ಮುಂಬೈ: ಮುಂಬೈ ಪೊಲೀಸರು ನಟ ಸೈಫ್ ಅಲಿ ಖಾನ್ ಅವರ ಚಾಕು ಇರಿತ ಪ್ರಕರಣದ ಪ್ರಮುಖ ಆರೋಪಿಯನ್ನು ಸುಮಾರು ಮೂರು ದಿನಗಳ ಕಾಲ ನಡೆದ ಶೋಧದ ನಂತರ ಮಹಾರಾಷ್ಟ್ರದ ಥಾಣೆಯಲ್ಲಿ ಭಾನುವಾರ ಮುಂಜಾನೆ ಬಂಧಿಸಿದ್ದಾರೆ.
ಬಂಧಿತ 30 ವರ್ಷದ ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್, ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ನಂತರ ಮುಂಬೈನಲ್ಲಿ ‘ವಿಜಯ್ ದಾಸ್’ ಎಂಬ ಹೆಸರನ್ನು ಬದಲಿಸಿಕೊಂಡಿದ್ದನು ಎಂದು ಡಿಸಿಪಿ ಜೋನ್-9 ದೀಕ್ಷಿತ್ ಗೆಡಮ್ ಹೇಳಿದ್ದಾರೆ.
ಬಂಧಿತ ಆರೋಪಿ ಬಾಂಗ್ಲಾದೇಶಿಯಾಗಿದ್ದು, 5-6 ತಿಂಗಳ ಹಿಂದೆ ಮುಂಬೈಗೆ ಬಂದಿದ್ದು, ಅವನು ಕೆಲವು ದಿನಗಳ ಕಾಲ ಮುಂಬೈನಲ್ಲಿ ಮತ್ತು ನಂತರ ಮುಂಬೈ ಸುತ್ತಮುತ್ತ ವಾಸಿಸುತ್ತಿದ್ದನು. ಆರೋಪಿಯು ಮನೆಗೆಲಸದ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ಅವರು ತಿಳಿಸಿದ್ದಾರೆ.
ಜನವರಿ 16ರ ಗುರುವಾರ ಬೆಳಗಿನ ಜಾವ ಬಾಂದ್ರಾ ಪ್ರದೇಶದ ಸತ್ಗುರು ಶರಣ್ ಕಟ್ಟಡದಲ್ಲಿರುವ ಸೈಫ್ ಅಲಿ ಖಾನ್ ಅವರ 12ನೇ ಮಹಡಿಯ ಅಪಾರ್ಟ್‌ಮೆಂಟ್‌ಗೆ ಆರೋಪಿ ನುಗ್ಗಿದ್ದನು. ದರೋಡೆ ಮಾಡುವ ಉದ್ದೇಶದಿಂದ ಮನೆಗೆ ಪ್ರವೇಶಿಸಿದ ಶರೀಫುಲ್, ನಟನೊಂದಿಗಿನ ಜಗಳದಲ್ಲಿ ಸೈಫ್‌ಗೆ ಹಲವು ಬಾರಿ ಇರಿದಿದ್ದ. ನಂತರ ಆತನು ಸ್ಥಳದಿಂದ ಪರಾರಿಯಾಗಿದ್ದನು.
ಆರೋಪಿಯು ವಿಜಯ್ ದಾಸ್, ಬಿಜೋಯ್ ದಾಸ್ ಮತ್ತು ಮೊಹಮ್ಮದ್ ಇಲಿಯಾಸ್ ಸೇರಿದಂತೆ ಹಲವು ಹೆಸರುಗಳನ್ನು ಹೊಂದಿದ್ದನು ಎಂದು ವರದಿಯಾಗಿದೆ.
ಮುಂಬೈ ಪೊಲೀಸರು ಆರೋಪಿಯನ್ನು ಹೇಗೆ ಬಂಧಿಸಿದರು?
ನಗರ ಅಪರಾಧ ವಿಭಾಗ ಮತ್ತು ಮುಂಬೈ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು 20 ತಂಡಗಳನ್ನು ರಚಿಸಿದ್ದರು. ಈ ಘಟನೆ ಸಂಬಂಧ ಅವರು ಈಗ ಸಂಬಂಧವಿಲ್ಲದ ಹಲವಾರು ಶಂಕಿತರನ್ನು ಬಂಧಿಸಿದ್ದರು.
ತನಿಖೆಯ ಸಮಯದಲ್ಲಿ ಆರೋಪಿಯು ದಾದರ್ ರೈಲ್ವೆ ನಿಲ್ದಾಣದ ಹೊರಗೆ ಮೂರು ಬಾರಿ ಕಾಣಿಸಿಕೊಂಡಿದ್ದಾನೆ ಮತ್ತು ಅವನು ವರ್ಲಿ ಕೋಳಿವಾಡಕ್ಕೆ ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ನೂರಾರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ನಂತರ ದಾಳಿಕೋರನು ಆ ಪ್ರದೇಶದ ಕಾರ್ಮಿಕ ಗುತ್ತಿಗೆದಾರನನ್ನು ಭೇಟಿ ಮಾಡಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಕಾರ್ಮಿಕ ಗುತ್ತಿಗೆದಾರರನನ್ನು ಪೊಲೀಸರು ಸಂಪರ್ಕಿಸಿದಾಗ 30 ವರ್ಷದ ಆರೋಪಿಯ ಬಗ್ಗೆ ಎಲ್ಲಾ ವಿವರಗಳನ್ನು ಪಡೆದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಗುತ್ತಿಗೆದಾರನ ನಿರ್ದೇಶನದ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಥಾಣೆ ಪಶ್ಚಿಮದ ಹಿರಾನಂದಾನಿ ಎಸ್ಟೇಟ್‌ನಲ್ಲಿರುವ ಟಿಸಿಎಸ್ ಕಾಲ್ ಸೆಂಟರ್‌ನ ಹಿಂದಿರುವ ಮೆಟ್ರೋ ನಿರ್ಮಾಣ ಸ್ಥಳದ ಬಳಿಯ ಅರಣ್ಯ ಪ್ರದೇಶದಲ್ಲಿರುವ ಕಾರ್ಮಿಕ ಶಿಬಿರದಲ್ಲಿ ಪತ್ತೆಹಚ್ಚಿದರು.
ಈ ಹಿಂದೆ ಆರೋಪಿಯು ಥಾಣೆ ಮೂಲದ ಹೋಟೆಲ್‌ನಲ್ಲಿಯೂ ಕೆಲಸ ಮಾಡುತ್ತಿದ್ದನು ಮತ್ತು ಇಲ್ಲಿಯವರೆಗೆ ಅವನ ಹೆಸರಿನಲ್ಲಿ ಯಾವುದೇ ಕ್ರಿಮಿನಲ್ ದಾಖಲೆಗಳು ಕಂಡುಬಂದಿಲ್ಲವೆನ್ನಲಾಗಿದೆ.
ಆರೋಪಿಯು ಸೈಫ್ ಅಲಿ ಖಾನ್ ಅವರ ಅಪಾರ್ಟ್ಮೆಂಟ್ ಗೆ ಪ್ರವೇಶಿಸಿದಾಗ ಅವನನ್ನು ನಟನ ಉದ್ಯೋಗಿ ಎಲಿಯಮ್ಮ ಫಿಲಿಪ್ಸ್ ಅಲಿಯಾಸ್ ಲಿಮಾ ಮೊದಲು ನೋಡಿದವರಾಗಿದ್ದಾರೆ. ಅವಳು ಅವನನ್ನು ತಡೆಯಲು ಪ್ರಯತ್ನಿಸಿದಳು. ಆದರೆ ಅವನೊಂದಿಗಿನ ಜಗಳದಲ್ಲಿ ಅವಳ ಕೈಗೆ ಗಾಯಗಳಾಗಿದ್ದವು. ಈ ಸಂದರ್ಭ ಸೈಫ್ ಅಲಿ ಖಾನ್ ಅವರಿಗೆ ಆಕೆಯ ಕಿರುಚಾಟ ಕೇಳಿಬಂತು. ನಂತರ ಅವರು ಮಧ್ಯಪ್ರವೇಶಿಸಿ ದಾಳಿಕೋರನೊಂದಿಗೆ ಹೋರಾಡಿದರು, ಈ ಪ್ರಕ್ರಿಯೆಯಲ್ಲಿ ಅವರು ತೀವ್ರವಾಗಿ ಗಾಯಗೊಂಡರು.
ನಟನಿಗೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಅನೇಕ ಶಸ್ತ್ರಚಿಕಿತ್ಸೆಗಳು ನಡೆದವು ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಶುಕ್ರವಾರ ಅವರನ್ನು ತೀವ್ರ ನಿಗಾ ಘಟಕದಿಂದ (ಐಸಿಯು) ವಿಶೇಷ ಕೋಣೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಸೋಮವಾರದೊಳಗೆ ಸೈಫ್ ಅಲಿ ಖಾನ್ ಅವರನ್ನು ಡಿಸ್ಚಾರ್ಜ್ ಮಾಡಬಹುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ವರ್ಷಗಳ ಕೆಳಗೆ ವೈದ್ಯನ ವಿರುದ್ಧ ದೂರು ನೀಡಿದ ದಲಿತ ನರ್ಸ್: ಈಗ ವೈದ್ಯನ ಪ್ರತಿದೂರು


