಸ್ಥಳಾಂತರಗೊಳ್ಳಲಿದೆ ಎಂದು ವರದಿಯಾಗಿದೆ.
ಬಹು ನಿರೀಕ್ಷಿತ ಕಾನ್ಸುಲೇಟ್ ಕಚೇರಿ ಆರಂಭಗೊಳ್ಳುತ್ತಿದ್ದಂತೆ ಅದರ ಕ್ರೆಡಿಟ್ ಪಡೆಯಲುಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಿತ್ತಾಟ ಶುರುವಾಗಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕಾನ್ಸುಲೇಟ್ ಕಚೇರಿ ಆರಂಭದ ಸಂಪೂರ್ಣ ಕ್ರೆಡಿಟ್ ಕೇಂದ್ರ ಸರ್ಕಾರಕ್ಕೆ ಕೊಟ್ಟರೆ, ಕರ್ನಾಟಕ ಸರ್ಕಾರದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನಾವು ಮಾಡಿದ್ದು ಎನ್ನುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ಕಾನ್ಸುಲೇಟ್ ಕಚೇರಿ ತೆರೆಯುವ ಕನಸು ನನಸಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಶ್ಲಾಘಿಸಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ, ಸೂರ್ಯ ಅವರು 2019 ರಿಂದ ಕಾನ್ಸುಲೇಟ್ ಪರವಾಗಿ ವಕಾಲತ್ತು ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮಾರ್ಚ್ 2023ರಲ್ಲಿ ಬೆಂಗಳೂರು ಭೇಟಿಯ ಸಮಯದಲ್ಲಿ ಸಚಿವ ಜೈಶಂಕರ್ ಅವರಿಗೆ ಬರೆದ ಪತ್ರ ಮತ್ತು ಚರ್ಚೆಗಳನ್ನು ಉಲ್ಲೇಖಿಸಿದ್ದಾರೆ.
ಸಚಿವ ಜೈಶಂಕರ್ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ‘ಮೈಸೂರು ಪಾಕ್’ ಕೊಟ್ಟು ಧನ್ಯವಾದ ಸಲ್ಲಿಸಿದ್ದಾರೆ. “ಪ್ರಧಾನ ಮಂತ್ರಿಗಳು ಮತ್ತು ನಿಮ್ಮಿಂದ ಇದು ಸಾಕಾರಾವಾಯಿತು” ಎಂದಿದ್ದಾರೆ.
My dear Bengaluru,
It’s official. The US Consulate is opening on January 17th.
It’s been made possible only and only because of PM @narendramodi and EAM @DrSJaishankar’s efforts.
What better way to thank our EAM than with our own Mysuru Pak! pic.twitter.com/uo85y2vsfl
— Tejasvi Surya (@Tejasvi_Surya) January 15, 2025
ತೇಜಸ್ವಿ ಸೂರ್ಯ ಅವರಿಗೆ ತಿರುಗೇಟು ಕೊಟ್ಟಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ” ಬಿಜೆಪಿ ಅನಗತ್ಯ ಕ್ರೆಡಿಟ್ ಪಡೆದು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ. ಹೂಡಿಕೆ ಮತ್ತು ವ್ಯಾಪಾರಕ್ಕೆ ಜಾಗತಿಕ ಕೇಂದ್ರವಾಗಿರುವ ಬೆಂಗಳೂರಿನ ಸ್ಥಾನಮಾನವು ರಾಜಕೀಯ ಪ್ರಭಾವವನ್ನು ಲೆಕ್ಕಿಸದೆ ಸ್ವಾಭಾವಿಕವಾಗಿಯೇ ಅಮೆರಿಕದ ದೂತಾವಾಸಕ್ಕೆ ಸೂಕ್ತ ಸ್ಥಳವಾಗಿದೆ ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು, “ಗುಜರಾತ್‌ನಲ್ಲಿ ಕಾನ್ಸುಲೇಟ್ ಕಚೇರಿ ಸ್ಥಾಪಿಸಲು ಆದ್ಯತೆ ನೀಡಬೇಕು ಎಂಬ ಸುಪ್ರೀಂ ನಾಯಕನ ಒತ್ತಡವು ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ತೆರೆಯಲು ಹೇಗೆ ವಿಳಂಬವಾಯಿತು ಎಂಬುದರ ಕುರಿತು ಬಿಜೆಪಿ ಸಂಸದರು ಮತ್ತು ಸಚಿವ ಜೈಶಂಕರ್ ಅವರು ಪ್ರಾಮಾಣಿಕವಾಗಿ ಮಾತನಾಡಬೇಕು” ಎಂದು ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ಮೋದಿಯವ ಹೆಸರನ್ನು ಉಲ್ಲೇಖಿಸದೆ ಟಾಂಗ್ ಕೊಟ್ಟಿದ್ದಾರೆ.
“ಕಾನ್ಸುಲೇಟ್ ಸ್ಥಾಪಿಸುವ ನಿರ್ಧಾರವು ಆರ್ಥಿಕ ಆದ್ಯತೆಗಳ ಆಧಾರದ ಮೇಲೆ ಸರ್ಕಾರಗಳ ನಡುವಿನ ಪರಸ್ಪರ ಒಪ್ಪಂದವಾಗಿದೆಯೇ ಹೊರತು, ಬಿಜೆಪಿ ಸಂಸದರು ಅಥವಾ ವಿದೇಶಾಂಗ ಸಚಿವರ ಆಶಯಗಳು ಅಥವಾ ವೈಯಕ್ತಿಕ ಆದ್ಯತೆಗಳ ಮೇಲೆ ಅಲ್ಲ” ಎಂದು ಪ್ರಿಯಾಂಕ್ ಖರ್ಗೆ ಒತ್ತಿ ಹೇಳಿದ್ದಾರೆ.
The decision to establish consulates is made by the respective governments based on the economic significance of a city, not on the whims or personal preferences of BJP MPs or the External Affairs Minister.
I am confident that Mr. @DrSJaishankar, who served the nation as an…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 16, 2025
ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗ್ಯಾರ್‌ಸೆಟ್ ಅವರು ಡಿಸೆಂಬರ್ 2024ರಲ್ಲಿ ನವದೆಹಲಿಯಲ್ಲಿ ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಆಯೋಜಿಸಿದ್ದ ಅಧಿವೇಶನದಲ್ಲಿ 2025ರಲ್ಲಿ ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ತೆರೆಯಲಾಗುವುದು ಎಂದು ಘೋಷಿಸಿದ್ದರು.
ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ ಅವರು “ಭರವಸೆ ನೀಡಿದಂತೆ ನಡೆದುಕೊಳ್ಳಲಾಗಿದೆ. ಕಳೆದ ಕೆಲವು ವರ್ಷಗಳಿಂದ ನಾನು ಅಮೆರಿಕದ ಪ್ರತಿನಿಧಿಗಳೊಂದಿಗೆ ಚರ್ಚೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ತೆರೆಯುವ ಅಗತ್ಯವನ್ನು ಒತ್ತಿ ಹೇಳುತ್ತಿದ್ದೇನೆ. ಈ ಪ್ರಯತ್ನಗಳು ಫಲಪ್ರದವಾಗುವುದನ್ನು ನೋಡಲು ಸಂತೋಷವಾಗುತ್ತಿದೆ” ಎಂದು ಹೇಳಿದ್ದರು.
ಕಾನ್ಸುಲೇಟ್ ಉದ್ಘಾಟನೆ ಮಹತ್ವದ್ದಾಗಿದ್ದರೂ, ಆರಂಭದಲ್ಲಿ ಇದು ಅಮೆರಿಕದ ನಾಗರಿಕರು ಮತ್ತು ವ್ಯವಹಾರಗಳಿಗೆ ಮಾತ್ರ ಸೇವೆ ಸಲ್ಲಿಸಲಿದೆ. ವೀಸಾ ಸಂಸ್ಕರಣಾ ಸೇವೆಗಳು ಆರಂಭವಾಗಲು ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತದೆ ಎಂದು ಖರ್ಗೆ ತಿಳಿಸಿದ್ದಾರೆ. ಬಿಜೆಪಿ ನಾಯಕರು ಅದರ ಸಿದ್ಧತೆ ಮತ್ತು ವ್ಯಾಪ್ತಿಯ ಬಗ್ಗೆ ಜನರ ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಜನರು ಯುಎಸ್ ವೀಸಾ ಮತ್ತು ಇತರ ಸೇವೆಗಳನ್ನು ಪಡೆಯುವ ಸಲುವಾಗು ಮುಂಬೈ, ಹೈದರಾಬಾದ್ ಮತ್ತು ಚೆನ್ನೈಗೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ತೆರೆಯಲಾಗುತ್ತಿದೆ.


