ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳ) ಕಾಯ್ದೆ-1991ರ ಸಾವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿರೋಧಿಸಿ, ಮಧ್ಯಂತರ ಅಥವಾ ಮಧ್ಯ ಪ್ರವೇಶ ಅರ್ಜಿಯನ್ನು ಕಾಂಗ್ರೆಸ್ ಗುರುವಾರ (ಜ.16) ಸಲ್ಲಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಆರಾಧಾನಾ ಸ್ಥಳಗಳ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ಅದು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಮಧ್ಯ ಪ್ರವೇಶಿಸಿದ್ದು, ಅಶ್ವಿನಿ ಕುಮಾರ್ ಅವರ ಅರ್ಜಿ ತಿರಸ್ಕರಿಸುವಂತೆ ಕೋರಿದೆ.
ಭಾರತ ಜಾತ್ಯತೀತತೆಯನ್ನು ರಕ್ಷಿಸಲು ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆ ಅಗತ್ಯವಿದೆ. ಅದರ ವಿರುದ್ದದ ಅರ್ಜಿಯು ದೇಶದ ಜಾತ್ಯತೀತ ತತ್ವಗಳನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಕಾಂಗ್ರೆಸ್ ತನ್ನ ಅರ್ಜಿಯಲ್ಲಿ ಹೇಳಿರುವುದಾಗಿ ಬಾರ್ & ಬೆಂಚ್ ವರದಿ ವಿವರಿಸಿದೆ.
“ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆಯ ಸಾಂವಿಧಾನಿಕ ಮತ್ತು ಸಾಮಾಜಿಕ ಮಹತ್ವವನ್ನು ಒತ್ತಿ ಹೇಳಲು ಈ ವಿಷಯದಲ್ಲಿ ನಾವು ಮಧ್ಯಪ್ರವೇಶಿಸುತ್ತಿದ್ದೇವೆ. ಏಕೆಂದರೆ, ಕಾಯ್ದೆಯಲ್ಲಿ ಯಾವುದೇ ಬದಲಾವಣೆಯಾದರೂ, ಅದು ಭಾರತದ ಕೋಮು ಸಾಮರಸ್ಯ ಮತ್ತು ಜಾತ್ಯತೀತಗೆ ಅಪಾಯವನ್ನುಂಟುಮಾಡಬಹುದು. ರಾಷ್ಟ್ರದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ಉಂಟಾಗಬಹುದು” ಎಂದು ಕಾಂಗ್ರೆಸ್ ತನ್ನ ಅರ್ಜಿಯಲ್ಲಿ ಹೇಳಿದೆ.
ಅರ್ಜಿಯಲ್ಲಿ ಜಾತ್ಯತೀತತೆಯ ವಿಷಯದಲ್ಲಿ ತನ್ನ ಬದ್ಧತೆಯನ್ನು ಕಾಂಗ್ರೆಸ್ ಪುನರುಚ್ಚರಿಸಿದೆ ಮತ್ತು ಜನತಾ ದಳದೊಂದಿಗೆ ಲೋಕಸಭೆಯಲ್ಲಿ ಬಹುಮತ ಪಡೆದಾಗ ಆರಾಧನಾ ಸ್ಥಳಗಳ ಕಾಯ್ದೆ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವುದಾಗಿ ತಿಳಿಸಿದೆ.
ಆರಾಧನಾ ಸ್ಥಳಗಳ ಸಾವಿಂಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಯಲ್ಲಿ ಕಾಯ್ದೆಯು ಹಿಂದೂ, ಸಿಖ್, ಜೈನ ಮತ್ತು ಬೌದ್ಧ ಧರ್ಮದವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಕಾಯ್ದೆಯು ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ. ಅದು ಯಾವುದೇ ನಿರ್ಧಿಷ್ಟ ಧರ್ಮ ಮತ್ತು ಸಮುದಾಯವನ್ನು ಒಳಗೊಂಡಿಲ್ಲ ಎಂದು ಕಾಂಗ್ರೆಸ್ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ : ಬಿಜೆಪಿ-ಕಾಂಗ್ರೆಸ್ ನಡುವೆ ಕ್ರೆಡಿಟ್ ಕಿತ್ತಾಟ


