ಸುಮಾರು ಒಂದೂವರೆ ವರ್ಷಗಳ ಭೀಕರ ಯುದ್ದದ ಬಳಿಕ ಗಾಝಾದಲ್ಲಿ ಕದನ ವಿರಾಮ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಒಪ್ಪಂದಂತೆ ಒತ್ತೆಯಾಳುಗಳು ಮತ್ತು ಬಂಧಿತರ ಬಿಡುಗಡೆಯಾಗಿದೆ.
ಕದನ ವಿರಾಮದ ಮೊದಲ ಹಂತವಾಗಿ ಭಾನುವಾರ (ಜ.19) ಹಮಾಸ್ ಗುಂಪು 3 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಸೋಮವಾರ (ಜ.20) ಇಸ್ರೇಲ್ 90 ಮಂದಿ ಬಂಧಿತ ಪ್ಯಾಲೆಸ್ತೀನಿಯರನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.

ಈ ಮೂಲಕ 46ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯರನ್ನು ಬಲಿ ತೆಗೆದುಕೊಂಡ ಇಸ್ರೇಲ್‌ನ ನಿರಂತರ ಆಕ್ರಮಣ ಶಾಶ್ವತವಾಗಿ ಕೊನೆಗೊಳ್ಳುವ ಆಶಾ ಭಾವನೆ ಮೂಡಿದೆ.
ಹಮಾಸ್ ಭಾನುವಾರ ಬಿಡುಗಡೆ ಮಾಡಿರುವ ಒತ್ತೆಯಾಳುಗಳಲ್ಲಿ ಮೂವರೂ ಮಹಿಳೆಯರು. ಕದನ ವಿರಾಮದ ಮೊದಲ ಹಂತವಾಗಿ ಮುಂದಿನ 6 ವಾರಗಳಲ್ಲಿ ಹಮಾಸ್ ಒಟ್ಟು 33 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಬಂಧಿತರನ್ನು ಬಿಡುಗಡೆ ಮಾಡಬೇಕಿದೆ.
ಅಕ್ಟೋಬರ್ 7,2023ರಂದು ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಟೆಲ್ ಅವೀವ್‌ನ ನೋವಾ ಸಂಗೀತ ಉತ್ಸವದಿಂದ ಅಪಹರಿಸಲ್ಪಟ್ಟ 24 ವರ್ಷದ ರೋಮಿ ಗೊನೆನ್, ಕಿಬ್ಬುಟ್ಜ್ ಕ್ಫರ್ ಆಝಾದಿಂದ ಅಪಹರಿಸಲ್ಪಟ್ಟ 28 ವರ್ಷದ ಎಮಿಲಿ ಡಮರಿ ಮತ್ತು 31 ವರ್ಷದ ಡೊರೊನ್ ಸ್ಟೈನ್ಬ್ರೆಚರ್ ಎಂಬ ಮೂವರು ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಇವರನ್ನು ಕುಟುಂಬಸ್ಥರು ಮತ್ತು ಇತರರು ಸೇರಿ ಅಪಾರ ಸಂಖ್ಯೆಯಲ್ಲಿ ಜನರು ಸ್ವಾಗತಿಸಿದ್ದಾರೆ.
ಇದೇ ರೀತಿ ಇಸ್ರೇಲ್ ಬಂಧಿಸಿ ಜೈಲಿನಲ್ಲಿಟ್ಟಿದ 90 ಪ್ಯಾಲೆಸ್ತೀನಿಯರು ಕೂಡ ಬಿಡುಗಡೆಯಾಗಿದ್ದಾರೆ. ಅವರನ್ನೂ ಕುಟುಂಬಸ್ಥರು ಮತ್ತು ಇತರರು ಕಣ್ಣೀರು ಹಾಕುತ್ತಾ ಬರಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಮನೆಗಳಿಗೆ ಮರಳುತ್ತಿರುವ ಗಾಝಾ ಜನತೆ
ಕದನ ವಿರಾಮದ ಮೊದಲ ಹಂತ ಜಾರಿಯಾಗುತ್ತಿದ್ದಂತೆ ಗಾಝಾ ಜನತೆ ನಿರಾಶ್ರಿತರ ಶಿಬಿರಗಳಿಂದ ತಮ್ಮ ಮೂಲ ಸ್ಥಳಗಳಿಗೆ ಮರಳುತ್ತಿದ್ದಾರೆ. ಭಾನುವಾರ ಸಾವಿರಾರು ಜನರು ಉತ್ತರ ಗಾಝಾದ ಜಬಲಿಯಾ ಪ್ರದೇಶಕ್ಕೆ ಮರಳುತ್ತಿದ್ದ ದೃಶ್ಯಗಳು ಅಂತಾರಾಷ್ಟ್ರೀಯ ಮಾಧ್ಯಗಳಲ್ಲಿ ಕಂಡು ಬಂದಿವೆ.

15 ತಿಂಗಳ ಇಸ್ರೇಲ್ ಆಕ್ರಮಣದಲ್ಲಿ ತಮ್ಮದೆಲ್ಲವನ್ನೂ ಕಳೆದುಕೊಂಡರೂ, ಕದನ ವಿರಾಮ ಘೋಷಣೆಯಾಗಿರುವುದಕ್ಕೆ ಗಾಝಾ ಜನತೆ ಸಂಭ್ರಮಾಚರಣೆ ಮಾಡಿದ್ದಾರೆ. ದುಖಃದ ನಡುವೆ ಅವರಲ್ಲಿ ಮಂದಹಾಸ ಕಂಡು ಬಂದಿದೆ. ತಮ್ಮ ಮೂಲ ಸ್ಥಳಗಳಿಗೆ ಮರಳಿದ ಅನೇಕರಿಗೆ ತಮ್ಮ ಮನೆಗಳು ಎಲ್ಲಿತ್ತು ಎಂಬುವುದೇ ಗೊತ್ತಾಗುತ್ತಿಲ್ಲ. ಉತ್ತರ ಗಾಝಾ ಸಂಪೂರ್ಣ ಜನ ವಾಸಿಸಲು ಅಸಾಧ್ಯವಾದ ಸ್ಥಿತಿಗೆ ಬದಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಉತ್ತರ ಗಾಝಾದ ಜಬಲಿಯಾ ನಗರ ಇಸ್ರೇಲ್ ಆಕ್ರಮಣಕ್ಕೂ ಮುನ್ನ ಸುಮಾರು 250,000ಕ್ಕೂ ಅಧಿಕ ಜನರ ಅಶ್ರಯ ತಾಣವಾಗಿತ್ತು. ಇಸ್ರೇಲ್ ಈ ನಗರದ ಮೇಲೆ ಹೆಚ್ಚಿನ ದಾಳಿ ನಡೆಸಿದೆ. ಈ ದಾಳಿಗಳಲ್ಲಿ 4,000ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ಹೇಳಿದೆ. ಜಬಲಿಯಾದಲ್ಲಿ ಈಗ ಬರೀ ಕಟ್ಟಡಗಳ ಅವಶೇಷಗಳು ಮಾತ್ರ ಉಳಿದಿವೆ.
ಮಾನವೀಯ ನೆರವು
ಕದನ ವಿರಾಮದ ಒಪ್ಪಂದಂತೆ ಇಸ್ರೇಲ್ ಸೇನೆಯು ಗಾಝಾದ ಬಫರ್ ವಲಯದಿಂದ ಹಂತ ಹಂತವಾಗಿ ಹಿಂದೆ ಸರಿಯಬೇಕು. ಜನರಿಗೆ ಅಗತ್ಯ ಸಾಮಾಗ್ರಿಗಳನ್ನು ಪೂರೈಸುವ ಮಾನವೀಯ ನೆರವಿಗೆ ಅನುವು ಮಾಡಿಕೊಡಬೇಕು.
ವಿಶ್ವಸಂಸ್ಥೆಯ ವಿವಿಧ ತಂಡಗಳು, ಮಾನವ ಹಕ್ಕು ಸಂಘಟನೆ ರೆಡ್ ಕ್ರೆಸೆಂಟ್ ಸೇರಿದಂತೆ ಹಲವರು ಗಾಝಾದ ಜನತೆಯ ಬದುಕನ್ನು ಮರು ರೂಪಿಸಲು ಸಿದ್ದರಾಗಿ ನಿಂತಿದ್ದಾರೆ. ಅಲ್ -ಜಝೀರಾ ವರದಿಯ ಪ್ರಕಾರ, ಕದನ ವಿರಾಮದ ಮೊದಲ ಹಂತವಾಗಿ ಅಗತ್ಯ ಸಾಮಾಗ್ರಿಗಳನ್ನು ಹೊತ್ತ 600ಕ್ಕೂ ಹೆಚ್ಚು ಟ್ರಕ್‌ಗಳು ಭಾನುವಾರ ಗಾಝಾ ಪ್ರವೇಶಿಸಿವೆ.

ಅಕ್ಟೋಬರ್ 7, 2023ರಿಂದ ಇಸ್ರೇಲ್ ನಡೆಸಿದ ಗಾಝಾ ಮೇಲಿನ ಆಕ್ರಮಣದಲ್ಲಿ ಇದುವರೆಗೆ 46,913 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 110,750 ಜನರು ಗಾಯಗೊಂಡಿದ್ದಾರೆ. ಅಕ್ಟೋಬರ್ 7, 2023ರಂದು ಹಮಾಸ್ ನೇತೃತ್ವದ ಗುಂಪುಗಳು ಇಸ್ರೇಲ್‌ನ ಟೆಲ್ ಅವೀವ್ ನಗರದ ಮೇಲೆ ನಡೆಸಿದ ದಾಳಿಯಲ್ಲಿ 1,139 ಜನರು ಸಾವನ್ನಪ್ಪಿದ್ದರು ಮತ್ತು 200ಕ್ಕೂ ಹೆಚ್ಚು ಜನರನ್ನು ಸೆರೆ ಹಿಡಿದ ಹಮಾಸ್ ಒತ್ತೆಯಾಳುಗಳಾಗಿ ಇಟ್ಟುಕೊಂಡಿತ್ತು.
ಅಕ್ರಮ ವಲಸಿಗರ ತಡೆಗೆ ಮಣಿಪುರದಲ್ಲಿ NRC ಜಾರಿಗೆ ಮೈತೇಯಿ ಸಂಘಟನೆ ಒತ್ತಾಯ


