ಕೇಂದ್ರ ಸರ್ಕಾರದ ತಂಡವೊಂದು ಶನಿವಾರ ತಮಗೆ ಪ್ರಸ್ತಾವನೆಯೊಂದನ್ನು ನೀಡಿದ್ದು, ಅದನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಖಾನೌರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಹೇಳಿದ್ದಾರೆ. ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿರುವ ಭಾರತೀಯ ಅರಣ್ಯ ಸೇವಾ ಅಧಿಕಾರಿ ಪ್ರಿಯ ರಂಜನ್ ನೇತೃತ್ವದ ಉನ್ನತ ಮಟ್ಟದ ಕೇಂದ್ರ ಸರ್ಕಾರದ ತಂಡವು ಖಾನೌರಿ ಗಡಿಗೆ ಭೇಟಿ ನೀಡಿ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ಭೇಟಿ ಮಾಡಿದೆ ಎಂದು ತಿಳಿದು ಬಂದಿದೆ. ಪ್ರತಿಭಟನಾ ನಿರತ
ದಲ್ಲೆವಾಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಆಮರಣಾಂತ ಉಪವಾಸ 54 ನೇ ದಿನಕ್ಕೆ ಕಾಲಿಟ್ಟಿದೆ. ದಲ್ಲೆವಾಲ್ ಅವರ ಆರೋಗ್ಯದ ಬಗ್ಗೆ ತಮಗೆ ಕಾಳಜಿಯಿದ್ದು, ಅವರ ಸ್ಥಿತಿಯ ಬಗ್ಗೆ ವಿಚಾರಿಸಲು ಬಂದಿರುವುದಾಗಿ ರಂಜನ್ ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಕೇಂದ್ರದ ಅಧಿಕಾರಿಗಳು ದಲ್ಲೆವಾಲ್ ಅವರನ್ನು ಭೇಟಿಯಾಗಿದ್ದು, ಅವರು ಎರಡೂ ರೈತ ಸಂಘಗಳಾದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ನಾಯಕರೊಂದಿಗೆ ಮಾತನಾಡಲು ಕೇಳಿಕೊಂಡಿದ್ದಾರೆ ಎಂದು ರೈತ ನಾಯಕ ಅಭಿಮನ್ಯು ಕೊಹರ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರೈತರ ಬೇಡಿಕೆಗಳ ಕುರಿತು ಎರಡೂ ಸಂಘಗಳ ನಾಯಕರು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಎರಡು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ರೈತ ನಾಯಕ ಕಾಕಾ ಸಿಂಗ್ ಕೋಟಾಲ ಸಭೆಯಿಂದ ಹೊರಬಂದು ಅಧಿಕಾರಿಗಳು ತಮಗೆ ಪ್ರಸ್ತಾವನೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. “ಎರಡೂ ಸಂಘಟನೆಗಳ ನಾಯಕರು ಇದರ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ” ಎಂದು ಅವರು ಹೇಳಿದ್ದಾರೆ. ಪ್ರತಿಭಟನಾ ನಿರತ
ಭಾನುವಾರ ಮುಂಜಾನೆ, 2020-21ರ ರೈತರ ಪ್ರತಿಭಟನೆಗೆ ನೇತೃತ್ವ ವಹಿಸಿದ್ದ ರೈತ ಸಂಘಗಳ ಒಕ್ಕೂಟವಾದ ಎಸ್‌ಕೆಎಂ (ರಾಜಕೀಯೇತರ) ಮತ್ತು ಕೆಎಂಎಂ ನಾಯಕರ ನಡುವೆ ಮತ್ತೊಮ್ಮೆ ಒಗ್ಗಟ್ಟು ಮೂಡಿಸಲು ನಡೆದ ಎರಡನೇ ಸಭೆ ಕೂಡಾ ವಿಫಲವಾಗಿದೆ ಎಂದು ವರದಿಯಾಗಿದೆ. ಪತ್ರಾನ್‌ನಲ್ಲಿ ನಡೆದ ರೈತ ಸಂಘಗಳ ನಡುವಿನ ಈ ಸಭೆಯು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಅಂತಿಮಗೊಳಿಸುವ ಉದ್ದೇಶವನ್ನು ಹೊಂದಿತ್ತು.
ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯ ನಂತರ, ಕಿಸಾನ್ ಮಜ್ದೂರ್ ಮೋರ್ಚಾದ ಸಂಯೋಜಕ ಸರ್ವಾನ್ ಸಿಂಗ್ ಪಂಧೇರ್, ಅವರು ಕನಿಷ್ಠ ಏಕತೆಯತ್ತ ಹೆಜ್ಜೆ ಇಟ್ಟಿದ್ದಾರೆ ಆದರೆ ನಮ್ಮ ಉದ್ದೇಶ ಗರಿಷ್ಠ ಏಕತೆ ಎಂದು ಹೇಳಿಕೊಂಡಿದ್ದಾರೆ. ರೈತ ನಾಯಕ ದಲ್ಲೆವಾಲ್ ಅವರ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಪರಿಗಣಿಸಿ ಮುಂದಿನ ಸಭೆಯನ್ನು ಮುಂದೂಡುವಂತೆ ಅವರು ಎಸ್‌ಕೆಎಂ ಆರು ಸದಸ್ಯರ ಸಮಿತಿಯನ್ನು ಒತ್ತಾಯಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಆಮರಣಾಂತ ಉಪವಾಸ ನಡೆಸುತ್ತಿರುವ ರೈತ ನಾಯಕ ಸುಖಜಿತ್ ಸಿಂಗ್ ಹಾರ್ಡೋ ಝಾಂಡೆ ಅವರು ಅನಾರೋಗ್ಯದಿಂದ ಸಭೆಯಿಂದ ಹೊರನಡೆಯಬೇಕಾಯಿತು. ಇದಲ್ಲದೆ, ರೈತ ನಾಯಕ ದಲ್ಲೆವಾಲ್ ಅವರ ಆರೋಗ್ಯ ಹದಗೆಟ್ಟ ಕಾರಣ ಸಭೆಯನ್ನು ಮೊಟಕುಗೊಳಿಸಲಾಯಿತು. ಜನವರಿ 24 ರಂದು ನಡೆಯಲಿರುವ ಎಸ್‌ಕೆಎಂ ಸಾಮಾನ್ಯ ಸಭೆಯ ನಂತರ ಮುಂದಿನ ಸಭೆಯ ದಿನಾಂಕವನ್ನು ಘೋಷಿಸಲಾಗುವುದು.
ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖ ರೈತ ನಾಯಕರಲ್ಲಿ ಜೋಗಿಂದರ್ ಸಿಂಗ್ ಉಗ್ರನ್, ಬಲ್ಬೀರ್ ಸಿಂಗ್ ರಾಜೇವಾಲ್, ದರ್ಶನ್ ಪಾಲ್ ಮತ್ತು ಸರ್ವಾನ್ ಸಿಂಗ್ ಪಂಧೇರ್ ಸೇರಿದ್ದಾರೆ. ಎಂಎಸ್‌ಪಿಗೆ ಕಾನೂನುಬದ್ಧ ಖಾತರಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ ಮತ್ತು ಸಾಲ ಮನ್ನಾ ಸೇರಿದಂತೆ ನಿರ್ಣಾಯಕ ಬೇಡಿಕೆಗಳ ಸುತ್ತ ಚರ್ಚೆಗಳು ನಡೆದಿದ್ದವು.
ಇದನ್ನೂಓದಿ: ವೈದ್ಯನ ವಿರುದ್ಧ ದಲಿತ ಮಹಿಳೆಯಿಂದ ಲೈಂಗಿಕ ಕಿರುಕುಳ ದೂರು; ಎಸ್‌ಪಿಯಿಂದ ವಿವರಣೆ ಕೇಳಿದ ಎನ್‌ಸಿಎಸ್‌ಸಿ


