ಹೇಮಾ ಸಮಿತಿ ವರದಿ ಬಿಡುಗಡೆಯಾದ ನಂತರ ಇಲ್ಲಿಯವರೆಗೆ ಒಟ್ಟು 40 ಪ್ರಥಮ ಮಾಹಿತಿ ವರದಿಗಳು (ಎಫ್‌ಐಆರ್) ದಾಖಲಾಗಿವೆ ಎಂದು ಕೇರಳ ರಾಜ್ಯ ಸರ್ಕಾರ ಜನವರಿ 16 ಗುರುವಾರ ಹೈಕೋರ್ಟ್‌ಗೆ ತಿಳಿಸಿದೆ.
ಸರ್ಕಾರದ ಪರ ಅಡ್ವೊಕೇಟ್ ಜನರಲ್ (ಎಜಿ) ಗೋಪಾಲಕೃಷ್ಣ ಕುರುಪ್ ಅವರು ನ್ಯಾಯಮೂರ್ತಿಗಳಾದ ಎ.ಕೆ ಜಯಶಂಕರನ್ ನಂಬಿಯಾರ್ ಮತ್ತು ಸಿಎಸ್ ಸುಧಾ ಅವರನ್ನೊಳಗೊಂಡ ಹೈಕೋರ್ಟ್‌ನ ವಿಶೇಷ ಪೀಠಕ್ಕೆ ವಿವರಗಳನ್ನೊಳಗೊಂಡ ಟಿಪ್ಪಣಿಯನ್ನು ಸಲ್ಲಿಸಿದ್ದಾರೆ.
ಹೇಮಾ ಸಮಿತಿಯ ವರದಿಗೆ ಸಂಬಂಧಿಸಿದ ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಸೆಪ್ಟೆಂಬರ್ 5 ರಂದು ಹೈಕೋರ್ಟ್‌ನಲ್ಲಿ ವಿಶೇಷ ಪೀಠ ರಚಿಸಲಾಗಿದೆ.
ಆಗಸ್ಟ್ 2024 ರಲ್ಲಿ ಬಿಡುಗಡೆಯಾದ ಹೇಮಾ ಸಮಿತಿ ವರದಿಯು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ನಡೆದ ಮಹಿಳಾ ಕಲಾವಿದರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಬಹಿರಂಗಪಡಿಸಿತ್ತು.
ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರಂಭದಲ್ಲಿ 35 ಪ್ರಕರಣಗಳನ್ನು ದಾಖಲಿಸಿತ್ತು. ನಂತರ ಲೈಂಗಿಕ ಕಿರುಕುಳದ ದೂರುಗಳನ್ನು ಸ್ವೀಕರಿಸಲು ನೇಮಿಸಲಾದ ನೋಡಲ್ ಅಧಿಕಾರಿಗೆ ಹೆಚ್ಚುವರಿಯಾಗಿ ಎಂಟು ದೂರುಗಳು ಸಲ್ಲಿಕೆಯಾಗಿದೆ. ಅದನ್ನು ಆಧರಿಸಿ ಇನ್ನೂ ಐದು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಎಜಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಪ್ರಕರಣದ ಅಮಿಕಸ್ ಕ್ಯೂರಿ ಮಿಥಾ ಸುಧೀಂದ್ರನ್ ಅವರು ನ್ಯಾಯಯುತ ಕೆಲಸದ ಸ್ಥಳದ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಪ್ರಸ್ತಾವಿತ ಕಾನೂನಿನ ಕರಡನ್ನು ಒಳಗೊಂಡಿರುವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
‘ಕೇರಳ ಮನರಂಜನಾ ಉದ್ಯಮ (ಸಮಾನತೆ ಮತ್ತು ಸಬಲೀಕರಣ) ಕಾಯ್ದೆ’ ಎಂಬ ಶೀರ್ಷಿಕೆಯ ಕರಡು ಕಾನೂನು ಕೆಲಸದ ಪರಿಸ್ಥಿತಿಗಳು, ನೇಮಕಾತಿ ಪದ್ಧತಿಗಳು ಮತ್ತು ವೇತನದಂತಹ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಕರಡು ಕಾನೂನನ್ನು ಪರಿಶೀಲಿಸಿ ಪ್ರತಿಕ್ರಿಯೆ ನೀಡಲಿದೆ ಎಂದು ಎಜಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನ್ಯಾಯಾಲಯ ಕೂಡ ಕರಡು ಪ್ರತಿಯನ್ನು ಪರಿಶೀಲಿಸುವುದಾಗಿ ಹೇಳಿದೆ. ಇದಲ್ಲದೆ, ಮಹಿಳೆಯರು ಬಹು ಹಂತಗಳಲ್ಲಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ನ್ಯಾಯಾಲಯವು ಗಮನಿಸಿದೆ ಮತ್ತು ಸಿನಿಮಾ ಇಂಡಸ್ಟ್ರಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ತಾರತಮ್ಯವನ್ನು ಪರಿಹರಿಸಲು ಬಹರೂಪಿ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ನಿರ್ದೇಶಿಸಿದೆ.
“ನಾವು ಸ್ವಲ್ಪ ಮಟ್ಟಿಗೆ ತಾರತಮ್ಯವನ್ನು ನಿಭಾಯಿಸಿದ್ದರೂ, ಬಹುರೂಪದ ತಾರತಮ್ಯವನ್ನು ಸಾಮಾನ್ಯವಾಗಿ ಪರಿಹರಿಸಲಾಗುವುದಿಲ್ಲ. ಬಹು ಹಂತಗಳಲ್ಲಿ ಬಹುರೂಪದ ತಾರತಮ್ಯದಲ್ಲಿ ದೊಡ್ಡ ಅಂತರವಿದೆ. ಉದಾ : ದಲಿತ ಮಹಿಳೆಯಂತೆ. ಆಕೆ (ದಲಿತ ಮಹಿಳೆ) ಮಹಿಳೆ ಎಂಬ ಕಾರಣಕ್ಕೆ ಮತ್ತು ಸಾಮಾಜಿಕ ಸ್ಥಾನಮಾನ ಕಾರಣಕ್ಕೆ ಬಹು ಹಂತಗಳಲ್ಲಿ ತಾರತಮ್ಯವನ್ನು ಎದುರಿಸುತ್ತಾರೆ. ಕೇರಳದಲ್ಲಿ ಈ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ, ಉತ್ತರದ ರಾಜ್ಯಗಳಲ್ಲಿ ಇದು ತುಂಬಾ ದೊಡ್ಡ ಮಟ್ಟದಲ್ಲಿದೆ. ಮಹಿಳೆಯರು ಎದುರಿಸುತ್ತಿರುವ ಆರ್ಥಿಕ ಅಸಮಾನತೆ ಇತ್ಯಾದಿಗಳನ್ನೂ ನಾವು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಫೆಬ್ರವರಿ 6ಕ್ಕೆ ಮುಂದೂಡಿದೆ. ಈ ಪ್ರಕರಣದ ಮೊದಲ ವಿಚಾರಣೆ ಸೆಪ್ಟೆಂಬರ್ 10, 2024 ರಂದು ನಡೆದಿತ್ತು. ಆಗ ಹೇಮಾ ಸಮಿತಿಯ ವರದಿ ಸಂಬಂಧ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.
ಕೇರಳ | ಟ್ರಾನ್ಸ್‌ಜೆಂಡರ್‌ಗಳಿಗೆ ಮೀಸಲಾತಿ; 6 ತಿಂಗಳ ಗಡುವು ನೀಡಿದ ಹೈಕೋರ್ಟ್


